ಕಲಬುರಗಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.
ಕಲಬುರಗಿ ನಗರದ 30 ವರ್ಷದ ಮಹಿಳೆ (ಪಿ-1038) ಸೇರಿ ಮೂವರಿಗೆ ಸೋಂಕು ದೃಢಪಟ್ಟಿದೆ. ಈ ಮಹಿಳೆಗೆ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.
ಅಫಜಲಪುರ ತಾಲೂಕಿನ ಅಳ್ಳಗಿ ಗ್ರಾಮದ 80 ವರ್ಷದ ವೃದ್ಧಗೆ (ಪಿ-1039) ಸೋಂಕು ಖಚಿತವಾಗಿದೆ. ಜ್ವರ ಮತ್ತು ಉಸಿರಾಟದ ಸಮಸ್ಯೆ ಬಳಲುತ್ತಿದ್ದ ವೃದ್ಧ ಮೇ 1ರಂದು ಅಫಜಲಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ನಂತರ ಮೇ 12ರಂದು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ. ಅಲ್ಲಿ ಕೋವಿಡ್ ಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಕಲಬುರಗಿ ಜಿಮ್ಸ್ ಗೆ ವೃದ್ಧನನ್ನು ಸಿಬ್ಬಂದಿ ರವಾನಿಸಿದ್ದರು. ಗಂಟಲು ದ್ರಾವಣ ಮಾದರಿ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿದೆ.
ಮತ್ತೊಂದು ಪ್ರಕರಣದಲ್ಲಿ ಮುಂಬೈನಿಂದ ಬಂದಿದ್ದ ವಲಸೆ ಕಾರ್ಮಿಕನಿಗೆ (ಪಿ-1040) ಸೋಂಕು ಕಾಣಿಸಿಕೊಂಡಿದೆ. ಕಾಳಗಿ ತಾಲೂಕಿನ ನಿವಾಸಿಯಾದ ಈತ ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ.