Advertisement

ಕಡಬ ಪರಿಸರದಲ್ಲಿ ಕೊರೊನಾ ಭೀತಿ

01:17 AM Mar 15, 2020 | Sriram |

ಕಡಬ: ಅಬುಧಾಬಿಯಿಂದ ಮರಳಿದ ಕುಟ್ರಾಪ್ಪಾಡಿಯ ವ್ಯಕ್ತಿ ಶೀತ, ಕೆಮ್ಮಿನಿಂದ ಬಳಲುತ್ತಿದ್ದರೂ ಆಸ್ಪತ್ರೆಗೆ ಹೋಗದೆ ಎಲ್ಲೆಡೆ ಸುತ್ತಾಡುತ್ತಿದ್ದ ಕಾರಣ ಕೊರೊನಾ ಭೀತಿಯಲ್ಲಿರುವ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಘಟನೆ ಕಡಬದಲ್ಲಿ ನಡೆದಿದೆ.

Advertisement

ಬಡಬೆಟ್ಟು ನಿವಾಸಿಯೊಬ್ಬರು ತನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಮಾ. 11ರಂದು ಊರಿಗೆ ತಲುಪಿದ್ದರು. ಆಗಲೇ ಅವರು ಶೀತ, ಕೆಮ್ಮಿನಿಂದ ಬಳಲುತ್ತಿರುವುದನ್ನು ಗಮನಿಸಿದ್ದ ಸ್ಥಳೀಯರು ವಿಚಾರವನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಆರೋಗ್ಯ ಸಿಬಂದಿ ಕಡಬ ಸರಕಾರಿ ಆಸ್ಪತ್ರೆಗೆ ಬರುವಂತೆ ಸೂಚಿಸಿದರೂ ಆತ ಸ್ಪಂದಿಸದೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಜನರ ಭೀತಿಗೆ ಕಾರಣವಾಗಿತ್ತು.

ಆ ವ್ಯಕ್ತಿ ತನ್ನ ಮನೆ ಹಾಗೂ ಚರ್ಚ್‌ ನಲ್ಲಿ ನಡೆದ ಅಂತ್ಯಸಂಸ್ಕಾರದ ವಿಧಿಗಳಲ್ಲಿ ಭಾಗವಹಿಸಿದ್ದರು. ಆ ಸಂದರ್ಭ ದಲ್ಲಿ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಹಿತೈಷಿಗಳು ಅವರನ್ನು ತಬ್ಬಿ ಹಿಡಿದು ಸಂತೈಸಿದ್ದರು. ಬಳಿಕ ಅವರು ಗ್ರಾ.ಪಂ. ಕಚೇರಿ, ಕಡಬ ಪೇಟೆ, ಹೊಸಮಠ ಪೇಟೆ ಮುಂತಾದೆಡೆ ಬೇರೆ ಬೇರೆ ಕೆಲಸಗಳಿಗಾಗಿ ಸುತ್ತಾಡಿ ದ್ದರು. ಒಂದು ವೇಳೆ ಆತನಿಗೆ ಕೊರೊನಾ ಸೋಂಕು ತಗಲಿದ್ದರೆ ಆತನ ಸಂಪರ್ಕದಲ್ಲಿದ್ದವರ ಗತಿಯೇನು? ಎಂಬುದು ಜನರ ಆತಂಕ.

ಮಾಹಿತಿ ನೀಡಿದರೂ ಅವರಿಗೆ ಸರಿಯಾದ ನಿರ್ದೇಶನ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊನೆಗೂ ಆತ ಶನಿವಾರ ಕಡಬ ಆಸ್ಪತ್ರೆ ಯಲ್ಲಿ ತಪಾಸಣೆಗೆ ಒಳಪಟ್ಟಿದ್ದಾರೆ.

ಕೊರೊನಾ ಲಕ್ಷಣಗಳಿಲ್ಲ
ಆಸ್ಪತ್ರೆಗೆ ಬಂದಿರುವ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲ. ಆದರೂ ವೈದ್ಯಕೀಯ ಸೂಚನೆಗಳನ್ನು ಪಾಲಿಸಿಕೊಂಡು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Advertisement

ಕೆಲವು ದಿನಗಳ ಹಿಂದೆ ಚೀನದಲ್ಲಿದ್ದ ಬಲ್ಯದ ವ್ಯಕ್ತಿ ಮತ್ತು ದುಬಾೖಯಿಂದ ಆಗಮಿಸಿದ್ದ ಕೋಡಿಂಬಾಳದ ವ್ಯಕ್ತಿಯೊಬ್ಬರು ಕಡಬ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ತೆರಳಿದ್ದರು. ವಿದೇಶದಿಂದ ಆಗಮಿಸಿರುವ ಕುಟ್ರಾಪ್ಪಾಡಿಯ ಇನ್ನೋರ್ವ ವ್ಯಕ್ತಿಯೂ ಶನಿವಾರ ತಪಾಸಣೆ ಮಾಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next