ರೋಮ್/ಬೀಜಿಂಗ್: ಚೀನ ರಾಜಧಾನಿ ಬೀಜಿಂಗ್‌ನಲ್ಲಿ ಎರಡನೇ ಹಂತದ ಸೋಂಕು ವ್ಯಾಪಿಸಿರುವ ಭೀತಿ ಆವರಿಸಿರುವಂತೆಯೇ ಮತ್ತೆ 34 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಪೈಕಿ ರಾಜಧಾನಿಯಲ್ಲಿ 25 ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. 2 ಪ್ರಕರಣಗಳು ಹೇಬಿ ಪ್ರಾಂತ್ಯದಲ್ಲಿ ದೃಢಪಟ್ಟಿವೆ.
ಗುರುವಾರ ಸೋಂಕಿನಿಂದಾಗಿ ಸಾವು ಸಂಭವಿಸಿಲ್ಲ ಎಂದು ಆಯೋಗ ಹೇಳಿದೆ. ಬೀಜಿಂಗ್‌ನಲ್ಲಿ ಆಂಶಿಕ ಲಾಕ್‌ಡೌನ್ ಪರಿಸ್ಥಿತಿ ಜಾರಿಯಲ್ಲಿದ್ದು, ಎರಡನೇ ಹಂತದ ವ್ಯಾಪಿಸುವಿಕೆಗೆ ಸಾಕ್ಷಿಯಾದ ಬೀಜಿಂಗ್‌ನಲ್ಲಿ ಸಮರೋಪಾದಿಯಲ್ಲಿ ಸೋಂಕಿಗೆ ಕಡಿವಾಣ ಹಾಕುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಇದೇ ವೇಳೆ ಕ್ಲೋವರ್ ಬಯೋಫಾರ್ಮಾಸ್ಯುಟಿಕಲ್ಸ್ ಅಭಿವೃದ್ಧಿಪಡಿಸಿದ ಸಂಭಾವ್ಯ ಕೋವಿಡ್ ಲಸಿಕೆಯನ್ನು ಮಾನವನ ಮೇಲಿನ ಪ್ರಯೋಗ ಶುರು ಮಾಡಲಾಗಿದೆ. ಇದು ಚೀನದ ಆರನೇ ಕಂಪನಿಯಾಗಿದೆ.
ಡಿಸೆಂಬರ್‌ನಲ್ಲೇ ಪ್ರವೇಶ?: ಇಟಲಿಗೆ ಸೋಂಕು ಡಿಸೆಂಬರ್‌ನಲ್ಲಿಯೇ ಕಾಲಿಟ್ಟರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಮಿಲಾನ್ ಮತ್ತು ಟ್ಯೂರಿನ್ ನಗರಗಳಲ್ಲಿನ ತ್ಯಾಜ್ಯ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಸೋಂಕಿನ ಅಂಶ ಪತ್ತೆಯಾಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಖಚಿತಪಡಿಸಿದೆ. ಅಲ್ಲಿ ಮೊದಲ ಪ್ರಕರಣ ಫೆಬ್ರವರಿಯಲ್ಲಿ ದೃಢಪಟ್ಟಿತ್ತು. ಸೋಂಕಿನಿಂದಾಗಿ 40 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.