ಹಾಸನ: ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ 19 ಸಕಾರಾತ್ಮಕ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಕೈಗೊಂಡ ಮುಂಜಾಗ್ರತಾ ಕ್ರಮಗಳು ವರವಾಗಿ ಪರಿಣಮಿಸಿವೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಅದೇ ಸಮಯಕ್ಕೆ ಹೊರ ರಾಜ್ಯಗಳಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾಗಲಾರಂಭಿಸಿದಾಗ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತು. ಜನವರಿ ತಿಂಗಳಿನಿಂದಲೇ ವಿದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಿದ ಆರೋಗ್ಯ ಇಲಾಖೆ ಅವರನ್ನು ಸತತವಾಗಿ ಪರೀಕ್ಷೆಗೊಳಪಡಿಸಿತು.
ಮಾರ್ಚ್ ತಿಂಗಳಿನಲ್ಲಿ ಹೊರ ರಾಜ್ಯಗಳಿಂದ ಬರುವವರ ಮೇಲೂ ನಿಗಾ ವಹಿಸಿತು. ಲಾಕ್ ಡೌನ್ ಜಾರಿಯಾದ ನಂತರ ಪೊಲೀಸ್ ಇಲಾಖೆ ಬಿಗಿಕ್ರಮ ಕೈಗೊಂಡಿದ್ದರಿಂದ ವಲಸಿಗರ ಪ್ರವೇಶ ನಿರ್ಬಂಧವಾಯಿತು. ಇದರಿಂದ ಜಿಲ್ಲೆಯಲ್ಲಿ ಈವರೆಗೂ ಕೋವಿಡ್ 19 ಪ್ರಕರಣಗಳು ವರದಿಯಾಗಿಲ್ಲ.
48 ಸಾವಿರ ಜನರ ಮೇಲೆ ನಿಗಾ:ಲಾಕ್ ಡೌನ್ ಘೋಷಣೆಯಾದ ನಂತರ ಪೊಲೀಸ್ ಇಲಾಖೆ ಜಿಲ್ಲೆಯ ಗಡಿಭಾಗಗಳನ್ನು ಬಂದ್ ಮಾಡಿ ಜಿಲ್ಲೆಯನ್ನು ಪ್ರವೇಶಿಸುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಲಾರಂಭಿಸಿತು. ಹೊರ ರಾಜ್ಯಗಳಿಂದ ಈವರೆಗೆ 2,400 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರೆಲ್ಲರನ್ನೂ ಪರೀಕ್ಷೆಗೊಳಪಡಿಸಿ ಅವರ ಮೇಲೆ ನಿಗಾ ವಹಿಸಿರುವ ಆರೋಗ್ಯ ಇಲಾಖೆ ಹೊರ ಜಿಲ್ಲೆಗಳಿಂದ ಆಗಮಿಸಿರುವ 48ಸಾವಿರ ಜನರ ಮೇಲೂ ನಿರಂತರ ನಿಗಾ ವಹಿಸಿದೆ. 1,520 ಜನರಿಗೆ ಜ್ವರ: ಕೊರೊನಾ ಪ್ರಕರಣಗಳು ದೇಶದಲ್ಲಿ ವರದಿಯಾಗಲಾರಂಭಿಸಿದ ನಂತರ ಜಿಲ್ಲೆಯಲ್ಲಿ ಜ್ವರ ಕಾಣಿಸಿಕೊಂಡವರ ಮೇಲೂ ನಿರಂತರ ನಿಗಾ ವಹಿಸಿದ ಇಲಾಖೆ 1,520 ಜನರಲ್ಲಿ ಜ್ವರ ಕಾಣಿಸಿಕೊಂಡಿರುವುದನ್ನು ಪತ್ತೆ ಹಚ್ಚಿ ಅವರನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸಿದೆ. ಅವರಲ್ಲಿ ಕೋವಿಡ್ 19 ಲಕ್ಷಣಗಳಿಲ್ಲ ಎಂದು ಖಾತರಿಯಾದ ನಂತರವಷ್ಟೇ ಅವರನ್ನು ಸ್ವತಂತ್ರವಾಗಿ ಚಿಕಿತ್ಸೆ ಪಡೆಯಲು ಬಿಟ್ಟಿದೆ.
ಜಿಲ್ಲಾಡಳಿತ ಸನ್ನದ್ಧ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆಸ್ಪತ್ರೆಯ ಲ್ಲಿ 50 ಹಾಸಿಗೆಗಳ ಪ್ರತ್ಯೇಕ ಕೋವಿಡ್ 19 ವಾರ್ಡ್ ಸಜ್ಜುಗೊಳಿಸಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 50 ಐಸಿಯು ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 3 ಐಸಿಯು ವಾರ್ಡುಗಳು ಹಾಗೂ ಜಿಲ್ಲಾಸ್ಪತ್ರೆಯಲ್ಲಿ 18, ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 10 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿಎಚ್‌ಒ ಸತೀಶ್ ಕುಮಾರ್ ತಿಳಿಸಿದ್ದಾರೆ.
ಜನರು ಲಾಕ್‌ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
–ಡಾ.ಕೆ.ಎಂ.ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
-ಎನ್. ನಂಜುಂಡೇಗೌಡ