ಹರಪನಹಳ್ಳಿ: ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ಹರಪನಹಳ್ಳಿ ಪಟ್ಟಣದಲ್ಲಿ ಇನ್ನೆರಡು ದಿನಗಳಲ್ಲಿ ಜ್ವರ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ ತಿಳಿಸಿದರು.
ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಾಂತ ಜ್ವರ ಬಂದಂತಹ ರೋಗಿಗಳು ಯಾವುದೇ ಆಸ್ಪತ್ರೆಗೆ ತೆರಳದೆ ಜ್ವರ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಶಂಕಿತರಿಗೆ ಗೃಹಬಂಧನ ವಿಧಿ ಸಲಾಗುವುದು ಎಂದರು.
ಬೇರೆ ಜಿಲ್ಲೆಗಳಿಗೆ ಕೆಲಸಕ್ಕೆ ತೆರಳಿ ಆಗಮಿಸುವಂತಹ ಕಾರ್ಮಿಕರನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇಡಲಾಗುವುದು.ಇದಕ್ಕಾಗಿ ತಾಲೂಕಿನ ಮೂರಾರ್ಜಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಒಟ್ಟು 5 ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಬಂದಂತಹ ಕಾರ್ಮಿಕರಿಗೆ ಪರೀಕ್ಷೆ ನಡೆಸಿ 14 ದಿನಗಳ ಕಾಲ ಇರಿಸಿಕೊಂಡು ನಂತರ ಅವರ ಮನೆಗಳಿಗೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸದ್ಯ ಜ್ವರ ಬಂದಂತಹ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳಿಸಿಕೊಡಬೇಕು. ಪ್ರತಿಯೊಂದು ಆಸ್ಪತ್ರೆಗೆ 30 ಲೀ. ಸ್ಯಾನಿಟೇಜರ್ ಜಿಲ್ಲಾಡಳಿತದಿಂದ ಕಳಿಸಲಾಗುವುದು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಇಟ್ಟುಕೊಳ್ಳಬೇಕು ಎಂದ ಅವರು ಚೆಕ್‌ಪೋಸ್ಟ್ ಗಳಿಗೆ ಟೆಸ್ಟ್‌ಕಿಟ್ ಕೊಡಬೇಕೆಂಬ ಅಧಿಕಾರಿಗಳ ಮನವಿಗೆ ಉತ್ತರಿಸಿದ ಅವರು ಇನ್ನೆರಡು ದಿನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಟೆಸ್ಟ್ ಕಿಟ್ ವಿತರಿಸಲಾಗುವುದು ಎಂದು ತಿಳಿಸಿದರು.
ದಿನಸಿ ಖರೀದಿಗೆ ದಿನದಲ್ಲಿ ಒಂದು ಸಮಯ ನಿಗದಿ ಮಾಡಿಕೊಳ್ಳಬೇಕು. ತರಕಾರಿ ಎಪಿಎಂಸಿ ದರಪಟ್ಟಿಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ. ಕಿರಾಣಿ ಅಂಗಡಿಯವರು ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡಿದ್ದಲ್ಲಿ ಅಂತವರ ವಿರುದ್ದ ಕ್ರಮ ಜರುಗಿಸಬೇಕು. ಅದಿಕಾರಿಗಳು ಕಡ್ಡಾಯವಾಗಿ ಯಾರು ಪೋನ್ ಸ್ವಿಚ್‌ಅಫ್ ಮಾಡುವಂತಿಲ್ಲ. ಒಂದು ವೇಳೆ ಅನಾವಶ್ಯಕವಾಗಿ ಪೋನ್ ಬಂದ್ ಮಾಡಿಕೊಂಡ್ರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಉಪವಿಭಾಗಾಕಾರಿ ವಿ.ಕೆ. ಪ್ರಸನ್ನಕುಮಾರ್, ತಹಶೀಲ್ದಾರ್ ಡಾ| ನಾಗವೇಣಿ, ಡಿವೈಎಸ್ಪಿ ದೊಡ್ಡಮನೆ ಮಲ್ಲೇಶ್, ತಾಪಂ ಇಒ ಅನಂತರಾಜು, ತಾಲೂಕು ಆರೋಗ್ಯಾಧಿಕಾರಿ ಡಾ| ಇನಾಯತ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಎಸ್.ಎನ್. ಮಹೇಶ್, ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ, ಪಿಎಸ್‌ಐ ಸಿ. ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಆನಂದ ಡೊಳ್ಳಿನ, ಬಿಸಿಎಂ ಇಲಾಖೆ ಭೀಮಾನಾಯ್ಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.