Advertisement

ಹಳಿ ಏರುವುದೆಂದು ಆರ್ಥಿಕತೆ?

09:00 AM May 30, 2020 | Hari Prasad |

ದೇಶವು ಕಟ್ಟುನಿಟ್ಟಾದ ಲಾಕ್‌ಡೌನ್‌ ಜಾರಿಗೆ ತಂದಿದ್ದರಿಂದಾಗಿ, ಭಾರೀ ಪ್ರಮಾಣದಲ್ಲಿ ಸೋಂಕು ಹರಡುವಿಕೆಯನ್ನು ತಪ್ಪಿಸಿದಂತಾಯಿತು ಎಂದು ತಜ್ಞರು ಹೇಳುತ್ತಾರೆ.

Advertisement

ಆದರೆ, ಇದೇ ವೇಳೆಯಲ್ಲೇ, ಲಾಕ್‌ಡೌನ್‌ ದೇಶದ ಆರ್ಥಿಕ ಸ್ವಾಸ್ಥ್ಯಕ್ಕೆ ನೀಡಿರುವ ಪೆಟ್ಟೂ ಅಗಾಧವಾಗಿದೆ.

ಕೋವಿಡ್ ಪರಿಣಾಮವಾಗಿ ದೇಶದ ಆರ್ಥಿಕತೆಗೆ 30.3 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಈ ನಷ್ಟವು ಕೇಂದ್ರ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‌ಗಿಂತಲೂ ಅಧಿಕ ಎನ್ನುವುದನ್ನು ಗಮನಿಸಬೇಕು. ಹಾಗೆಂದು, ಇದು ನಮ್ಮ ದೇಶವೊಂದೇ ಎದುರಿಸುತ್ತಿರುವ ಸಂಕಷ್ಟವಲ್ಲ. ಕೊರೊನಾ ಕಾಲಿಟ್ಟ ದೇಶಗಳೆಲ್ಲವೂ ಈಗ ಅತೀವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಾರಂಭಿಸಿವೆ….

ಸೆಪ್ಟಂಬರ್‌ವರೆಗೂ ಇರಲಿದೆಯೇ?
ಲಾಕ್‌ಡೌನ್‌ ನಾಲ್ಕನೇ ಚರಣ ಆರಂಭವಾದಾಗಿನಿಂದ ಭಾರತದಲ್ಲಿ ನಿತ್ಯ ಕೋವಿಡ್ ಸೋಂಕಿತರ ಪ್ರಮಾಣ 6 ಸಾವಿರಕ್ಕೂ ಅಧಿಕ ದಾಖಲಾಗುತ್ತಿದೆ. ಆದರೆ, ಇದಿನ್ನೂ ರೋಗದ ಉತ್ತುಂಗವಲ್ಲ ಎಂಬುದು ತಜ್ಞರ ಎಚ್ಚರಿಕೆ. ಹಾಗಿದ್ದರೆ, ಇನ್ನು ಎಷ್ಟು ತಿಂಗಳು ದೇಶವು ಈ ಸಂಕಷ್ಟವನ್ನು ಎದುರಿಸಬೇಕು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.

ಏಕೆಂದರೆ, ರೋಗ ಉಲ್ಬಣಾವಸ್ಥೆಗೆ ತಲುಪಿ, ಗ್ರೋತ್‌ ಕರ್ವ್‌ (ಹರಡುವಿಕೆ-ಬೆಳವಣಿಗೆ ಪ್ರಮಾಣ) ಕೆಳಕ್ಕೆ ಇಳಿಯುವವರೆಗೂ ಆರ್ಥಿಕ ಚಟುವಟಿಕೆಗಳು ಹಿಂದಿನ ವೇಗಕ್ಕೆ ಮರಳುವುದಕ್ಕೆ ಸಾಧ್ಯವಾಗುವುದಿಲ್ಲ. ಎಸ್‌ಬಿಐನ ಅಂದಾಜಿನ ಪ್ರಕಾರ, ಕೋವಿಡ್ ಜೂನ್‌ ತಿಂಗಳ ಅಂತ್ಯದ ವೇಳೆಗೆ ಉಲ್ಬಣಿಸಬಹುದು. ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ತನೆ ಇಳಿಕೆ ಕಾಣಲಾರಂಭಿಸಿ, ಸೆಪ್ಟಂಬರ್‌ ಮಧ್ಯಭಾಗದಲ್ಲಿ ಬಹುಪಾಲು ತಗ್ಗಬಹುದು.

Advertisement

ಎಂಎಸ್‌ಎಂಇಗಳಲ್ಲಿ ಕಳವಳ
ರಾಜ್ಯದಲ್ಲಿನ 6.6 ಲಕ್ಷಕ್ಕೂ ಅಧಿಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಂಎಸ್‌ಎಂಇ) ಸಹ ಹೆಚ್ಚಾಗಿ ಮುಂಬಯಿಯನ್ನೇ ಅವಲಂಬಿಸಿವೆ. ರಾಜ್ಯದಲ್ಲಿನ ಎಂಎಸ್‌ಎಂಇಗಳ ತಿಂಗಳ ಟರ್ನ್ ಓವರ್‌ 37,500 ಕೋಟಿ ರೂಪಾಯಿಗಳಷ್ಟಿದ್ದು, ರಾಜ್ಯದ ಒಟ್ಟಾರೆ ಉತ್ಪನ್ನದಲ್ಲಿ (ಜಿಎಸ್‌ಡಿಪಿಯಲ್ಲಿ) ಈ ಉದ್ಯಮಗಳ ಪಾಲು 25 ಪ್ರತಿಶತದಷ್ಟಿದೆ ಎನ್ನುವುದು ಗಮನಾರ್ಹ. ಮುಂಬರುವ ತಿಂಗಳಲ್ಲಿ ಇವುಗಳಲ್ಲಿ 20 ಪ್ರತಿಶತದಷ್ಟು ಉದ್ಯಮಗಳು ಮಾತ್ರ ಮತ್ತೆ ಸಕ್ರಿಯವಾಗಬಲ್ಲವು ಎಂಬ ಅಂದಾಜು ಉದ್ಯಮ ಪರಿಣತರದ್ದು.

ಖರೀದಿಗೆ ಹಿಂಜರಿಯುತ್ತಾರೆ
ಕೋವಿಡ್ ನಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸದೇ ಇರುವ ವಲಯವೇ ಇಲ್ಲ. ಅದರಲ್ಲೂ ಕೆಲ ಸಮಯದಿಂದ ತೀವ್ರತರ ಬಿಕ್ಕಟ್ಟು ಎದುರಿಸುತ್ತಾ ಬಂದ ದೇಶದ ಆಟೊಮೊಬೈಲ್‌ ಇಂಡಸ್ಟ್ರಿಗಂತೂ ಚೇತರಿಸಿಕೊಳ್ಳಲು ಕನಿಷ್ಠ ಒಂದು ವರ್ಷವಂತೂ ಹಿಡಿಯಲಿದೆ ಎನ್ನುವುದು ಉದ್ಯಮ ಪರಿಣತ, ಖ್ಯಾತ ಲೇಖಕ ಡಾ. ಸುನೈನ್‌ ಘೋಷ್‌ ಅವರ ಅಭಿಪ್ರಾಯ. ‘ಕೋವಿಡ್ ನಿಂದಾಗಿ ಎಲ್ಲರಿಗೂ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈಗಿರುವ ಕೆಲಸ ನಾಳೆ ಇರುತ್ತದೋ ಇಲ್ಲವೋ ಎಂಬ ಆತಂಕವು, ಅವರ ಖರೀದಿ ಪ್ರವೃತ್ತಿಯ ಮೇಲೂ ಪ್ರಭಾವ ಬೀರುತ್ತಿದೆ.

ಅನೇಕರು ಕಾರು ಸೇರಿದಂತೆ ಇತರೆ ಆಟೊಮೊಬೈಲ್‌ಗಳನ್ನು ಇಎಂಐನ ಮೇಲೆ ಖರೀದಿಸುತ್ತಾರೆ. ಆದರೆ, ಈಗ ಅವರು ಆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಆರ್ಥಿಕತೆಯು ಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ, ಆಟೊಮೊಬೈಲ್‌ ವಲಯಕ್ಕೆ ಬಹಳ ಸಂಕಷ್ಟವಿರಲಿದೆ” ಎನ್ನುತ್ತಾರವರು. ಇದಷ್ಟೇ ಅಲ್ಲದೇ, ಪ್ರವಾಸೋದ್ಯಮ, ರಿಯಲ್‌ ಎಸ್ಟೇಟ್‌, ಟ್ರಾನ್ಸ್‌ಪೋರ್ಟ್‌ ವಲಯದ ಜಿವಿಎದಲ್ಲಿ (ಗ್ರಾಸ್‌ ವ್ಯಾಲ್ಯೂ ಆ್ಯಡೆಡ್‌) 50 ಪ್ರತಿಶತಕ್ಕೂ ಹೆಚ್ಚು ನಷ್ಟ ದಾಖಲಾಗಿದೆ…


ರಾಜ್ಯಕ್ಕೂ ಆರ್ಥಿಕ ಆಘಾತ
ಕೋವಿಡ್‌-19 ನಿರ್ವಹಣೆಯಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಉತ್ತಮ ಹೆಜ್ಜೆಯಿಡುತ್ತಿದ್ದರೂ ಆರ್ಥಿಕತೆಯನ್ನು ಮತ್ತೆ ಹಳಿಯೇರಿಸುವುದು ದೊಡ್ಡ ಸವಾಲಾಗಿದೆ. ಇಂದು ಭಾರತದಲ್ಲಿ ಪ್ರತಿಯೊಂದು ರಾಜ್ಯವೂ ಇನ್ನೊಂದರ ಮೇಲೆ ಒಂದಲ್ಲ ಒಂದು ಕಾರಣಕ್ಕೆ ಅವಲಂಬಿತವಾಗಿರುವುದು ಇದಕ್ಕೆ ಕಾರಣ.

ಕರ್ನಾಟಕದ ವಿಷಯಕ್ಕೆ ಬರುವುದಾದರೆ, ರಾಜ್ಯದ ಅನೇಕ ಕ್ಷೇತ್ರಗಳು ಕಚ್ಚಾ ವಸ್ತುಗಳಿಗಾಗಿ ಮುಂಬಯಿ ಮತ್ತು ಚೆನ್ನೈನ ಮೇಲೆ ಅವಲಂಬಿತವಾಗಿವೆ. ಒಂದು ಅಂದಾಜಿನ ಪ್ರಕಾರ, ವಿವಿಧ ವಲಯಗಳಿಗೆ 50 ಪ್ರತಿಶತಕ್ಕಿಂತಲೂ ಅಧಿಕ ಕಚ್ಚಾವಸ್ತುಗಳು ಈ ಎರಡು ನಗರಗಳಿಂದಲೇ ಬರುತ್ತವೆ.

ರಾಸಾಯನಿಕಗಳಿಂದ ಹಿಡಿದು, ಔಷಧಿ ಹಾಗೂ ಬಿಡಿ ಭಾಗಗಳವರೆಗೆ ಕರ್ನಾಟಕದ ವಿವಿಧ ನಗರಗಳು ಮುಂಬಯಿಯನ್ನು ಅವಲಂಬಿಸಿವೆ ಎನ್ನುತ್ತದೆ ಎಫ್ಐಸಿಸಿಐ ಸಂಸ್ಥೆ. ಇದಷ್ಟೇ ಅಲ್ಲದೇ ಇತರೆ ರಾಜ್ಯಗಳಿಂದ, ಅದರಲ್ಲೂ ಗುಜರಾತ್‌ನಿಂದ ಮುಂಬಯಿ ಮೂಲಕ ಹಾದುಬರುವ ಕಚ್ಚಾವಸ್ತುಗಳ ಆಮದಿಗೂ ಸದ್ಯಕ್ಕೆ ಪೆಟ್ಟು ಬಿದ್ದಿದೆ. ಮಹಾರಾಷ್ಟ, ಗುಜರಾತ್‌ ಹಾಗೂ ತಮಿಳುನಾಡು ಕೋವಿಡ್ ನಿಂದ ಬಹುಬೇಗನೇ ಚೇತರಿಸಿಕೊಳ್ಳದೇ ಇದ್ದರೆ ಹೇಗೆಂಬ ಆತಂಕವೂ ಎದುರಾಗಿದೆ.

ಅಂದು ಪ್ರವಾಹ, ಇಂದು…
ಕೋವಿಡ್ ರಾಜ್ಯಕ್ಕೆ ಅಡಿಯಿಡುವುದಕ್ಕೂ ಮುನ್ನವೇ ರಾಜ್ಯದ ಆರ್ಥಿಕ ಸ್ಥಿತಿ ದುರ್ಬಲವಾಗಿತ್ತು. ಅದರಲ್ಲೂ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರವಾಹದಿಂದಾಗಿ ತತ್ತರಿಸಿದ್ದ ರಾಜ್ಯದ 13 ಜಿಲ್ಲೆಗಳ ಜನ ಜೀವನವನ್ನು ಸುಧಾರಿಸುವ ಬೃಹತ್‌ ಸವಾಲೂ ಸರ್ಕಾರದ ಎದುರು ಇತ್ತು.

ನೆರೆಯ ಹೊಡೆತದಿಂದ ರಾಜ್ಯದ ಹಲವು ಭಾಗಗಳು ಚೇತರಿಸಿಕೊಂಡಿರಲಿಲ್ಲ. ಇಂಥದ್ದರಲ್ಲಿ ಕೋವಿಡ್ ಕೂಡ ರಾಜ್ಯಕ್ಕೆ ಬೃಹತ್‌ ಆರ್ಥಿಕ ಸಂಕಟವನ್ನು ಎದುರಿಟ್ಟಿದೆ. ಆದರೆ, ಮುಂದಿನ ದಿನಗಳಲ್ಲಿ ಮುಂಬೈ, ಚೆನ್ನೈ ಸೇರಿದಂತೆ ದೇಶಾದ್ಯಂತ ಸರಕು-ಸಾರಿಗೆ ಸೇರಿದಂತೆ ಅನೇಕ ವಲಯಗಳಲ್ಲಿ ನಿರ್ಬಂಧಗಳು ಸಡಿಲಿಕೆಯಾಗಬಹುದಾದ್ದರಿಂದ, ಆರ್ಥಿಕತೆಯು ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next