ಮಂಡ್ಯ: ಜಿಲ್ಲೆಯ ಮಳವಳ್ಳಿ ಹಾಗೂ ನಾಗಮಂಗಲ ತಾಲೂಕಿನಲ್ಲಿ ಕೋವಿಡ್ 19ಸೋಂಕು ಹರಡುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿದ್ದ 10 ಮೌಲ್ವಿಗಳು ನಾಗಮಂಗಲ ಹಾಗೂ ಮಳವಳ್ಳಿ ತಾಲೂಕಿನಲ್ಲಿ ಧರ್ಮ ಪ್ರಚಾರಕ್ಕೆ ಸಂಚಾರ ನಡೆಸಿದ್ದಾರೆ. ಅಲ್ಲದೆ, ಕಳೆದ 10 ದಿನ ದರ್ಗಾ ಪಕ್ಕದ ಖಾಲಿ ಜಾಗದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಗಮಂಗಲದಲ್ಲಿ 24 ಮತ್ತು ಮಳವಳ್ಳಿಯಲ್ಲಿ 25 ಮಂದಿಯನ್ನು ಐಸುಲೇಷನ್ ವಾರ್ಡ್ ನಲ್ಲಿಟ್ಟು ನಿಗಾ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಲ್ಲೂ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ ಎಂದರು.
ಕಳೆದ ಮಾ. 8ರಿಂದ 10 ಹಾಗೂ ಮಾ.15 ರಿಂದ 17ರವರೆಗೆ ನಡೆದ ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಮಂಡ್ಯದ ಯಾವುದೇ ಮುಸ್ಲಿಮರು ಪಾಲ್ಗೊಂಡಿರಲಿಲ್ಲ. ಆದರೆ ಮಳವಳ್ಳಿ ತಂಡ ಫೆ. 5ರಿಂದ 13ರ ತನಕ ದೆಹಲಿಗೆ ಹೋಗಿತ್ತು. ಆ ವೇಳೆಗೆ ಕೋವಿಡ್ 19 ಸೋಂಕು ವ್ಯಾಪಿಸಿರಲಿಲ್ಲ ಎಂದರು.
ಮೈಸೂರಿಗೆ ರೈಲಿನಲ್ಲಿ ಪ್ರಯಾಣ: ಜನವರಿ 27ರಿಂದ 10 ಮಂದಿ ದೆಹಲಿಯ ಮೌಲ್ವಿಗಳ ತಂಡವೊಂದು ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿತ್ತು. ಈ ತಂಡ ಜ.29 ರಂದು ಮೈಸೂರಿಗೆ ಬಂದು ನಂತರ ಮಾ.13 ರಂದು ನಾಗಮಂಗಲಕ್ಕೆ ಭೇಟಿ ಕೊಟ್ಟು ಅಲ್ಲಿ ದರ್ಗಾಗಳಲ್ಲಿ ಧಾರ್ಮಿಕ ಪ್ರಚಾರ ನಡೆಸಿದ್ದಾರೆ. 10 ದಿನ ನಾಗಮಂಗಲದಲ್ಲಿದ್ದ ಈ ತಂಡ ಬಳಿಕ ಅಲ್ಲಿಂದ ಟ್ಯಾಕ್ಸಿಯೊಂದರಲ್ಲಿ ಮಳವಳ್ಳಿಗೆ ಆಗಮಿಸಿದರು. ಮಾ.23ರಿಂದ 29ರವರೆಗೆ 6 ದಿನ ಮಳವಳ್ಳಿಯಲ್ಲಿ ವಾಸ್ತವ್ಯ ಹೂಡಿ ಧರ್ಮ ಪ್ರಚಾರ ನಡೆಸಿದ್ದಾರೆ. ನಂತರ ಬನ್ನೂರು ಮಾರ್ಗವಾಗಿ ಮೈಸೂರಿಗೆ ಹೋಗುವಾಗ ಚೆಕ್‌ಪೋಸ್ಟ್‌ನಲ್ಲಿ ಈ ತಂಡವನ್ನು ತಡೆದು ಪ್ರಶ್ನೆ ಮಾಡಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ತಕ್ಷಣ ಈ ತಂಡದ ಎಲ್ಲಾ ಸದಸ್ಯರನ್ನೂ ಮೈಸೂರಿನಲ್ಲೇ ತಪಾಸಣೆ ನಡೆಸಿ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವಿವರಿಸಿದರು.
25 ಮಂದಿ ಐಸೊಲೇಷನ್: ಮಳವಳ್ಳಿಯ 7 ಜನ ದೆಹಲಿಗೆ ಭೇಟಿ ನೀಡಿದ್ದರಿಂದ ಅವರ ಕುಟುಂಬದ 25 ಜನರನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಿ ಐಸೊಲೇಷನ್ ನಲ್ಲಿ ಇಡಲಾಗಿದೆ. ಅದೇ ರೀತಿ ನಾಗಮಂಗಲದಲ್ಲೂ 24 ಜನರನ್ನು ಐಸೊಲೇಷನ್‌ನಲ್ಲಿ ಇಡಲಾಗಿದೆ. ಪಾಸಿಟಿವ್ ಬಂದಿಲ್ಲ: ಈಗಾಗಲೇ ಜಿಲ್ಲೆಯಲ್ಲಿ 123 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ. 113 ಮಂದಿ ಹೋಂ ಕ್ವಾರೆಂಟೈನ್ ಪೂರ್ಣಗೊಳಿಸಿದ್ದು, ಶುಕ್ರವಾರದಿಂದ 49 ಮಂದಿಯನ್ನು ಮತ್ತೆ ಐಸೊಲೇಷನ್ ವಾರ್ಡ್ ನಲ್ಲಿ ದಾಖಲಿಸಲಾಗಿದೆ. ಈ ಪೈಕಿ ಇನ್ನೂ 10 ಮಂದಿ ಹೋಂಕ್ವಾರೆಂಟೈನ್‌ನಲ್ಲಿ ಇದ್ದಾರೆ. 18
ಮಂದಿ ನಂಜನಗೂಡು ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರರ ಸಂಪರ್ಕದಲ್ಲಿದ್ದವರು ಸೇರಿ ಒಟ್ಟು 60 ಮಂದಿ ಐಸುಲೇಷನ್ ವಾರ್ಡ್ ನಲ್ಲಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಷರತ್ತು ಉಲ್ಲಂಘಿಸಿದರೆ ಕ್ರಮ : ಮಂಡ್ಯ ನಗರವೂ ಸೇರಿದಂತೆ ಕೆ.ಆರ್ .ಪೇಟೆ, ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ತಾಲೂಕುಗಳಲ್ಲಿ ಕೆಲವು ನಿರ್ಬಂಧ ಸಡಿಲಗೊಳಿಸಿದ್ದೇವೆ. ನಿರ್ಬಂಧ ಉಲ್ಲಂ ಸಿದರೆ ತಕ್ಷಣ ಅಂಗಡಿಗಳಿಗೆ ಬೀಗ ಹಾಕುವಂತೆ ಸೂಚಿಸಲಾಗಿದೆ ಎಂದರು.
ಸಿಇಒ ನೋಡಲ್ ಅಧಿಕಾರಿ:ಸಾಮಾಜಿಕ ಅಂತರ ಸೇರಿದಂತೆ ವಿವಿಧ ಷರತ್ತುಗಳನ್ನು ಪಾಲಿಸಿದ್ದಾರೆಯೇ? ಇಲ್ಲವೇ ಎಂಬುದಕ್ಕೆ ಜಿಲ್ಲಾದ್ಯಂತ ನಿಗಾ ಇಡಲು ಜಿಪಂ ಸಿಇಒ ಯಾಲಕ್ಕಿಗೌಡರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದರು. ಸಿಇಒ ಕೆ.ಯಾಲಕ್ಕಿ ಗೌಡ, ಎಸ್ಪಿ ಕೆ.ಪರಶುರಾಮ್ ಇದ್ದರು.