ಬೆಂಗಳೂರು: ನಗರದಲ್ಲಿ ಕೋವಿಡ್-19 ವೈರಸ್ ಸೋಂಕಿತ 50 ವರ್ಷದ ವ್ಯಕ್ತಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆ ಕಟ್ಟಡ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಏ.24 ರಂದು ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು.
ಸೋಮವಾರ ಬೆಳಗ್ಗೆ ಎಂದಿನಂತೆ ಉಪಹಾರ ಸೇವಿಸಿದ್ದ ವ್ಯಕ್ತಿ ಏಕಾಏಕಿ ಆಸ್ಪತ್ರೆ ತುರ್ತು ದ್ವಾರದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಒಂದೇ ವಾರ್ಡ್ ನಲ್ಲಿದ್ದ 45 ವರ್ಷದ ಕೋವಿಡ್-19 ವೈರಸ್ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದರು. ಸೋಮವಾರ ಬೆಳಗ್ಗೆ ಈ ವ್ಯಕ್ತಿ ಮಾನಸಿಕ ಹಿಂಸೆ, ಭಯದಿಂದ ಸಾವಿಗೀಡಾಗಿರಬಹುದು ಎಂದು ಹೇಳಲಾಗುತ್ತಿದೆ.
ಈವರೆಗೂ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಕಟ್ಟಡದ ಬಳಿಯಲ್ಲಿಯೇ ಮೃತದೇಹ ಬಿದ್ದಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಬಳಿಕ ಅಲ್ಲಿಂದ ಮೃತದೇಹ ಸ್ಥಳಾಂತರಿಸಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.