ತುಮಕೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಹೆಚ್ಚಾಗುತ್ತಿರುವಂತೆ ಮೃತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಈ ಮಹಾಮಾರಿಗೆ ಈವರೆಗೆ ಜಿಲ್ಲೆಯಲ್ಲಿ ಮೂವರು ಉಸಿರು ಚೆಲ್ಲಿದ್ದಾರೆ.
ತುಮಕೂರಿನ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಗೆ ಕೋವಿಡ್ 19 ಸೋಂಕು ಇರುವುದ ದೃಢವಾಗಿತ್ತು.
ನೆಲಮಂಗಲದ ವೀರ ಸಾಗರದ ನಿವಾಸಿಯಾದ ಸೋಂಕಿತ ಸಂಖ್ಯೆ 1686 ರೋಗಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಮೂವರು ಬಲಿಯಾಗಿದ್ದಾರೆ. ಮೊದಲ ಬಲಿ ಶಿರಾ ವೃದ್ದ, ಎರಡನೇ ಬಲಿ ತುಮಕೂರಿನ ವೃದ್ದ ಈಗ ಮೂರನೇ ಬಲಿ ನೆಲಮಂಗಲ ಮೂಲದ ವೃದ್ದೆಯಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ.
ಜಿಲ್ಲೆಯಲ್ಲಿ ಒಟ್ಟು 26 ಸೋಂಕು ಪ್ರಕರಣಗಳಿದೆ. ರವಿವಾರ ಎರಡು ಹೊಸ ಕೋವಿಡ್-19 ಪ್ರಕರಣಗಳು ದೃಢವಾಗಿದೆ. ಜಿಲ್ಲೆಯಲ್ಲಿ ಸದ್ಯ 18 ಸಕ್ರಿಯ ಪ್ರಕರಣಗಳಿವೆ.