ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಹತ್ತು ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ಕರ್ನಾಟಕದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 207ಕ್ಕೇರಿದೆ.
ಈ ಸೋಂಕಿತರ ಪೈಕಿ ಮೈಸೂರಿನ 8 ವರ್ಷದ ಗಂಡು ಮಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 11 ವರ್ಷದ ಹೆಣ್ಣು ಮಗುವಿಗೆ ಸೋಂಕು ಖಚಿತವಾಗಿದೆ. ಮೈಸೂರು ಮೂಲದ ಸೋಂಕಿತ ಸಂಖ್ಯೆ 103 ಮತ್ತು 159ರ ಮಗನಿಗೆ ಸೋಂಕು ಖಚಿತವಾಗಿದೆ.
ಇಂದಿನ ಹೊಸ ಹತ್ತು ಸೋಂಕಿತರಲ್ಲಿ ಎಲ್ಲರೂ ಈ ಮೊದಲು ಕಂಡು ಬಂದಿರುವ ಸೋಂಕಿತರ ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ.
ಇಂದಿನ ಹತ್ತು ಪ್ರಕರಣಗಳಲ್ಲಿ ಐದು ಪ್ರಕರಣಗಳು ಮೈಸೂರಿನಿಂದಲೇ ದೃಢವಾಗಿದೆ. 8 ವರ್ಷದ ಮಗು, 103 ಸಂಖ್ಯೆ ಸೋಂಕಿತನ 48 ವರ್ಷದ ಅತ್ತೆ, 33 ವರ್ಷದ ಗಂಡು ( ಸೋಂಕಿತ ಸಂಖ್ಯೆ 111 ಸಂಪರ್ಕ ಫಾರ್ಮ ಕಂಪನಿಯ ಉದ್ಯೋಗಿ), 28 ವರ್ಷದ ಹೆಣ್ಣು ( ಸಂಖ್ಯೆ 85ರ ಹೆಂಡತಿ), 48 ವರ್ಷದ ಹೆಣ್ಣು ( ಸಂಖ್ಯೆ 183ರ ಪತ್ನಿ) ಮೈಸೂರಿನವರಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಇಬ್ಬರಿಗೆ ಸೋಂಕು ತಾಗಿದೆ. ಸೋಂ.167 ಮತ್ತು 168ರ ಸಂಪರ್ಕಕ್ಕೆ ಬಂದ 48 ವರ್ಷದ ಗಂಡು ಮತ್ತು ಅವರದೇ ಸಂಪರ್ಕಕ್ಕೆ ಬಂದ 57 ವರ್ಷದ ಪುರುಷನಿಗೆ ಸೋಂಕು ತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಬ್ಬರಿಗೆ ಸೋಂಕು ತಾಗಿದ್ದು, ಸೋಂ. 169ರ ಸಹೋದರ 35 ವರ್ಷದ ಪುರುಷ ಮತ್ತು ಅವರ 11 ವರ್ಷದ ಮಗಳಿಗೆ ಸೋಂಕು ದೃಢವಾಗಿದೆ.
ಕಲಬುರಗಿಯ 55 ವರ್ಷದ ವ್ಯಕ್ತಿಗೆ ಸೋಂಕು ತಾಗಿರುವುದು ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು 207 ಸೋಂಕು ಪ್ರಕರಣಗಳು ದೃಢವಾಗಿದೆ. ಈ ಪೈಕಿ ಆರು ಪ್ರಕರಣಗಳು ಮರಣ ಹೊಂದಿದ್ದು, 30 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತದೆ.