ಕೋವಿಡ್ 19 ಕಾರಣಕ್ಕೆ ಅದೆಷ್ಟೋ ಜನರ ನೌಕರಿಗೆ ಕುತ್ತು ಬಂದಿದೆ. ಸಾವಿರಾರು ಜನ ನಿರುದ್ಯೋಗಿಗಳಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮಹಿಳೆಯರು ಸ್ವಉದ್ಯೋಗ ಆರಂಭಿಸಿ ಗೆದ್ದಿರುವುದು ವಿಶೇಷ…
ಲಾಕ್‌ಡೌನ್ ದೆಸೆಯಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ವರ್ಷಗಳಿಂದ ಮಾಡುತ್ತಿದ್ದ ಕೆಲಸ ಇದ್ದಕ್ಕಿದ್ದಂತೆ ಇಲ್ಲ ಎಂದಾಗಿಬಿಟ್ಟರೆ ಮಾಡುವುದೇನು? ಹೀಗೆ ಲಕ್ಷಾಂತರ ಜನರ ಬದುಕು ದುಡಿಮೆಯಿಲ್ಲದೆ ಅಯೋಮಯವಾಗಿ ಬಿಟ್ಟಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರೀದಿಸಿದ ಆಟೋ, ಟ್ಯಾಕ್ಸಿ ಕಾರುಗಳನ್ನು ಮನೆ ಮುಂದೆ ನಿಲ್ಲಿಸಿ ಧೂಳು ಜಾಡಿಸುವುದಷ್ಟೇ ಕೆಲಸವಾಗಿದೆ. ದುಡಿಯುವವನೊಬ್ಬ, ಉಣ್ಣುವ ಬಾಯಿ ಹಲವು ಎಂಬಂಥ ಕಠಿಣ ಪರಿಸ್ಥಿತಿಯನ್ನು ನಿಭಾಯಿಸು ವಲ್ಲಿ, ಕೆಲವು ಸಾಮಾನ್ಯ ಮಹಿಳೆಯರ ಹರಸಾಹಸ ನಮ್ಮೆಲ್ಲರಿಗೂ ಮಾದರಿ.
ಅಂತಹ ಎರಡು ಪ್ರಸಂಗಗಳ ವಿವರ ಇಲ್ಲಿದೆ. ತಳ್ಳು ಗಾಡಿ ಮೇಲೆ ಬಟ್ಟೆ ಇಸ್ತ್ರಿ ಮಾಡುತ್ತಿದ್ದ ರಂಗಪ್ಪನ ನಾಲ್ಕು ಮಕ್ಕಳಲ್ಲಿ, ರತ್ನಾ ಕೂಡಾ ಒಬ್ಬಳು. ಏಳನೇ ಕ್ಲಾಸ್ ಫೇಲ್ ಆಗುತ್ತಿದ್ದಂತೆಯೇ, ಆಟೋ ಓಡಿಸುವ ದೂರದ ಸಂಬಂಧಿ ಯೊಂದಿಗೆ ರತ್ನಾಳ ಮದುವೆ ಆಯಿತು. ನಾಲ್ಕಾರು ವರುಷದಿಂದ ರತ್ನಾ ನನಗೆ ಕಂಡಿರಲಿಲ್ಲ. ಲಾಕ್‌ಡೌನ್ ಆಗಿ ಒಂದು ವಾರವಾಗಿತ್ತಷ್ಟೇ. ಹತ್ತು ಗಂಟೆಗೇ ಏಪ್ರಿಲ್‌ನ ರಣರಣ ಬಿಸಿಲು ಸುಡುತ್ತಿತ್ತು. ಹೊರಗಡೆ ರಸ್ತೆಯಲ್ಲಿ ತುಂಬಾ ಪರಿಚಿತ ಧ್ವನಿ ಕೇಳಿಸಿತು- “ಬೀನ್ಸ್, ಕ್ಯಾರೆಟ್, ಟೊಮೇಟೊ, ಬೀಟ್‌ರೂಟ್, ಹೀರೇಕಾಯ್, ಸೌತೆಕಾಯ್.’ ಹೀಗೆ ಮುಂದುವರಿದಿತ್ತು. ಅರೆ, ಇದು ರತ್ನಾಳ ದನಿಯಲ್ಲವೇ ಅಂದುಕೊಳ್ಳುತ್ತ ಹೊರಗೆ ಬಂದೆ.
ಹೌದು, ರತ್ನಾಳೇ! ಅವಳು ಮತ್ತು ಅವಳ ತಮ್ಮ ಇಬ್ಬರೂ ಸೇರಿ, ತರಕಾರಿ ತುಂಬಿದ ಗಾಡಿಯನ್ನ ನೂಕುತ್ತಿದ್ದಾರೆ. ಅವಳಪ್ಪನ ಇಸ್ತ್ರಿ ಮಾಡುವ ತಳ್ಳು ಗಾಡಿಯೇ ಅದಾಗಿತ್ತು! ಅವಳನ್ನು ಮಾತಾಡಿಸಿ, ವಿಷಯ ತಿಳಿದುಕೊಳ್ಳೋಣ ಅಂತ, ಮಾಸ್ಕ್ ಧರಿಸಿ ಹೊರಗೆ ಬಂದೆ. “ಬನ್ನಿ ಬನ್ನಿ ಅಮ್ಮ… ನಿಮ್ಗೆ ಬೇಕಾದ್ ತರಕಾರಿ ಎಲ್ಲಾ ತಂದಿದೀನಿ’ ಅಂತ ಕಣ್ಣರಳಿಸಿ, ಐದು ವರ್ಷದ ಹಿಂದಿನದೇ ಆತ್ಮೀಯತೆಯಲ್ಲಿ ಬಾಯಿ ತುಂಬಾ ನಕ್ಕಳು. “ಇದೇನೇ, ಎಲ್ಲಾ ಬಿಟ್ಟು ಅಪ್ಪನ ಗಾಡಿ ಎತ್ಕೊಂಡು ತರಕಾರಿ ವ್ಯಾಪಾರ ಶುರು ಮಾಡಿದೀಯಲ್ಲ?’ ಅಂತ ಕೇಳಿದೆ. “ಇನ್ನೇನು ಮಾಡುವುದು? ಜೀವನ ನಡೀಬೇಕಲ್ಲಮ್ಮ’ ಅಂತ, ಕಾಲೇಜು ಓದುವ ನನ್ನ ಮಗಳ ವಯಸ್ಸಿನ ಆಕೆ ಹೇಳಿದಾಗ ಮನಸ್ಸಿಗೆ ನೋವಾಯಿತು.
“ಯಾಕೆ ರತ್ನ, ನಿನ್ನ ಗಂಡ ಎಲ್ಲಿ?’ ಎಂದಾಗ, ಆಟೋ ಓಡೊ ಹಾಗಿಲ್ಲ ಲಾಕ್‌ಡೌನಲ್ಲಿ. ಈ ಥರ ಮನೆ ಮುಂದೆ ತರಕಾರಿ ಅಂತ ಕೂಗಿಕೊಂಡು ಹೋಗಕ್ಕೆ ಅವನ ಮರ್ಯಾದಿಗೆ ಕಡಿಮೆಯಂತಮ್ಮ. ಅದಕ್ಕೆ ನಾನೇ ಅಪ್ಪನ ಇಸ್ತ್ರಿ ಗಾಡಿ ತಗಂಡು ವ್ಯಾಪಾರ ಶುರುಮಾಡಿಕಂಡೆ ಕಣಮ್ಮ. ಅಪ್ಪಂಗೆ ಇಸ್ತ್ರಿಗೆ ಬಟ್ಟೆ ಕೊಡುವವರೂ ಇಲ್ಲದಂಗಾಗೋಗದೆ ಅಂತನ್ನುವಾಗ ಅವಳ ಕಣ್ತುಂಬಿ ಬಂದಿತ್ತು. ಸುತ್ತಮುತ್ತಲಿನ ಸಾಫ್ಟ್ವೇರ್‌ನವರ, ಆಫೀಸಿಗೆ ಹೋಗುವವರ ಬಟ್ಟೆಗಳ ಇಸ್ತ್ರಿ ಮಾಡಿ ಜೀವನ ನಡೆಸುತ್ತಿದ್ದ ರಂಗಪ್ಪ, ಈಗ ವಯಸ್ಸಾದ ಮೇಲೆ ಬೇರೆ ಉದ್ಯೋಗ ಸಿಗದೆ ಮನೆಯಲ್ಲೇ ಕುಳಿತುಕೊಳ್ಳೋ ಹಾಗಾಗಿತ್ತು. ರತ್ನ ತನ್ನೆರಡು ಮಕ್ಕಳನ್ನ ಮನೆಯಲ್ಲಿ ಗಂಡನ ಬಳಿ ಬಿಟ್ಟು ತರಕಾರಿ ವ್ಯಾಪಾರಕ್ಕಿಳಿದಿದ್ದಳು.
ನನಗಂತೂ ರತ್ನಳ ಬಗ್ಗೆ ಹೆಮ್ಮೆಯೆನಿಸಿತು. ನನ್ನ ಕೈಗೆ ಮೆಂತ್ಯೆ ಕಟ್ಟು ಕೊಟ್ಟು, ದುಡ್ಡು ತೆಗೆದುಕೊಂಡು- “ಲೇಟಾಯಿತಮ್ಮ, ಮನೆಗೆ ಹೋಗಿ ಗಂಡ, ಮಕ್ಕಳಿಗೆ ಅಡಿಗೆ ಮಾಡ್ಬೇಕಮ್ಮ’ ಅಂತ ತಮ್ಮನೊಂದಿಗೆ ಗಾಡಿ ದಬ್ಬುತ್ತ ನಡೆದೇಬಿಟ್ಟಳು. ಲಾಕ್‌ಡೌನ್ ಮುಗಿದ ಮೇಲೆ, ಇನ್ನೇನು ತರಕಾರಿ ತಗೊಂಡು ರತ್ನ ಬರುವುದಿಲ್ಲ ಅಂದುಕೊಂ ಡರೆ ಹಾಗಾಗಲಿಲ್ಲ. ಅವರಪ್ಪನ ಇಸ್ತ್ರಿ ಗಾಡಿ ವಾಪಸ್ ಕೊಟ್ಟು, ತಾನು ಉಳಿಸಿದ ಹಣದಲ್ಲಿ ಹೊಸ ಗಾಡಿ ಖರೀದಿಸಿ ತರಕಾರಿ ವ್ಯಾಪಾರಕ್ಕಿಳಿದಿದ್ದಾಳೆ. ಈ ಕೋವಿಡ್ 19 ವಿಪತ್ತು ಅವಳಿಗೆ ಸ್ವಾವಲಂಬನೆಯ ಪಾಠ ಕಲಿಸಿದೆ.
***
ದೇವಸ್ಥಾನದಲ್ಲಿ ಅರ್ಚಕರಾಗಿದ್ದ ನರಸಿಂಹ ಭಟ್ಟರಿಗೆ, ಲಾಕ್‌ಡೌನ್ ಸಮಯದಲ್ಲಿ ಆದಾಯ ನಿಂತು ಹೋಯಿತು. ಆಗ ಅವರ ಸಹಾಯಕ್ಕೆ ನಿಂತಿದ್ದು ಮಡದಿ ಸಾವಿತ್ರಮ್ಮ. ಮನೆಯ ಲ್ಲಿಯೇ ರುಚಿರುಚಿಯಾಗಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಖಾರಾಸೇವು ಮಾಡಿ (ಹಿಂದೆಲ್ಲ ಗೊತ್ತಿದ್ದವರಿಗಷ್ಟೇ ಮಾಡಿ ಕೊಡುತ್ತಿದ್ದರು) ಹತ್ತಿರದ ಮೂರು-ನಾಲ್ಕು ಬೇಕರಿಗಳಿಗೆ (ಬೇಕರಿ ತೆರೆಯಲು ಪರ್ಮಿಶನ್ ಇದ್ದದ್ರಿಂದ) ಕೊಟ್ಟು, ದಿನನಿತ್ಯದ ಖರ್ಚುಗಳನ್ನು ಅವರು ಸಂಭಾಳಿಸಿದರು. ಲಾಕ್‌ಡೌನ್ ಮುಗಿದರೂ ಸಾವಿತ್ರಮ್ಮನ ಕುಕಿಂಗ್ ನಿಂತಿಲ್ಲ. ರತ್ನಾ, ಸಾವಿತ್ರಮ್ಮನಂಥ ಮಹಿಳೆಯರನ್ನು ಸ್ವಾವಲಂಬನೆಯತ್ತ ದೂಡಿದ ಕೋವಿಡ್ 19ಗೆ ಥ್ಯಾಂಕ್ಸ್ ಅನ್ನಲು ಅಡ್ಡಿಯಿಲ್ಲವೇನೋ!
* ಕುಸುಮ್ ಗೋಪಿನಾಥ್