ಚಿಕ್ಕಬಳ್ಳಾಪುರ: ಮಹಾರಾಷ್ಟ್ರದಿಂದ ಕರೆ ತಂದಿರುವ ವಲಸೆ ಕಾರ್ಮಿಕರಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ 19 ಸೋಂಕು ಸ್ಫೋಟಗೊಳ್ಳುತ್ತಲೇ ಇದ್ದು, ಶುಕ್ರವಾರವಷ್ಟೇ 47 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು, ಶನಿವಾರ ಹೊಸದಾಗಿ 26 ಮಂದಿಯಲ್ಲಿ ದೃಢಪಡುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ -19 ಶತಕದ ಅಂಗಳಕ್ಕೆ ಬಂದು ನಿಂತಿದೆ.
ಸೋಂಕಿತರು 99ಕ್ಕೆ ಏರಿಕೆ: ಸತತ 2 -3 ತಿಂಗಳಿಂದಲೂ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ 26ಕ್ಕೆ ಸೀಮಿತವಾಗಿ ಆ ಪೈಕಿ 19 ಮಂದಿ ಆಸ್ಪತ್ರೆಯಿಂದ ಡಿಸಾcರ್ಜ್ ಆಗುವ ಮೂಲಕ ಜೀವರು ನೆಮ್ಮದಿಯಿಂದ ಇದ್ದರು. ಆದರೆ ಲಾಕ್‌ಡೌನ್ ಸಡಿಲಿಕೆ ಬಳಿಕ ಮಹಾರಾಷ್ಟ್ರಕ್ಕೆ ತೆರಳಿದ್ದ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ ಎರಡೇ ದಿನದಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 99ಕ್ಕೆ ಏರಿದ್ದು, ಎರಡು ದಿನದಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 73 ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಜನರಲ್ಲಿ ಮಹಾಮಾರಿಯ ಆತಂಕ ಆವರಿಸುವಂತೆ ಮಾಡಿದೆ.
ಮೂರಂಕಿ ದಾಟುತ್ತೆ: ಜಿಲ್ಲೆಯ ಪಾಲಿಗೆ ಕರಾಳವಾಗಿದ್ದ ಕಳೆದ ಶುಕ್ರವಾರ ಒಂದೇ ದಿನ 47 ಪ್ರಕರಣಗಳು ಪತ್ತೆಯಾದರೆ, ಶನಿವಾರ ಸಂಜೆ ವೇಳೆಗೆ 26 ಹೊಸ ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಶತಕಕ್ಕೆ ಒಂದು ಪ್ರಕರಣವಷ್ಟೇ ಬಾಕಿ ಇದೆ.
ಬಾಗೇಪಲ್ಲಿಗೂ ವಿಸ್ತರಿಸದ ಸೋಂಕು: ಜಿಲ್ಲೆಯಲ್ಲಿ ಇದುವರೆಗೂ ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ವಾಣಿಜ್ಯ ನಗರಿ ಚಿಂತಾ ಮಣಿಗೆ ಮಾತ್ರ ಸೀಮಿತವಾಗಿದ್ದ ಕೋವಿಡ್ 19 ಸೋಂಕು, ಈಗ ಬಾಗೇಪಲ್ಲಿಗೂ ವಿಸ್ತರಿಸಿ ಕೊಂಡಿದೆ. ಮಹಾರಾಷ್ಟ್ರದಿಂದ ಆಗಮಿಸಿರುವ ಕೂಲಿ ಕಾರ್ಮಿಕರಲ್ಲಿ ಬಹುತೇಕರು ಬಾಗೇಪಲ್ಲಿ ತಾಲೂಕಿಗೆ ಸೇರಿದವರಾಗಿದ್ದು, ಈ ಪೈಕಿ ಸದ್ದುಪಲ್ಲಿ ತಾಂಡಾಗಳಿಗೆ ಸೇರಿದ ಒಟ್ಟು 13 ಮಂದಿಯಲ್ಲಿ ಸೋಂಕು ಇರುವುದು ದೃಢ ಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ.ಬಾಬುರೆಡ್ಡಿ “ಉದಯವಾಣಿ’ಗೆ ತಿಳಿಸಿದರು.
ಹೊರ ರಾಜ್ಯಗಳಿಂದ ಜಿಲ್ಲೆಗೆ ವಲಸೆ ಕಾರ್ಮಿಕರು ಆಗಮಿ ಸುತ್ತಿರುವುದರಿಂದ ಕೋವಿಡ್ 19 ಸೋಂಕು ಹೆಚ್ಚಾಗಿದೆಯೆ ಹೊರತು ಜಿಲ್ಲೆಯ ನಾಗರಿಕರಲ್ಲಿ ಕೋವಿಡ್ 19 ಸೋಂಕು ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಬರೀ 5 ಕೋವಿಡ್-19 ಸಕ್ರಿಯ ಪ್ರಕರಣಗಳು ಬಿಟ್ಟರೆ ಉಳಿದೆಲ್ಲಾ ಹೊರ ರಾಜ್ಯಗಳಿಂದ ಬಂದ ವಲಸಿಗರಲ್ಲಿ ಕಾಣಿಸಿಕೊಂಡ ಪ್ರಕರಣಗಳು.
-ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ