ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-19 ಸಂಕಷ್ಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅನ್ಯರಾಜ್ಯಗಳಿಂದ ಬಂದ ಜನರು ಗಂಟಲು ದ್ರವ ಪರೀಕ್ಷೆ ಪ್ರಮಾಣ ಹೆಚ್ಚುತ್ತಿದ್ದಂತೆ ಸೋಂಕು ದೃಢವಾಗುತ್ತಿರುವ ಸಂಖ್ಯೆಯೂ ಏರಿಕೆ ಕ್ರಮದಲ್ಲಿದೆ.
ಜಿಲ್ಲೆಯಲ್ಲಿ ಇಂದು 16 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆಯಾಗಿದೆ.
ಇಂದಿನ 16 ಸೋಂಕಿತರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇವರಿಬ್ಬರು ದುಬೈನಿಂದ ಆಗಮಿಸಿದ್ದರು. ಉಳಿದ 14 ಮಂದಿಯೂ ಮಹಾರಾಷ್ಟ್ರದಿಂದ ಪ್ರಯಾಣಿಸಿದವರಾಗಿದ್ದಾರೆ.
16 ಪ್ರಕರಣಗಳ ಪೈಕಿ 6 ಮಂದಿ ಮಹಿಳೆಯರು, ಇಬ್ಬರು ಪುರುಷರು ಮತ್ತು 8 ಮಂದಿ ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರವಿವಾರ 23 ಹೊಸ ಸೋಂಕು ಪ್ರಕರಣ ವರದಿಯಾಗಿತ್ತು. ಅದರಲ್ಲೂ ಮೂವರು ಪೊಲೀಸ್ ಸಿಬ್ಬಂದಿಗೆ ಸೋಂಕು ತಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿತ್ತು.
ರಾಜ್ಯದಲ್ಲಿ ಇಂದು 69 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ. ಇದರಲ್ಲಿ 680 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 53 ಜನ ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.