ಉಡುಪಿ: ಜಿಲ್ಲೆಯಲ್ಲಿ ಇಂದು 45 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಕೋವಿಡ್-19 ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ.
ಕಳೆದೆರಡು ವಾರಗಳಲ್ಲಿ ಭಾರಿ ಸಂಖ್ಯೆಯ ಸೋಂಕಿತರನ್ನು ಕಂಡಿದ್ದ ಉಡುಪಿ ಜಿಲ್ಲೆಯಲ್ಲಿ ರವಿವಾರ ಸೋಂಕಿತರ ಪ್ರಮಾಣ ತಗ್ಗಿತ್ತು. ರವಿವಾರ ಜಿಲ್ಲೆಯಲ್ಲಿ 13 ಜನರಿಗೆ ಕೋವಿಡ್ 19 ಸೋಂಕು ದೃಢವಾಗಿತ್ತು. ಆದರೆ ಇಂದು ಮತ್ತೆ 45 ಜನರಿಗೆ ಕಾಣಿಸಿಕೊಂಡಿದೆ.
ಮಹಾರಾಷ್ಟ್ರ ಸೇರಿದಂತೆ ಅನ್ಯರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಜನರಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿತ್ತು. ಉಡುಪಿ ಜಿಲ್ಲೆಗೆ ಎಂಟು ಸಾವಿರಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಇವರಲ್ಲಿ ಬಹುತೇಕ ಗಂಟಲು ದ್ರವ ಪರೀಕ್ಷೆ ವರದಿ ಜಿಲ್ಲಾಡಳಿತದ ಕೈ ಸೇರಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎನ್ನಲಾಗಿದೆ.
ಜಿಲ್ಲೆಯ ಇಂದಿನ ಎಲ್ಲಾ 44 ಪ್ರಕರಣಗಳು ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಾಗಿದ್ಧಾರೆ. ಒಂದು ಮಾತ್ರ ಸ್ಥಳೀಯ ಪ್ರಕರಣವಾಗಿದೆ.
ಜಿಲ್ಲೆಯಲ್ಲಿ ಇಂದಿನ 45 ಸೋಂಕಿತರ ಕಾರಣದಿಂದ ಒಟ್ಟು ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಇಂದು 215 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 318 ಜನರು ಗುಣಮುಖರಾಗಿದ್ದಾರೆ. ಉಳಿದ 628 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.