ನವದೆಹಲಿ: ಕೋವಿಡ್ 19 ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿ ಒಂದು ತಿಂಗಳ ಕಳೆದಿದೆ. ಮೇ 3ರವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು, ಸೋಂಕು ತಡೆಗಟ್ಟಲು ಲಾಕ್ ಡೌನ್ ಮುಂದುವರಿಸಬೇಕು ಎಂಬ ಬಗ್ಗೆ ಕೆಲವು ರಾಜ್ಯಗಳು ಆಲೋಚಿಸುತ್ತಿವೆ. ಆದರೆ ಕೆಲವು ರಾಜ್ಯಗಳು ಸೋಂಕಿತ ಪ್ರದೇಶ ಮತ್ತು ಬಫರ್ ಜೋನ್ ಗಳಲ್ಲಿ ಮಾತ್ರ ನಿರ್ಬಂಧ ಮುಂದುವರಿಸಲು ಒಲವು ತೋರಿದ್ದು, ಇಡೀ ಜಿಲ್ಲೆಗೆ ಬೇಡ ಎಂಬ ಅಭಿಪ್ರಾಯಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.
ಈವರೆಗೆ ತೆಲಂಗಾಣ ರಾಜ್ಯ ಮಾತ್ರ ಮೇ 7ರವರೆಗೆ ಲಾಕ್ ಡೌನ್ ಅನ್ನು ಮುಂದುವರಿಸಿದ್ದು ಬಿಟ್ಟಿರೆ ದೇಶದ ಇತರೆ ಯಾವುದೇ ರಾಜ್ಯಗಳು ಲಾಕ್ ಡೌನ್ ಮುಂದುವರಿಕೆ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಇನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ಚರ್ಚೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ದಿಲ್ಲಿ ಸರ್ಕಾರದ ಅಧಿಕಾರಿಗಳ ಕೋವಿಡ್ 19ಗೆ ಸಂಬಂಧ ಪಟ್ಟ ಸಮಿತಿಯು ಸದ್ಯ ಮುಂದುವರಿದಿರುವ ಲಾಕ್ ಡೌನ್ ಅನ್ನು ಮೇ ಮಧ್ಯದವರೆಗೆ ಮುಂದುವರಿಸಲು ಸಲಹೆ ನೀಡಿದೆ ಎಂದು ತಿಳಿಸಿದೆ. ದಿಲ್ಲಿಯಲ್ಲಿ ಕೋವಿಡ್ 19 ವೈರಸ್ ಗೆ 54 ಮಂದಿ ಸಾವನ್ನಪ್ಪಿದ್ದು, 2,625 ಪ್ರಕರಣಗಳು ಪತ್ತೆಯಾಗಿದ್ದವು.
ಭಾರತದಲ್ಲಿ ಒಂದು ವೇಳೆ ನಿರ್ಬಂಧವನ್ನು ತೆರವುಗೊಳಿಸಿದರೆ ಕೋವಿಡ್ 19 ಪ್ರಕರಣ ಲೆಕ್ಕಕ್ಕೆ ಸಿಗಲಾರದಷ್ಟು ಏರಿಕೆಯಾಗಬಹುದು. ದಿಲ್ಲಿಯಲ್ಲಿ ಅತೀ ಹೆಚ್ಚು ಸೋಂಕಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಹೀಗಾಗಿ ದಿಲ್ಲಿಯಲ್ಲಿ ಲಾಕ್ ಡೌನ್ ಮುಂದುವರಿಯಲಿದೆ ಎಂದು ದಿಲ್ಲಿ ಸರ್ಕಾರಿ ಸಮಿತಿಯ ಅಧ್ಯಕ್ಷ ಡಾ.ಎಸ್.ಕೆ.ಸರೀನ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮಹಾರಾಷ್ಟ್ರ ಕೂಡಾ ಲಾಕ್ ಡೌನ್ ಮುಂದುವರಿಸುವುದಕ್ಕೆ ಬೆಂಬಲ ನೀಡಿದೆ. ರಾಜ್ಯದಲ್ಲಿನ ಅತೀ ದೊಡ್ಡ ಹಾಟ್ ಸ್ಪಾಟ್ ಗಳಾದ ಮುಂಬೈ ಮತ್ತು ಪುಣೆಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಲಾಕ್ ಡೌನ್ ಅನಿವಾರ್ಯ ಎಂದು ತಿಳಿಸಿದೆ. ಒಂದು ವೇಳೆ ಮೇ 3ರ ನಂತರ ಲಾಕ್ ಡೌನ್ ಮುಂದುವರಿಯಬೇಕು ಎಂದಾದರೆ ಅದು ಇಡೀ ಮುಂಬೈ ಮತ್ತು ಪುಣೆಗೆ ಅಲ್ಲ, ಕೇವಲ ಸೋಂಕಿತ ಪ್ರದೇಶಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ.
ಉತ್ತರಪ್ರದೇಶ ಸರ್ಕಾರ ಕೂಡಾ ಜೂನ್ 30ರವರೆಗೆ ಸಾರ್ವಜನಿಕವಾಗಿ ಗುಂಪುಗೂಡದಂತೆ ಆದೇಶ ಹೊರಡಿಸಿದೆ. ಕೇಂದ್ರದ ಲಾಕ್ ಡೌನ್ ಆದೇಶವನ್ನು ಕರಾರುವಕ್ಕಾಗಿ ಪಾಲಿಸಬೇಕು ಎಂದು ತಿಳಿಸಿದೆ.
ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆಂಧ್ರಪ್ರದೇಶದ ಸಿಎಂ ವೈಎಸ್ ಆರ್ ಜಗನ್ ಮೋಹನ್ ರೆಡ್ಡಿ ಅವರು ಕೂಡಾ ಕೋವಿಡ್ 19 ಸೋಂಕಿತ ಹಾಟ್ ಸ್ಪಾಟ್ ಮತ್ತು ಬಫರ್ ಜೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ನಿರ್ಬಂಧ ಮುಂದುರಿಸಲಿ, ಇಡೀ ಜಿಲ್ಲೆಗೆ ಅನ್ವಯವಾಗೋದು ಬೇಡ ಎಂಬ ಇಚ್ಛೆ ವ್ಯಕ್ತಪಡಿಸಿರುವುದಾಗಿ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ರಾಜಸ್ಥಾನ, ಒಡಿಶಾ, ಚತ್ತೀಸ್ ಗಢ, ಕೇರಳ, ಆಂಧ್ರಪ್ರದೇಶ ಮತ್ತು ಬಿಹಾರ ಮುಖ್ಯಮಂತ್ರಿಗಳು ಬೇರೆ, ಬೇರೆ ರಾಜ್ಯ, ಜಿಲ್ಲೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ನಿರ್ಬಂಧ ತೆರವುಗೊಳಿಸಬೇಕೆಂಬ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.