ಲಕ್ನೋ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಲ್ಲಿ ಕೋವಿಡ್ 19 ಸೋಂಕು ದೃಢವಾಗುತ್ತಿದ್ದಂತೆ ಆಕೆಯನ್ನು ಭೇಟಿಯಾಗಿದ್ದವರೆಲ್ಲ ಇದೀಗ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಗಾಯಕಿ ಕನಿಕಾ ಕಪೂರ್ ಅವರು ಕಳೆದ ವಾರ ಲಂಡನ್ ನಿಂದ ವಾಪಾಸಾದ ಬಳಿಕ ಲಕ್ನೋದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಮತ್ತು ಈ ಪಾರ್ಟಿಯಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ಭಾಗವಹಿಸಿದ್ದರು. ಕನಿಕಾ ಅವರಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಆಗಿರುವುದು ಶುಕ್ರವಾರದಂದು ದೃಢಪಟ್ಟಿತ್ತು.
ರಾಜಸ್ಥಾನದ ಮಾಜೀ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಪುತ್ರ ಹಾಗೂ ಸಂಸದರಾಗಿರುವ ದುಷ್ಯಂತ್ ಸಿಂಗ್ ಅವರ ಪತ್ನಿ ನಿಹಾರಿಕಾ, ಉತ್ತರಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಅವರ ಪತ್ನಿ ಬಸುಂದರಾ ಕುಮಾರಿ, ರಿತು ಸಿಂಗ್ ಸೇರಿದಂಥೆ ಹಲವಾರು ರಾಜಕೀಯ ಮತ್ತು ಸಿನಿ ಕ್ಷೇತ್ರದ ಗಣ್ಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಬಹುಜನ ಸಮಾಜವಾದಿ ಪಕ್ಷದ ಸಂಸದ ಅಕ್ಬರ್ ಅಹಮ್ಮದ್ ಡಂಪಿ ಅವರ ಸೋದರ ಸಂಬಂಧಿಯಾಗಿರುವ ಅದಿಲ್ ಅಹಮ್ಮದ್ ಅವರ ಮನೆಯಲ್ಲಿ ಈ ಔತಣ ಕೂಟ ಏರ್ಪಟ್ಟಿತ್ತು.
ಕನಿಕಾ ಅವರ ತಂದೆ ರಾಜೀವ್ ಕಪೂರ್ ಅವರು ಹೇಳುವಂತೆ ಲಕ್ನೋಗೆ ಬಂದ ನಂತರ ಕನಿಕಾ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದಾಳೆ. ಈ ಮೂರು ವಿವಿಧ ಪಾರ್ಟಿಗಳಲ್ಲಿ ಕನಿಕಾ ಏನಿಲ್ಲವೆಂದರೂ ಸುಮಾರು 400 ಜನರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ ಎಂಬುದು ಆಕೆಯ ತಂದೆಯ ಅಂದಾಜು. ಆದರೆ ತಂದೆಯ ಮಾತನ್ನು ಅಲ್ಲಗಳೆದಿರುವ ಕನಿಕಾ, ತಾನು ಒಂದು ಪಾರ್ಟಿಯಲ್ಲ ಮಾತ್ರವೇ ಭಾಗವಹಿಸಿರುವುದಾಗಿ ಹೇಳಿಕೊಂಡಿದ್ದಾಳೆ.
ತನ್ನಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಪಾಸಿಟಿವ್ ಇರುವುದು ಪತ್ತೆಯಾದ ಬಳಿಕ ಇದೀಗ ಕನಿಕಾಳನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಯ ಸಂಪರ್ಕಕ್ಕೆ ಬಂದಿರುವವರ ಪೈಕಿ ವಸುಂಧರಾ ರಾಜೆ ಸಿಂಧಿಯಾ, ದುಷ್ಯಂತ್ ಸಿಂಗ್ ಮೊದಲಾದವರು ಇದೀಗ ಸ್ವಯಂ ನಿರ್ಬಂಧ ವಿಧಿಸಿಕೊಂಡು ಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದಾರೆ.
ಮಾರ್ಚ್ 9ರಂದು ಲಂಡನ್ ನಿಂದ ಮುಂಬಯಿಗೆ ಆಗಮಿಸಿದ ಕನಿಕಾ ಕಪೂರ್ ಮಾ.10ರಂದು ಅಲ್ಲೇ ಉಳಿದುಕೊಳ್ಳುತ್ತಾರೆ. ಮಾ.11ಕ್ಕೆ ಲಕ್ನೋ ತಲುಪಿದ ಕನಿಕಾ 13 ಮತ್ತು 14ರಂದು ಎರಡು ಪ್ರತ್ಯೇಕ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ. ಮಾರ್ಚ್ 15ರಂದು ಕನಿಕಾ ಭಾಗವಹಿಸಿದ್ದ ಪಾರ್ಟಿಯಲ್ಲಿ ವಸುಂಧರಾ ರಾಜೆ, ದುಷ್ಯಂತ್ ಸಿಂಗ್, ಉತ್ತರ ಪ್ರದೇಶದ ಆರೋಗ್ಯ ಸಚಿವ ಸೇರಿದಂತೆ ರಾಜಕಾರಣಿಗಳು ಮತ್ತು ಹೈಪ್ರೊಫೈಲ್ ವ್ಯಕ್ತಿಗಳೆಲ್ಲಾ ಭಾಗವಹಿಸಿದ್ದರು.
ಮಾರ್ಚ್ 18ರಂದು ಕನಿಕಾ ಅವರಿಗೆ ಅಲ್ಪ ಪ್ರಮಾಣದ ಜ್ವರ ಕಾಣಿಸಿಕೊಂಡಿದ್ದು ಕಿಂಗ್ಸ್ ಜಾರ್ಜ್ಸ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಾಳೆ.
ಮಾರ್ಚ್ 20ರಂದು ಈಕೆಯಲ್ಲಿ ಕೋವಿಡ್ 19 ವೈರಸ್ ಲಕ್ಷಣಗಳು ಪಾಸಿಟಿವ್ ಕಂಡುಬಂದ ಹಿನ್ನಲೆಯಲ್ಲಿ ಕನಿಕಾ ಅವರನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜ್ಯುವೇಟ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.