Advertisement

6 ಸಾವಿರ ದಾಟಿದ ಮೃತರ ಸಂಖ್ಯೆ ; ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿದೆ ಕೋವಿಡ್ 19

12:13 AM Mar 21, 2020 | Team Udayavani |

ಹೊಸದಿಲ್ಲಿ: ಜಗತ್ತಿನಾದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಮಹಾಮಾರಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 6 ಸಾವಿರ ದಾಟಿದೆ. ಸ್ಪೇನ್‌ನಲ್ಲಿ ಕೋವಿಡ್‌-19 ವೈರಸ್‌ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ರವಿವಾರ ಒಂದೇ ದಿನ 105 ಮಂದಿ ಮೃತಪಟ್ಟಿದ್ದಾರೆ.

Advertisement

ಇಲ್ಲಿ 24 ಗಂಟೆಗಳ ಅವಧಿಯಲ್ಲಿ 2 ಸಾವಿರ ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7753 ಆಗಿದೆ. ಇರಾನ್‌ (113), ಇಟಲಿಯಲ್ಲೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ, ಜಾಗತಿಕವಾಗಿ ಮೃತರ ಸಂಖ್ಯೆಯಲ್ಲೂ ಏಕಾಏಕಿ ಹೆಚ್ಚಳ ಕಂಡುಬಂದಿದೆ.

ವಿಶ್ವದಲ್ಲಿ ಒಟ್ಟು 6,036 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 1,59,844 ಆಗಿದೆ. ಈ ಪೈಕಿ ಚೀನದಲ್ಲಿ ಸಾವಿನ ಸಂಖ್ಯೆ 3,199 ಆಗಿದ್ದರೂ, ಸದ್ಯ ಸೋಂಕಿತರು ಹಾಗೂ ಮೃತರ ಪ್ರಮಾಣ ಅಲ್ಲಿ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ.

450 ಭಾರತೀಯರು ಸ್ವದೇಶಕ್ಕೆ: ಇನ್ನು, ಕೊರೊನಾ ಪೀಡಿತ ದೇಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 450 ಭಾರತೀಯರು ರವಿವಾರ ಸ್ವದೇಶಕ್ಕೆ ಮರಳಿದ್ದಾರೆ. ಎರಡು ಏರ್‌ಇಂಡಿಯಾ ವಿಮಾನಗಳ ಮೂಲಕ ಇಟಲಿಯಿಂದ 218 ಮಂದಿಯನ್ನು (ಬಹುತೇಕ ಮಂದಿ ವಿದ್ಯಾರ್ಥಿಗಳು) ಹಾಗೂ ಇರಾನ್‌ನಿಂದ 230 ಭಾರತೀಯರನ್ನು ವಾಪಸ್‌ ಕರೆತರಲಾಗಿದೆ. ಇವರನ್ನು ಪ್ರತ್ಯೇಕವಾಗಿ ನಿಗಾ ಕೇಂದ್ರಗಳಲ್ಲಿ ಇರಿಸಲಾಗಿದ್ದು, 14 ದಿನಗಳ ಕಾಲ ಇಲ್ಲೇ ಇರಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದ ಬುಲಾœನಾದಲ್ಲಿ ಶನಿವಾರ ಕೋವಿಡ್‌-19 ಶಂಕಿತ 71 ವರ್ಷದ ವೃದ್ಧನ ಸಾವಿಗೆ ಕೊರೊನಾ ಕಾರಣವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವರ ರಕ್ತದ ಮಾದರಿ ಪರೀಕ್ಷೆಯ ವರದಿಯಲ್ಲಿ ಕೊರೊನಾ ನೆಗೆಟಿವ್‌ ಎಂಬುದು ಖಾತ್ರಿಯಾಗಿದೆ ಎಂದಿದ್ದಾರೆ.

Advertisement

ಇದೇ ವೇಳೆ, ಪ್ರಧಾನಿ ಮೋದಿ ಅವರು ರವಿವಾರ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಜತೆ ಮಾತುಕತೆ ನಡೆಸಿದ್ದು, ವೈರಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ತಿರುಪತಿಯಲ್ಲಿ ಕೆಲ ಸೇವೆ ರದ್ದು
ಕೊರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ದೇಗುಲ ಭೇಟಿ ಮಾಡುವುದು ಬೇಡ ಎಂದು ಹೇಳಿರುವ ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಆಡಳಿತ ಮಂಡಳಿ ಕೆಲವೊಂದು ಸೇವೆಗಳನ್ನೇ ರದ್ದು ಮಾಡಿದೆ. ಇದೇ ಮೊದಲ ಬಾರಿಗೆ ಇಂಥ ತೀರ್ಮಾನ ತೆಗೆದುಕೊಳ್ಳಲಾಗಿದೆ.

ರದ್ದು ಮಾಡಲಾಗಿರುವ ಸೇವೆಗಳಲ್ಲಿ ಕೆಲವೊಂದು ದಿನವಹಿ ಮತ್ತು ವಾರಕ್ಕೆ ಒಮ್ಮೆ ನಡೆಸುವ ಸೇವೆಗಳಿವೆ. ಈ ಮೂಲಕ ದೇಗುಲಕ್ಕೆ ಭಕ್ತರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಆಡಳಿತ ಮಂಡಳಿ ಹೊಂದಿದೆ ಎಂದು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ನಿರ್ಬಂಧ
ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಆವರಣಕ್ಕೆ ಪ್ರವಾಸಿಗರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಸಂಕೀರ್ಣ ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತಿತ್ತು. ಆದರೆ, ಈಗ ಈ ಪ್ರವಾಸಕ್ಕೆ ಬ್ರೇಕ್‌ ಹಾಕಲಾಗಿದ್ದು, ಮುಂದಿನ ಆದೇಶದವರೆಗೆ ತನ್ನ ಮ್ಯೂಸಿಯಂ ಅನ್ನೂ ಮುಚ್ಚಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಹೊದಿಕೆಗಳನ್ನು ತರಲು ಪ್ರಯಾಣಿಕರಿಗೆ ಸೂಚನೆ


ಕೊರೊನಾ ವೈರಸ್‌ ಭೀತಿಯಿಂದಾಗಿ ರೈಲುಗಳಲ್ಲಿನ ಸ್ಲೀಪರ್‌ ಕೋಚ್‌ಗಳಲ್ಲಿ ಇಡಲಾಗಿದ್ದ ಎಲ್ಲ ರೀತಿಯ ಹೊದಿಕೆಗಳನ್ನು ಹಿಂಪಡೆಯಲು ನಿರ್ಧರಿಸಿರುವ ರೈಲ್ವೇ ಇಲಾಖೆ, ಪ್ರಯಾಣಿಕರು ತಮ್ಮದೇ ಆದ ಹೊದಿಕೆಗಳನ್ನು ತರುವಂತೆ ಮನವಿ ಮಾಡಿದೆ. ಸ್ಲೀಪರ್‌ ಕೋಚ್‌ಗಳ ಕಿಟಕಿಯ ಪರದೆಗಳು, ಹೊದಿಕೆಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಅವನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಹಾಗಾಗಿ, ಪ್ರಯಾಣಿಕರು ತಮ್ಮದೇ ಆದ ಹೊದಿಕೆಗಳನ್ನು ತರಬೇಕಿದೆ ಎಂದು ಇಲಾಖೆ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next