Advertisement

ಮತ್ತೆ 9 ಮಂದಿಯಲ್ಲಿ ಕೊರೊನಾ ಲಕ್ಷಣ

01:55 AM Mar 16, 2020 | Sriram |

ಮಂಗಳೂರು: ಜಿಲ್ಲೆಯಲ್ಲಿ ರವಿವಾರ 377 ಮಂದಿಯನ್ನು ಕೊರೊನಾ ಸೋಂಕು ಪತ್ತೆಗಾಗಿತಪಾಸಣೆಗೊಳಪಡಿಸಲಾಗಿದ್ದು ಈ ಪೈಕಿ 9 ಮಂದಿಯಲ್ಲಿ ಶಂಕಿತ ಕೊರೊನಾ ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ವಿದೇಶದಿಂದ ಭಾರತಕ್ಕೆ ವಾಪಸಾದವರು. 11 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ದೃಢಪಟ್ಟಿಲ್ಲ.

Advertisement

14 ದಿನ ಮನೆ ನಿಗಾ ಕಡ್ಡಾಯ
ವಿದೇಶದಿಂದ ಬರುವ ಎಲ್ಲರೂ 14 ದಿನ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಈ 14 ದಿನಗಳನ್ನು “ಇನ್‌ಕ್ಯೂಬೇಷನ್‌ ಪಿರೇಡ್‌’ ಎಂದು ಕರೆಯಲಾಗುತ್ತದೆ. ಒಂದು ವೇಳೆ ವೈರಸ್‌ ದೇಹದೊಳಗಿದ್ದರೂ ಅದರ ಲಕ್ಷಣ 14 ದಿನಗಳೊಳಗೆ ಪತ್ತೆ ಯಾಗುತ್ತದೆ. ಈ ರೀತಿಯಾಗಿ 106 ಮಂದಿ ಮನೆಯಲ್ಲಿಯೇ ಇದ್ದು ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. ಪ್ರಸುತ್ತ 5 ಮಂದಿ ವೆನ್‌ಲಾಕ್‌ನಲ್ಲಿ ಹಾಗೂ ಉಳಿದವರು ಇತರ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಪ್ರಾ.ಆ.ಕೇಂದ್ರಗಳಿಗೆ ಮಾಸ್ಕ್
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ 3,500ರಷ್ಟು ಮಾಸ್ಕ್ಗಳನ್ನು ನೀಡಲಾಗಿದೆ.

ಪ್ರಮಾಣಪತ್ರ ಕೇಳುವಂತಿಲ್ಲ
ಕೆಲವು ಹಾಸ್ಟೆಲ್‌ಗ‌ಳು ವಿದ್ಯಾರ್ಥಿ ಗಳಿಂದ ಕೊರೊನಾ ಇಲ್ಲವೆಂದು ಖಚಿತ ಪಡಿಸುವ “ಕೋವಿಡ್‌ ಫ್ರೀ ಸರ್ಟಿ ಫಿಕೆಟ್‌’ ತರಿಸುತ್ತಿರುವ ಮಾಹಿತಿ ದೊರೆ ತಿದೆ. ಈ ರೀತಿ ಸರ್ಟಿಫಿಕೆಟ್‌ ಕೇಳಲು ಯಾವುದೇ ಹಾಸ್ಟೆಲ್‌ಗ‌ಳಿಗೆ ಅವಕಾಶ ಇಲ್ಲ ಎಂದು ಡಿಸಿ  ತಿಳಿಸಿದ್ದಾರೆ.

ವಿಶೇಷ ಪ್ರಾರ್ಥನೆ
ರವಿವಾರ ಕದ್ರಿ ಮಂಜುನಾಥೇಶ್ವರ ದೇವಳ ಸೇರಿದಂತೆ ವಿವಿಧೆಡೆ ಧನ್ವಂತರಿ ಪಾರಾಯಣ, ಸಾಮೂಹಿಕ ಪ್ರಾರ್ಥನೆ ಮೊದಲಾದವು ನಡೆದವು.

Advertisement

ಪಿಲಿಕುಳ ಜೈವಿಕ ಉದ್ಯಾನ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಮಾ.14ರಿಂದಲೇ 1ವಾರ ಜನರ ಪ್ರವೇಶ ನಿಷೇಧಿಸಲಾಗಿದೆ.

ವಿಶೇಷ ಕಾರ್ಯಾಚರಣೆ
ಕೊರೊನಾ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ವಿಶೇಷ ಸ್ವತ್ಛತಾ ಕ್ರಮಗಳನ್ನು ಕೈಗೊಳ್ಳಲು ಮುಂದಾ ಗಿರುವ ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಬೀದಿ ಬದಿಯ ತಿಂಡಿ ತಿನಿಸುಗಳ ಅಂಗಡಿಗಳನ್ನು ತೆರವು ಮಾಡಲು ಸೂಚನೆ ನೀಡಿದೆ. ರವಿವಾರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಇಂತಹ ಹಲವಾರು ಅಂಗಡಿಗಳನ್ನು ಮುಚ್ಚಿಸಿದರು. ಸೋಮವಾರವೂ ಈ ಕಾರ್ಯಾಚರಣೆ ಮುಂದುವರಿ ಯಲಿದೆ. ಎಲ್ಲ ಹೊಟೇಲ್‌, ಲಾಡ್ಜ್, ಕ್ಯಾಂಟೀನ್‌ ಮಾಲಕರ ಸಭೆ ಕರೆದು ಸ್ಪಷ್ಟ ಸೂಚನೆ ನೀಡಲಾಗಿದೆ. ಕಡ್ಡಾಯ  ವಾಗಿ ಬಿಸಿನೀರನ್ನೇ ನೀಡಲು ಸೂಚಿಸ ಲಾಗಿದೆ. ಸೋಮವಾರದಿಂದ ತಪಾಸಣೆ ಆರಂಭ ಗೊಳ್ಳಲಿದೆ. ನಗರದಲ್ಲಿ ಕೊರೊನಾ ಜಾಗೃತಿಗಾಗಿಯೂ ಅನೇಕ ಕ್ರಮಗಳನ್ನು ಶೀಘ್ರದಲ್ಲಿಯೇ ತೆಗೆದು ಕೊಳ್ಳ ಲಾಗುವುದು ಎಂದು ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ ತಿಳಿಸಿದ್ದಾರೆ.

ಉತ್ಸವ, ಜಾತ್ರೆ: ಸೂಚನೆ
ಈಗ ಕರಾವಳಿಯಲ್ಲಿ ಉತ್ಸವ, ಜಾತ್ರೆಗಳ ಸೀಜನ್‌. ಇದೇ ಸಂದರ್ಭದಲ್ಲಿ ಕೊರೊನಾ ದಾಂಗುಡಿ ಇಟ್ಟಿರುವುದರಿಂದ ಭಕ್ತರು, ದೇವಳದ ಆಡಳಿತ ಮಂಡಳಿಯವರು ಗೊಂದಲಕ್ಕೀಡಾಗಿದ್ದಾರೆ. ಈಗಾಗಲೇ ಕೆಲವು ಜಾತ್ರೆ, ಉತ್ಸವಗಳು ನಡೆದಿದ್ದು ಸಾಧ್ಯವಾದಷ್ಟು ಸರಳ ರೀತಿಯಲ್ಲಿ ನಡೆಸಲಾಗಿದೆ. ಜಿಲ್ಲಾಡಳಿತ ಕೂಡ ಕಡಿಮೆ ಸಂಖ್ಯೆಯಲ್ಲಿ ಜನ ಸೇರಿಸುವಂತೆ ದೇವಳ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.

ಮಂಗಳೂರು ನಗರದಲ್ಲಿ ರವಿವಾರ ಕೂಡ ಮಾಲ್‌, ಚಿತ್ರ ಮಂದಿರಗಳು ಬಂದ್‌ ಆಗಿದ್ದವು. ಜನಸಂಚಾರ ವಿರಳವಾಗಿತ್ತು. ಆರ್ಥಿಕ ಚಟುವಟಿಕೆಗಳ ಮೇಲೆ ಕೊರೊನಾ ಪೆಟ್ಟು ನೀಡಿದೆ.

ಯಾವುದೇ ಪ್ರಕರಣ ದೃಢಪಟ್ಟಿಲ್ಲ
ವಿದೇಶದಿಂದ ಬರುವ ಪ್ರತಿಯೋರ್ವರನ್ನು ಕೂಡ ತಪಾಸಣೆಗೊಳಪಡಿಸಲಾಗುತ್ತಿದೆ. ಇದುವರೆಗೆ ಯಾವುದೇ ಪ್ರಕರಣ ದೃಢಪಟ್ಟಿಲ್ಲ. ವಿದೇಶದಿಂದ ಆಗಮಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಯಾರು ಕೂಡ ಗಾಬರಿಪಡುವ ಅಗತ್ಯವಿಲ್ಲ. ಉತ್ಸವ, ಜಾತ್ರೆಯಂತಹ ಸ್ಥಳಗಳಲ್ಲಿ ಹೆಚ್ಚು ಜನ ಸೇರದಿರುವಂತೆ ಸಲಹೆ ನೀಡಿದ್ದೇವೆ. ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
– ಸಿಂಧೂ ಬಿ.ರೂಪೇಶ್‌, ಜಿಲ್ಲಾಧಿಕಾರಿ, ದ.ಕ

Advertisement

Udayavani is now on Telegram. Click here to join our channel and stay updated with the latest news.

Next