Advertisement

“ಕೋವಿಡ್‌-19 ನಿಯಂತ್ರಣ: ಸಹಕಾರ ಮುಖ್ಯ’

12:32 AM Jun 30, 2020 | Sriram |

ಕೋವಿಡ್‌-19 ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜನರು ಮತ್ತು ಪೊಲೀಸ್‌ ಸಿಬಂದಿ ತಂತಮ್ಮ ಸುರಕ್ಷತೆಯ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಗಳೂರಿನ ನೂತನ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ಸಲಹೆ ನೀಡಿದ್ದಾರೆ. ಪೊಲೀಸ್‌ ಆಯುಕ್ತರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಅವರು ಉದಯವಾಣಿ ಸುದಿನಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

Advertisement

ಅಧಿಕಾರ ಸ್ವೀಕಾರದ ಬಳಿಕ ನಿಮ್ಮ ಪ್ರಥಮ ಆದ್ಯತೆ ಏನು?
ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌-19 ನಮ್ಮ ಮುಂದಿರುವ ಪ್ರಮುಖ ಸವಾಲು. ಹಾಗಾಗಿ ಸಾರ್ವಜನಿಕರು, ಪೊಲೀಸ್‌ ಸಿಬಂದಿ ಸಹಿತ ಎಲ್ಲರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು.

ಕೋವಿಡ್‌-19 ಬಗ್ಗೆ ಜಾಗೃತಿಯ ಕೊರತೆ ಇದೆ ಎಂದು ಅನಿಸುತ್ತಿದೆಯೇ?
ಸದ್ಯ ಪರಿಸ್ಥಿತಿಯನ್ನು ಗಮನಿಸಿದರೆ ಜಾಗೃತಿ ಸಾಕಷ್ಟಿಲ್ಲ ಎಂದೆನಿಸುತ್ತಿದೆ. ಇನ್ನಷ್ಟು ಜಾಗೃತಿ ಯಾಗಬೇಕಿದೆ. ಈ ದಿಶೆಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು.

ಕೋವಿಡ್‌-19 ಸೋಂಕು ಕೆಲವು ಮಂದಿ ಪೊಲೀಸ್‌ ಅಧಿಕಾರಿಗಳು, ಸಿಬಂದಿಗೂ ತಗಲಿದ್ದು, ಅವರಿಗೆ ನೀಡುವ ಸಲಹೆಗಳೇನು ?
ಪೊಲೀಸರಿಗೆ ಸೋಂಕು ತಗಲಿರುವುದು ನನ್ನ ಗಮನಕ್ಕೆ ಬಂದಿದೆ. ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಕಮಿಷನರೆಟ್‌ನ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ, ಕರ್ತವ್ಯ ನಿರ್ವಹಣೆಯ ಸಂದರ್ಭ ಪೊಲೀಸ್‌ ಸಿಬಂದಿ ವಹಿಸಬೇಕಾಗಿರುವ ಮುನ್ನೆಚ್ಚರಿಕೆ, ಸುರಕ್ಷತೆ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದೇನೆ.

ಜನರಿಗೆ ನೀಡುವ ಸಂದೇಶವೇನು?
ಸಾರ್ವಜನಿಕರು, ಪೊಲೀಸರ ಸಹಿತ ಎಲ್ಲರೂ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯುವ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಬೇಕು. ಸೋಂಕು ತಗಲದಂತೆ ಜಾಗೃತಿ ಮೂಡಿಸುವ ಕುರಿತಂತೆ ಪೊಲೀಸ್‌ ಕಮಿಷನರೆಟ್‌ ವತಿಯಿಂದ ಸರ್ವ ಸಹಕಾರವನ್ನು ಒದಗಿಸಲಾಗುವುದು.

Advertisement

ಮಂಗಳೂರಿನ ಆಯುಕ್ತರಾಗಿ ಅಧಿಕಾರ ವಹಿಸಿ ಕೊಂಡಿದ್ದೀರಾ, ಏನನಿಸುತ್ತಿದೆ?
ಚಿಕ್ಕಮಗಳೂರಿನಲ್ಲಿ ಎಸ್‌ಪಿ ಆಗಿದ್ದಾಗ ಮಂಗಳೂರಿ ನಲ್ಲಿರುವ ಪಶ್ಚಿಮ ವಲಯದ ಐಜಿಪಿ ಕಚೇರಿಗೆ ಹಲವಾರು ಬಾರಿ ಬಂದಿದ್ದೇನೆ. ಹಾಗಾಗಿ ಮಂಗಳೂರು, ಇಲ್ಲಿನ ಜನರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಪ್ರಸ್ತುತ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ನನಗೆ ಮಂಗಳೂರಿನ ಜನರು ಸರ್ವ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ.

2004ರ ಐಪಿಎಸ್‌ ಅಧಿಕಾರಿ
ವಿಕಾಸ್‌ ಕುಮಾರ್‌ ಅವರು 2004 ರ ಐಪಿಎಸ್‌ ಅಧಿಕಾರಿ. ಮೂಲತಃ ಬಿಹಾರದವರು. ಭಟ್ಕಳ ದಲ್ಲಿ ಎಎಸ್‌ಪಿ ಆಗಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ ಜಿಲ್ಲೆಗಳಲ್ಲಿ ಎಸ್‌ಪಿ ಆಗಿ, ಬೆಂಗಳೂರು ನಗರ ಡಿಸಿಪಿ ಆಗಿ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿ, ಯುವಜನ ಸೇವಾ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಇದೀಗ ಮಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಮೊದಲು ಕಾರ್ಕಳ ದಲ್ಲಿ ನಕ್ಸಲ್‌ ನಿಗ್ರಹ ಪಡೆಯ ಡಿಐಜಿ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next