Advertisement
ಬೇಸಗೆಯಲ್ಲಿ ಕೋವಿಡ್-19 ವೈರಸ್ ಸಾಯುತ್ತದೆ ಎನ್ನುವುದಕ್ಕೆ ಇಷ್ಟರ ತನಕ ಯಾವ ಪುರಾವೆಯೂ ಸಿಕ್ಕಿಲ್ಲ. ಹೀಗಾಗಿ ಕೋವಿಡ್-19 ಪ್ರಕರಣಗಳು ಮರುಕಳಿಸದಿರಲು ಇನ್ನೂ ಎರಡು ವರ್ಷವಾದರೂ ಕೆಲವು ನಿರ್ಬಂಧಗಳನ್ನು ಜನರು ಸ್ವಪ್ರೇರಣೆಯಿಂದ ಪಾಲಿಸುವುದು ಒಳಿತು ಎಂದು ಈ ಅಧ್ಯಯನ ಸಲಹೆ ಮಾಡಿದೆ. ಪರಸ್ಪರರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಅಪ್ಪುಗೆ, ಚುಂಬನ, ಹಸ್ತಲಾಘವದಂಥ ಪದ್ಧತಿಗಳನ್ನು ತ್ಯಜಿಸುವ ಅನಿವಾರ್ಯತೆ ತಲೆದೋರಬಹುದು ಎಂದು ಅಧ್ಯಯನ ಹೇಳಿದೆ. ಒಂದು ಸಲ ಲಾಕ್‌ಡೌನ್ ಹೇರಿದ ಕೂಡಲೇ ಕೋವಿಡ್-19 ಹಾವಳಿ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ಖಾತರಿಯಿಲ್ಲ. ಒಂದೇ ಒಂದು ಪಾಸಿಟಿವ್ ಪ್ರಕರಣ ಉಳಿದಿದ್ದರೂ ಮರಳಿ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ.
ಓರ್ವ ತಜ್ಞ ಹೇಳುವ ಪ್ರಕಾರ ಮನುಕುಲ 2025ರ ತನಕವೂ ಕೋವಿಡ್-19 ಪೀಡೆ ಯನ್ನು ಅನುಭವಿಸುತ್ತಿರಬೇಕಾ ಗುತ್ತದೆ. ಪರಿಣಾಮಕಾರಿ ಯಾದ ಚಿಕಿತ್ಸೆ ಅಥವಾ ಲಸಿಕೆ ಸಂಶೋಧನೆಯಾಗುವ ತನಕ ಕೋವಿಡ್-19 ಪದೇ ಪದೇ ಕಾಟ ಕೊಡುವ ಸಾಧ್ಯತೆಯಿದೆ. ಇದಕ್ಕೆ ಚೀನದಲ್ಲಿ ಎರಡನೇ ಸುತ್ತಿನ ಕೋವಿಡ್ ಹಾವಳಿ ಶುರುವಾಗಿರುವುದನ್ನೇ ಉದಾಹರಣೆಯಾಗಿ ತೋರಿಸುತ್ತಿದ್ದಾರೆ ತಜ್ಞರು. ಹಾರ್ವರ್ಡ್ ವಿವಿಯ ವೈರಾಣು ಸಂಶೋಧಕ ಮಾರ್ಕ್ ಲಿಪ್‌ಸ್ಟಿಚ್ ಹೇಳುವಂತೆ , ಸೋಂಕುಗಳು ಎರಡು ರೀತಿಯಲ್ಲಿ ಹರಡುತ್ತವೆ. ಒಂದು ಸೋಂಕಿತ ವ್ಯಕ್ತಿಯಿಂದ ಇನ್ನೋರ್ವ ವ್ಯಕ್ತಿಗೆ ಮತ್ತು ಅಜ್ಞಾತ ವ್ಯಕ್ತಿಯಿಂದ ಒಂದಿಡೀ ಸಮುದಾಯಕ್ಕೆ. ಸದ್ಯಕ್ಕೆ ಎರಡನೇ ಅಪಾಯವೇ ಹೆಚ್ಚು ಇದೆ.
Related Articles
Advertisement
ಕೋವಿಡ್-19 ಹಾವಳಿ ತೀವ್ರವಾಗಿರುವ ಅಮೆರಿಕ, ಇಟಲಿ, ಬ್ರಿಟನ್, ಸ್ಪೈನ್ ಮತ್ತಿತರ ಕೆಲವು ದೇಶಗಳು ಇನ್ನೂ ಕನಿಷ್ಠ ಎರಡು ವರ್ಷಗಳ ಮಟ್ಟಿಗೆ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸುವ ಅಗತ್ಯವಿದೆ. 70 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮತ್ತು ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳುವುದು, ಸಾಮುದಾಯಿಕ ನೆಲೆಯಲ್ಲಿ ನಿಯಮಿತವಾಗಿ ಕೋವಿಡ್ ಪರೀಕ್ಷೆ ನಡೆಸುವಂಥ ಕ್ರಮಗಳನ್ನು ಅನುಷ್ಠಾನಿಸುವುದು ಈ ದೇಶಗಳಿಗೆ ಅನಿವಾರ್ಯವಾಗಬಹುದು. ಬಜೆಟ್‌ನ ದೊಡ್ಡ ಮೊತ್ತವನ್ನು ಕೋವಿಡ್‌ಗಾಗಿ ಮೀಸಲಿರಿಸುವ ಅನಿವಾರ್ಯತೆಯನ್ನು ಸಹಿಸಿಕೊಳ್ಳಬೇಕಾದೀತು ಎನ್ನುತ್ತಾರೆ ತಜ್ಞರು.
ಬದಲಾಗುತ್ತಾ ಜೀವನ ಶೈಲಿ?ವಿಜ್ಞಾನಿಗಳು ಹೇಳುವ ಸಲಹೆಗಳನ್ನೆಲ್ಲ ಪಾಲಿಸಿದರೆ ಜನರ ಜೀವನ ಶೈಲಿಯೇ ಬದಲಾಗುವ ಸಾಧ್ಯತೆಯಿದೆ. ಪಾಶ್ಚಾತ್ಯ ದೇಶಗಳಲ್ಲಿ ಪರಸ್ಪರರಿಗೆ ಶುಭಕೋರುವ ಹಸ್ತಲಾಘವ, ಅಪ್ಪುಗೆ, ಚುಂಬನದಂಥ ಪದ್ಧತಿಗಳು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುವ ಸಾಧ್ಯತೆಯೂ ಇಲ್ಲದಿಲ್ಲ. ಈ ಮೂಲಕ ಒಂದು ಸಂಸ್ಕೃತಿಯೇ ಪಲ್ಲಟವಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.