ಕೋವಿಡ್ ದ ಬಗ್ಗೆ ಬೆಚ್ಚಿ ಬೀಳಿಸುವ ಸುದ್ದಿಗಳೇ ಎಲ್ಲೆಡೆ ಹರಡುತ್ತಿರುವಾಗ, ನೀವು ಇದನ್ನು ಓದಲೇಬೇಕು. ಮುಂಜಾಗ್ರತೆ ಮತ್ತು ಮನೋಬಲದಿಂದ ವೈರಸ್‌ನಿಂದ ಗುಣಮುಕ್ತಳಾದ ಸುಮಿತಿಯ ಕಥೆ ಇದು.
ಅಹಮದಾಬಾದ್‌ನಲ್ಲಿ ಬೇಕರಿ ನಡೆಸುತ್ತಿರುವ ಸುಮಿತಿ, ನಗರದ ಎರಡನೇ ಕೋವಿಡ್ ರೋಗಿ. ಮಾರ್ಚ್‌ನಲ್ಲಿ ಫಿನ್ ಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದಾಗ ಅವರಿಗೆ ವೈರಸ್ ತಗುಲಿದೆ. ಆದರೆ, ಕೋವಿಡ್ ಬಗ್ಗೆ ಸರಿಯಾದ ಮಾಹಿತಿ ಹೊಂದಿದ್ದ ಸುಮಿತಿ, ಮನೆಯವರಿಂದ ದೂರವಿದ್ದು ವೈರಸ್ ಹರಡುವುದನ್ನು ತಡೆದಿದ್ದಾರೆ. ಗುಣಮುಕ್ತರಾದ ನಂತರ ತಮ್ಮ ಕ್ವಾರಂಟೈನ್ ದಿನಗಳ ಬಗ್ಗೆ, ಆಸ್ಪತ್ರೆ ವಾಸದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಅವರ ಮಾತುಗಳಲ್ಲಿಯೇ ಕೇಳಿ-
“ನಾನು ಪ್ರವಾಸದ ಬಗ್ಗೆ ಎಷ್ಟು ಉತ್ಸುಕಳಾಗಿದ್ದೆನೋ ಅಷ್ಟೇ ಜಾಗ್ರತೆಯನ್ನೂ ವಹಿಸಿದ್ದೆ. ವುಹಾನ್‌ನಲ್ಲಿ ಕೋವಿಡ್ ಹಬ್ಬುತ್ತಿರುವ ಬಗ್ಗೆ ಮಾಹಿತಿ ಇತ್ತಾದರೂ, ಭಾರತದಲ್ಲಿ ಸೋಂಕು ಇನ್ನೂ ಕಾಣಿಸಿಕೊಂಡಿರಲಿಲ್ಲ. ಟ್ರಾವೆಲ್ ಕಂಪನಿ ಮತ್ತು ಹೋಟೆಲ್‌ನವರನ್ನು ವಿಚಾರಿಸಿದಾಗಲೂ, ಚಿಂತೆ ಮಾಡುವಂತದ್ದೇನೂ ಇಲ್ಲ ಅಂದಿದ್ದರು. ಆದರೂ ಬಹಳಷ್ಟು ಮುಂಜಾಗ್ರತೆ ವಹಿಸಿಕೊಂಡೇ ಪ್ರವಾಸಕ್ಕೆ ಹೊರಟೆ. ಹತ್ತು ದಿನಗಳ ಪ್ರವಾಸ ಮುಗಿಸಿ ಮಾರ್ಚ್ 12ರಂದು ಭಾರತಕ್ಕೆ ಬಂದಾಗ, ಇಲ್ಲಿಯೂ ಕೋವಿಡ್ ಅಪಾಯದ ಗಂಟೆ ಬಾರಿಸಲು ಶುರುಮಾಡಿತ್ತು. ಏರ್‌ಪೋರ್ಟ್ ನಲ್ಲಿ ಟೆಂಪರೇಚರ್ ಚೆಕ್ ಮಾಡಿದರು. ಆಗ ನನ್ನ ದೇಹದಲ್ಲಿ ಸೋಂಕಿನ ಯಾವ ಲಕ್ಷಣಗಳೂ ಇರಲಿಲ್ಲ. ಆದರೂ, ಮುನ್ನೆಚ್ಚರಿಕೆಯ ಕ್ರಮವಾಗಿ, ನಾನು ಸೆಲ್ಫ್ ಐಸೋಲೇಟ್ ಆಗಿ, ಮನೆಯವರಿಂದ ದೂರ ಇರಲು ನಿರ್ಧರಿಸಿದೆ.
ಜ್ವರ ಕಾಣಿಸಿಕೊಂಡಿತು
ಮನೆಗೆ ಬಂದ ಎರಡು ದಿನಗಳ ನಂತರ (ಮಾರ್ಚ್ 14) ಬೆಳಗ್ಗೆ ಏಳುವಾಗ ಸಣ್ಣದಾಗಿ ಜ್ವರ ಬಂದಿತ್ತು. ವೈದ್ಯರನ್ನು ಸಂಪರ್ಕಿಸಿದಾಗ, ಅವರು ಸಾಮಾನ್ಯ ಜ್ವರಕ್ಕೆ ಔಷಧಿ ನೀಡಿ,
ಕೆಮ್ಮು ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಿಳಿಸುವಂತೆ ಹೇಳಿದರು. ಎರಡು ದಿನಗಳ ನಂತರ ಅರೋಗ್ಯ ಮತ್ತಷ್ಟು ಹದಗೆಟ್ಟು, ಮತ್ತೂಮ್ಮೆ ವೈದ್ಯರ ಬಳಿ ಹೋದೆ. ಆಗಲೂ, ಕೆಮ್ಮು- ಉಸಿರಾಟದ ತೊಂದರೆ ಇರಲಿಲ್ಲ. ಅವರು ಮತ್ತೆ ಜ್ವರಕ್ಕೆ ಔಷಧಿ ನೀಡಿ ಮನೆಗೆ ಕಳಿಸಿದರು. ಮತ್ತೆರಡು ದಿನ ಕಳೆಯುವಷ್ಟರಲ್ಲಿ ನನಗೆ ಉಸಿರಾಟದ ತೊಂದರೆ ಶುರುವಾಯ್ತು. ತಕ್ಷಣವೇ, ಪರಿಚಯದ ವೈದ್ಯೆಯನ್ನು ಸಂಪರ್ಕಿಸಿದೆ. ಅವರು, ಆಸ್ಪತ್ರೆಗೆ ಬರುವಂತೆ ಸೂಚಿಸಿದರು. ನಾನೇ ಡ್ರೈವ್ ಮಾಡಿಕೊಂಡು ಏಕಾಂಗಿಯಾಗಿ ಆಸ್ಪತ್ರೆಗೆ ಹೋದೆ. ನನಗೂ ವೈರಸ್ ತಗುಲಿತ್ತು! ಅಲ್ಲಿ, ನನ್ನ ಮೂಗು-ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳಿಸಿದರು. ಎಕ್ಸ್ ರೇ ಮತ್ತು ರಕ್ತ ಪರೀಕ್ಷೆಯೂ ನಡೆಯಿತು.
ಮಾರ್ಚ್ 19ಕ್ಕೆ ಸಿಕ್ಕ ರಿಪೋರ್ಟ್‌ನಲ್ಲಿ, ನಾನು ಕೋವಿಡ್ ಕ್ಕೆ
ತುತ್ತಾಗಿರುವುದು ಖಾತ್ರಿಯಾಯ್ತು. ಅಷ್ಟೆಲ್ಲಾ ಜಾಗ್ರತೆ ವಹಿಸಿದರೂ ವೈರಸ್ ತಗುಲಿದ್ದು ಹೇಗೆ ಅಂತ ಶಾಕ್ ಆಯಿತು. ನನ್ನಿಂದಾಗಿ ಮನೆ ಮಂದಿಗೂ ರೋಗ ತಗುಲಿದರೆ ಏನು ಮಾಡುವುದೆಂದು ಗಾಬರಿಯೂ ಆಯ್ತು. ಮೊದಲಿನಿಂದಲೂ ಅವರಿಂದ ದೂರವೇ ಇದ್ದೆನಲ್ಲ, ಏನೂ ಆಗುವುದಿಲ್ಲ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಸರ್ಕಾರದ ಕಡೆಯಿಂದ ವೈದ್ಯರು ಬಂದು, ಮನೆಯವರ ಆರೋಗ್ಯ ತಪಾಸಣೆ ನಡೆಸಿದರು. ಮನೆಯವರನ್ನು ಕ್ವಾರಂಟೈನ್ ಮಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಮನೆಯವರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತಾಡುತ್ತಿದ್ದೆ. ಯಾಕಂದ್ರೆ, ಅವರೆಲ್ಲಾ ತುಂಬಾ ಹೆದರಿದ್ದರು. ಔಷಧಗಳ ಪ್ರಭಾವದಿಂದ ಓದಲು, ಮೂವಿ ನೋಡಲು, ದೇಹ-ಮನಸ್ಸು ಸಹಕರಿಸುತ್ತಿರಲಿಲ್ಲ. ರೆಸ್ಟ್ ಮಾಡುವುದು, ಎಚ್ಚರವಾದಾಗ ಆಪ್ತರಿಗೆ ಕಾಲ್ ಮಾಡಿ ಮಾತಾಡುವುದು, ಇಷ್ಟೇ ಆಗಿತ್ತು ನನ್ನ ಆಸ್ಪತ್ರೆ ದಿನಗಳು. ಅವರೆಲ್ಲರ ಧೈರ್ಯದ ಮಾತುಗಳೇ ನಾನು ಬೇಗ ಗುಣಮುಖಳಾಗಲು ಕಾರಣ.
ಸುಳ್ಳು ಸುದ್ದಿಗಳು ಹರಡಿದ್ದವು
ನನಗೆ ಕೋವಿಡ್ ಪಾಸಿಟಿವ್ ಅಂತ ಗೊತ್ತಾದ ನಂತರ, ನನ್ನ ಹಾಗೂ ನಮ್ಮ ಕುಟುಂಬದ ಬಗ್ಗೆ, ನಮ್ಮ ಬ್ಯುಸಿನೆಸ್ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದವು. ಜನರು, ಒಂದಕ್ಕೆ ಹತ್ತು ಸೇರಿಸಿ ಹೇಳತೊಡಗಿದ್ದರು.
ಪ್ರೀತಿಯಿಂದ ಚಪ್ಪಾಳೆ ತಟ್ಟಿದರು
ನಾನು ಆಸ್ಪತ್ರೆಯಿಂದ ಬಂದ ಮೇಲೆ ಜನ ನನ್ನನ್ನು ಹತ್ತಿರ ಸೇರಿಸುವುದಿಲ್ಲವೇನೋ ಅಂತ ಹೆದರಿದ್ದೆ. ಆದರೆ, ನನ್ನ ಬಗೆಗಿದ್ದ ಭಯ ಅನುಕಂಪವಾಗಿ, ನಂತರ ಅದು ಪ್ರೀತಿಯಾಗಿ ಮಾರ್ಪಾಡಾಯಿತು. ನಾನು ಕೋವಿಡ್ ದಿಂದ ಮುಕ್ತಳಾಗಿದ್ದೇನೆ ಅಂತ ರಿಪೋರ್ಟ್ ಬಂದ ನಂತರ, ಮಾರ್ಚ್ 29ರಂದು ಆಸ್ಪತ್ರೆಯಿಂದ ಹೊರ ಬಂದೆ. ಅಪಾರ್ಟ್‌ಮೆಂಟ್ ಬಳಿ ನಾನು ಕಾರ್‌ನಿಂದ ಇಳಿದಾಗ, ನೆರೆಹೊರೆಯ ಜನರೆಲ್ಲಾ ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಸ್ವಾಗತಿಸಿದರು.
ನಾನೀಗ ಎಲ್ಲರಿಗೂ ಹೇಳುವುದಿಷ್ಟೇ: ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ರೋಗದ ಲಕ್ಷಣ ಕಾಣಿಸಿಕೊಂಡರೆ, ವೈದ್ಯರನ್ನು ತುರ್ತಾಗಿ ಸಂಪರ್ಕಿಸಿ.