Advertisement

ಕೋವಿಡ್ 19 : ತಲೆಕೆಡಿಸಿಕೊಳ್ಳದ ಶಹಾಬಾದ ಜನತೆ

03:52 PM Mar 27, 2020 | Suhan S |

ಶಹಾಬಾದ: ಕೋವಿಡ್ 19 ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಅನೇಕ ಕ್ರಮ ಕೈಗೊಂಡು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ತಾಲೂಕಿನ ಜನರು ಇದರ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದರಿಂದ ತಾಲೂಕಾಡಳಿತ ಜನರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ, ಲಾಠಿ ರುಚಿ ತೋರಿಸುತ್ತಿದ್ದಾರೆ.

Advertisement

ಜನರು ನಿರ್ಲಕ್ಷ್ಯ ಭಾವನೆ ತೋರುತ್ತಿದ್ದು ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಹಾಗೂ ಹಣ್ಣಿನ ಅಂಗಡಿಗಳು ಒಂದೇ ಕಡೆ ಇರುವುದರಿಂದ ಎಲ್ಲೆಡೆ ಜನಜಂಗುಳಿ ನಿರ್ಮಾಣವಾಗಿತ್ತು. ಡಿಸಿ ನಿಷೇಧಾಜ್ಞೆ ಹೊರಡಿಸಿದ್ದರೂ ಯಾವುದೇ ಜನರು ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗ ರಸ್ತೆ ಮೇಲೆ ಅನಾವಶ್ಯಕವಾಗಿ ಕಂಡು ಬಂದರೇ ಲಾಠಿ ರುಚಿ ತೋರಿಸುವುದಲ್ಲದೇ ಕ್ರಿಮಿನಲ್‌ ಕೇಸ್‌ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರೂ ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಹಾಗೂ ಮಾರುಕಟ್ಟೆಯಲ್ಲಿ ಇಕ್ಕಟ್ಟಾದ ಸ್ಥಳದಲ್ಲಿ ಜನರು ಸೇರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ನಿಗದಿತ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬೇಕು ಎಂದು ತಹಶೀಲ್ದಾರ್‌ ಸುರೇಶ ವರ್ಮಾ ತಿಳಿಸಿದ್ದಾರೆ.

ಲಾಠಿ ಪ್ರಹಾರ: ದೇಶವ್ಯಾಪಿ ಲಾಕ್‌ಡೌನ್‌ ಆದೇಶ ಹೊರಡಿಸಿ, ಮನೆಯಿಂದ ಯಾರು ಹೊರಗಡೆ ಬರದಂತೆ ಮನವಿ ಮಾಡಿದರೂ ನಗರದ ಕೆಲವು ಪಡ್ಡೆ ಹುಡುಗರು ವಿನಾಕಾರಣ ರಸ್ತೆಯ ಮೇಲೆ ಬರುತ್ತಿರುವುದನ್ನು ಕಂಡ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ಪಿಐ ಅಮರೇಶ.ಬಿ ಹಾಗೂ ಪಿಎಸ್‌ಐ ಮಹಾಂತೇಶ ಮತ್ತು ಯಲ್ಲಮ್ಮ ಅವರು ಸ್ವತಃ ತಾವೇ ರಸ್ತೆಗೆ ಇಳಿದು ಲಾಠಿ ರುಚಿ ತೋರಿಸಿ, ಮನೆಗೆ ತೆರಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next