Advertisement
ವೈರಸ್ ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಮುಂದಾಗುತ್ತಿಲ್ಲ. ಮತ್ತೂಂದೆಡೆ ಆ ವ್ಯಕ್ತಿ ದೂರದ ಪ್ರಯೋಗಾಲಯಕ್ಕೆ ಬಂದು ತಪಾಸಣೆಗೊಳಪಡುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತವೆ. ಜತೆಗೆ ಅದು ಕ್ವಾರಂಟೈನ್ ಉಲ್ಲಂಘನೆ ಕೂಡ ಆದಂತಾಗುತ್ತದೆ. ಈ ಕಾರಣಗಳಿಂದ ಮನೆಗಳಿಗೆ ತೆರಳಿಯೇ ಗಂಟಲು ದ್ರಾವಣದ ಮಾದರಿ ಸಂಗ್ರಹಿಸುವುದು ಸೂಕ್ತ ಎಂಬುದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ವಾದ.
Related Articles
Advertisement
ಇನ್ನು ರಾಜ್ಯದಲ್ಲಿ ಎರಡು ಖಾಸಗಿ ಸೇರಿ ಒಟ್ಟಾರೆ 12 ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸ ಲಾಗುತ್ತಿದೆ. ಜತೆಗೆ ಕೆ.ಸಿ. ಜನರಲ್ ಆಸ್ಪತ್ರೆ, ಸಿ.ವಿ. ರಾಮನ್ ನಗರ ಬೆಂಗಳೂರಿನಲ್ಲೇ 5-6 ಕಡೆ ಮಾದರಿ ಸಂಗ್ರಹ ಕೇಂದ್ರಗಳು, ಸುಮಾರು 30 ಜ್ವರ ತಪಾಸಣಾ ಕೇಂದ್ರಗಳೂ ಇವೆ. ಅಲ್ಲಿ ಲಕ್ಷಣಗಳು ಕಂಡುಬಂದರೆ, ಅಂತಹ ವ್ಯಕ್ತಿಯನ್ನು ತಕ್ಷಣ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಹೇಳಿದರು.
ಪ್ರಕರಣ-ಕಿಟ್ ಲಭ್ಯತೆಯಲ್ಲಿ ಅಂತರ?: ಈ ಮಧ್ಯೆ ರಾಜ್ಯದಲ್ಲಿ ಕೋವಿಡ್-19 ವೈರಾಣು ಸೋಂಕು ಪರೀಕ್ಷೆಗೆ ಪ್ರಯೋಗಾಲಯಗಳಿವೆ. ಆದರೆ, ಆ ವೈರಾಣು ಪತ್ತೆ ಮಾಡುವ ಕಿಟ್‌ಗಳ ಪೂರೈಕೆ ನಿರೀಕ್ಷಿತ ಮಟ್ಟದ ಲ್ಲಿಲ್ಲ. ಒಂದೆಡೆ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತೂಂದೆಡೆ ಕಿಟ್‌ಗಳ ಲಭ್ಯತೆ ನಡುವಿನ ಅಂತರ ದಿಂದ ಸಮರ್ಪಕ ಮಾದರಿ ಸಂಗ್ರಹ ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯಕತೆಯೂ ಕೇಳಿಬರುತ್ತಿದೆ.
ಬುಧವಾರ ಒಂದೇ ದಿನ 143 ಜನ ಕೋವಿಡ್-19 ವೈರಸ್ ಲಕ್ಷಣಗಳಿರುವವರು ಸೇರ್ಪಡೆಯಾಗಿದ್ದು, ಒಟ್ಟಾರೆ 200 ಜನರ ಗಂಟಲು ದ್ರಾವಣ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ನಿರ್ಧರಿಸಿದೆ. ನಿರ್ಣಾಯಕ ಘಟ್ಟದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಮಾದರಿ ಸಂಗ್ರಹ ಪ್ರಮಾಣ ಏರಿಕೆ ಆಗಲಿದೆ. ಅದಕ್ಕೆ ತಕ್ಕಂತೆ ಕಿಟ್‌ಗಳ ಪೂರೈಕೆ ಆಗುತ್ತಿಲ್ಲ ಎಂಬ ಅಪಸ್ವರ ಕೇಳಿಬರುತ್ತಿದೆ.
ಆದರೆ, ಅಂತಹ ಯಾವುದೇ ರೀತಿ ಕೊರತೆ ಇಲ್ಲ. “ಸರ್ಕಾರಿ ಪ್ರಯೋಗಾಲಯಗಳಿಗೆ ಐಸಿಎಂಆರ್ ನಿಂದ ಕಿಟ್‌ಗಳು ಪೂರೈಕೆ ಆಗುತ್ತಿದ್ದು, ಖಾಸಗಿ ಪ್ರಯೋಗಾಲಯಗಳು ಭಾರತೀಯ ತಯಾರಿಕೆ ಕಂಪೆನಿಗಳಿಗೆ ಬೇಡಿಕೆ ಇಟ್ಟಿವೆ. ಸದ್ಯಕ್ಕೆ ಸಾಕಷ್ಟು ತಪಾಸಣೆ ಸಾಮರ್ಥ್ಯ ಇದೆ’ ಎಂದು ನಿಮ್ಹಾನ್ಸ್‌ನ ನ್ಯೂರೊ ವೈರಾಲಜಿ ವಿಭಾಗದ ಮುಖ್ಯಸ್ಥ ಡಾ.ವಿ. ರವಿ ಸ್ಪಷ್ಟಪಡಿಸುತ್ತಾರೆ.
ಇದುವರೆಗೆ 3,580ಕ್ಕೂ ಅಧಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ 9 ಪ್ರಯೋಗಾಲಯಗಳ ಜತೆಗೆ 2-3 ದಿನದಲ್ಲಿ ಬೆಂಗಳೂರಿನ ನಿಮ್ಹಾನ್ಸ್, ವೆನ್‌ಲಾಕ್ ಆಸ್ಪತ್ರೆ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಸೇರಿ ಇನ್ನೂ 3 ಪ್ರಯೋಗಾಲಯಗಳು ಸೇರ್ಪಡೆ ಆಗಲಿವೆ. ದಿನಕ್ಕೆ 200 ಮಾದರಿಗಳ ತಪಾಸಣೆ ಗೊಳಪಡಿಸಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಾದರಿ ತಪಾಸಣೆಗೂ ದಾನ ನೀಡಿ : ಯುಎಸ್‌ಎಫ್ಎಬಿ ಮತ್ತು ಪುಣೆಯ ಮೈಲ್ಯಾಬ್ಸ್ನಿಂದ ಕಿಟ್‌ಗಳು ಪೂರೈಕೆ ಆಗುತ್ತವೆ. ಇದರಲ್ಲಿ ಯುಎಸ್‌ಎಫ್ಎಬಿ ಕಿಟ್‌ನ ಮೂಲಕ ಮಾಡುವ ಪ್ರತಿ ತಪಾಸಣೆಗೆ 4,500 ರೂ. ಆಗುತ್ತದೆ. ಮೈಲ್ಯಾಬ್ಸ್ ದರ 1,200 ರೂ. ಎರಡರ ಸಾಮರ್ಥ್ಯವೂ ಪ್ರತಿ ವೃತ್ತ (6 ತಾಸುಗಳು)ದಲ್ಲಿ ನೂರು ಮಾದರಿ ತಪಾಸಣೆ ಮಾಡಬಹುದಾಗಿದೆ. ಬರೀ ಅನ್ನ- ಆಹಾರ ಹಾಗೂ ಪರಿಹಾರ ನಿಧಿಗಳಿಗೆ ದಾನಗಳು ಸೀಮಿತ ವಾಗುತ್ತಿವೆ. ಆ ಪೈಕಿ ಸ್ವಲ್ಪ ಪ್ರಮಾಣವಾದರೂ ದಾನಿಗಳು ಮಾದರಿ ತಪಾಸಣೆಗೂ ನೀಡಬೇಕು. ಆಗ ಸರ್ಕಾರದ ಮೇಲಿನ ಹೊರೆ ಮತ್ತಷ್ಟು ಕಡಿಮೆ ಆಗುತ್ತದೆ ಎಂದು ಆರೋಗ್ಯ ಇಲಾಖೆಯ ವೈದ್ಯರೊಬ್ಬರು ತಿಳಿಸುತ್ತಾರೆ.
– ವಿಜಯಕುಮಾರ್ ಚಂದರಗಿ