ಶಿರೂರ: ಗ್ರಾಮೀಣ ಭಾಗದ ಕೆಲ ಮಹಿಳೆಯರು ಬಿರು ಬೇಸಿಗೆ ದಿನಗಳಲ್ಲಿ ಗುಡಿ ಕೈಗಾರಿಕೆ ಹಾಗೂ ಗೃಹ ಉದ್ಯೋಗಗಳು, ಕೋವಿಡ್ 19 ಲಾಕ್‌ಡೌನ್‌ಗೆ ಸಿಲುಕಿ ಸಂಕಟಕ್ಕೆ ಸಿಲುಕಿ ಬಸವಳಿದಿದ್ದಾರೆ.
ಗ್ರಾಮದಲ್ಲಿ ಆರು ಶಾವಿಗೆ ಯಂತ್ರಗಳು ಆರು ಜನ ಮಹಿಳೆಯರು ಬೇರೆ ಬೇರೆಯಾಗಿ ಶ್ಯಾವಿಗೆಯಂತ್ರಗಳನ್ನ ಹಾಕಿ ದುಡಿಮೆ ಮಾಡುತ್ತಿದ್ದಾರೆ. ವರ್ಷದ ಏಪ್ರಿಲ್, ಮೇ ಈ ಎರಡು ತಿಂಗಳಲ್ಲಿ ಮಾತ್ರ ಈ ಯಂತ್ರಗಳು ಕಾರ್ಯ ನಿರ್ವಹಿಸುವುದರೊಂದಿಗೆ ತಮ್ಮ ಬಡ ಜೀವನ ಸಾಗಿಸುತ್ತಿದ್ದರು. ಸದ್ಯ ಈ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಮಹಿಳೆಯರಿಗೆ ಬಲವಾದ ಹೊಡೆತ ಬಿದ್ದಂತಾಗಿದೆ.
ಈ ಹಿಂದೆ ಗ್ರಾಮಾಂತರ ಪ್ರದೇಶದ ಮಹಿಳೆಯರು ಬೇಸಿಗೆಯಲ್ಲಿ ಶ್ಯಾವಿಗೆ ತಯಾರಿಸುವುದೇ ಒಂದು ಕೆಲಸವಾಗಿತ್ತು ಆದರೆ, ಕಳೆದ ಒಂದು ದಶಕದಿಂದ ಮನೆಯಲ್ಲಿಯೇ ಶ್ಯಾವಿಗೆ ತಯಾರಿಸುವ ಬದಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮದಲ್ಲಿ ಇಂತಹ ಶ್ಯಾವಿಗೆ ಮಾಡುವ ಯಂತ್ರಗಳಿಗೆ ಲಾಕ್‌ಡೌನ್ ಜಾರಿ ಹಿನ್ನೆಲೆ ಶ್ಯಾವಿಗೆ ಮಾಡುವ ಅಗತ್ಯ ರವೆ ಇನ್ನಿತರ ವಸ್ತುಗಳು ಪೂರೈಕೆಯಾಗುತ್ತಿಲ್ಲ. ಪ್ರತಿವರ್ಷದಂತೆ ಈ ವರ್ಷವು ಶ್ಯಾವಿಗೆ ಮಾಡಿಸಲು ಮಹಿಳಾ ಗ್ರಾಹಕರು ಮುಂದೆ ಬರುತ್ತಿಲ್ಲ. ಕಳೆದ ವರ್ಷ ತಿಂಗಳಿಗೆ ಅಂದಾಜು 2 ಕ್ವಿಂಟಲ್ ರವೆ ಶ್ಯಾವಿಗೆಗೆ ಖರ್ಚಾಗುತ್ತಿತ್ತು. ಈ ವರ್ಷ 50 ಕೆಜಿಯೂ ಖರ್ಚಾಗುತ್ತಿಲ್ಲ. ಸದ್ಯ ಬೇಡಿಕೆ ಇಲ್ಲದಂತಾಗಿದೆ ಎಂಬುದು ನೀಲಮ್ಮ ಚಿತ್ತರಗಿ ಅವರ ಮಾತು.
ಈ ಲಾಕ್‌ಡೌನ್‌ದಿಂದ 50ಕೆಜಿ ರವೆ ಪಾಕೇಟ್‌ಗೆ 2 ಸಾವಿರವರೆಗೂ ಖರ್ಚು ಆಗುತ್ತಿದ್ದು, ನಾವು ದರ ಹೆಚ್ಚಿಸಿದರೆ ಗ್ರಾಹಕರು ತಕರಾರು ಮಾಡುತ್ತಾರೆ. ನಮಗೆ ಕಡಿಮೆ ಲಾಭದೊಂದಿಗೆ ಕೆಲವು ಭಾರಿ ನಷ್ಟವಾಗುತ್ತದೆ ಎಂದು ಮಹಾದೇವಿ ಲಂಗಟದ ತಿಳಿಸಿದರು.
ಈ ಕೋವಿಡ್ 19 ಕರಿ ನೆರಳು ಗ್ರಾಮೀಣ ಭಾಗದ ಕೃಷಿ ತೋಟಗಾರಿಕೆ ಯೊಂದಿಗೆ ಇಂಥ ಗೃಹ ಉದ್ಯೋಗ ಹಾಗೂ ಗುಡಿ ಕೈಗಾರಿಕೆ ಮೇಲೆ ಬಿದ್ದಿದ್ದು ಕುಟುಂಬ ನಿರ್ವಹಣೆ ಕಷ್ಟವಾಗಿದೆ. ವರ್ಷದಲ್ಲಿ ಎರಡು ತಿಂಗಳು ಇರುವುದರಿಂದ ಬೇಡಿಕೆ ಕಡಿಮೆಯಾಗಿದ್ದು, ಸರಕಾರ ನೆರವಿಗೆ ಧಾವಿಸಬೇಕಿದೆ ಎಂಬುದು ಶ್ಯಾವಿಗೆ ತಯಾರಿಕೆ ಮಾಡುವ ಮಹಿಳೆಯರ ಮಾತಾಗಿದೆ.
-ಶಂಕರ ಹೂಗಾರ