ಪುಣೆ: ಕೋವಿಡ್ 19 ಸೋಂಕಿಗೆ ಒಳಗಾಗಿ ಐಸೋಲೇಶನ್ ನಲ್ಲಿ ಇದ್ದ 70ವರ್ಷದ ಅಜ್ಜ ಪರಾರಿಯಾಗಿದ್ದು, ಸುಮಾರು 17 ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಮನೆ ತಲುಪಿದ ಘಟನೆ ಪುಣೆಯ ಯರವಾಡಾದಲ್ಲಿ ನಡೆದಿದೆ.
ಪುರಸಭೆಯ ಕ್ವಾರಂಟೈನ್ ವ್ಯವಸ್ಥೆ ಅತ್ಯಂತ ಕೆಟ್ಟದಾಗಿತ್ತು ಇದಕ್ಕಾಗಿ ತಾನು ಅಲ್ಲಿಂದ ಪರಾರಿಯಾಗಿದ್ದೆ ಎಂದು ಅಜ್ಜ ತಿಳಿಸಿರುವುದಾಗಿ ವರದಿ ಹೇಳಿದೆ. ಕ್ವಾರಂಟೈನ್ ನಲ್ಲಿ ಇದ್ದ ರೋಗಿಗಳಿಗೆ ಆಹಾರ ಕೊಡುತ್ತಿರಲಿಲ್ಲ. ಅಲ್ಲದೇ ಶೌಚಾಲಯ ಸ್ವಚ್ಚಗೊಳಿಸದೆ ಗಬ್ಬು ನಾರುತ್ತಿತ್ತು ಎಂದು ದೂರಿದ್ದಾರೆ.
ಮನೆಯ ಹೊರಭಾಗದಲ್ಲಿ ಹಿರಿಯ ವ್ಯಕ್ತಿ ಅಸಹಾಯಕರಾಗಿ ಕುಳಿತಿರುವುದನ್ನು ಮಂಗಳವಾರ ಸಂಜೆ ಸ್ಥಳೀಯರು ಗಮನಿಸಿದ್ದರು. ಕೆಲವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟ ನಂತರ ಅಜ್ಜನ ಕುಟುಂಬದ ಇತರ ಸದಸ್ಯರನ್ನು ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.
ಏಪ್ರಿಲ್ 25ರಂದು ಈ ಅಜ್ಜನಿಗೂ ಕೋವಿಡ್ 19 ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಸ್ಥಳೀಯರು ಕೂಡಲೇ ಅಧಿಕಾರಿಗಳಿಗೆ ಅಜ್ಜನ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಈ ಸುದ್ದಿ ಯರವಾಡ ಪ್ರದೇಶದ ಕಾರ್ಪೋರೇಟರ್ ಸಿದ್ದಾರ್ಥ ದೆಂಡೆ ಅವರನ್ನು ತಲುಪಿದ್ದು, ಅವರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಐಸೋಲೇಶನ್ ನಲ್ಲಿ ಇರಿಸುವಂತೆ ಸೂಚಿಸಿದ್ದರು ಎಂದು ವರದಿ ತಿಳಿಸಿದೆ.
ಹಿರಿಯ ವ್ಯಕ್ತಿಗೆ ಕೂಡಲೇ ಆಶ್ರಯ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಕಾರ್ಪೋರೇಟರ್ ತಿಳಿಸಿದ್ದರು. ಆದರೆ ನಗರಪಾಲಿಕೆ ಅಧಿಕಾರಿಗಳಿಗೆ ಕ್ವಾರಂಟೈನ್ ನಲ್ಲಿದ್ದ ಅಜ್ಜ ನಾಪತ್ತೆಯಾಗಿದ್ದ ವಿಷಯ ತಿಳಿದಿರಲಿಲ್ಲವಾಗಿತ್ತು ಎಂದು ಹೇಳಿದ್ದಾರೆ. ಕೋವಿಡ್ 19 ಶಂಕಿತ ರೋಗಿಯನ್ನು ಮೊದಲು ಏ.24ರಂದು ರಕ್ಷಕ್ ನಗರ್ ದ ಕ್ವಾರಂಟೈನ್ ಸೆಂಟರ್ ಗೆ ಕರೆದೊಯ್ದಿದ್ದರು. ಅಜ್ಜನಿಗೆ ಕೋವಿಡ್ 19 ಇದ್ದಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ನಂತರ ಬೆಲೆವಾಡಿಯ ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ಕನ್ಸ್ ಟ್ರಕ್ಷನ್ ಮ್ಯಾನೇಜ್ ಮೆಂಟ್ ಆ್ಯಂಡ್ ರಿಸರ್ಚ್ (ಎನ್ ಐಸಿಎಂಎಆರ್)ಗೆ ಕರೆದೊಯ್ಯಲಾಗಿತ್ತು ಎಂದು ಕಾರ್ಪೋರೇಟರ್ ತಿಳಿಸಿದ್ದಾರೆ.
ಕ್ವಾರಂಟೈನ್ ಸೆಂಟರ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಕಾರ್ಪೋರೇಟರ್ ಮನವಿ ಮಾಡಿಕೊಂಡಿದ್ದಾರೆ.