Advertisement

ಕಟ್ಟಡ ಕಾರ್ಮಿಕರ ಕೋವಿಡ್ 19 ಪರಿಹಾರ ಪ್ಯಾಕೇಜ್‌ಗೆ ಕಟ್ಟಳೆಗಳೇ ಅಡ್ಡಿ

03:07 AM Aug 20, 2020 | Hari Prasad |

ಕಾರ್ಮಿಕ ಇಲಾಖೆಯ ಸಂಪರ್ಕ ಸಂಖ್ಯೆ: ದ.ಕ.: 0824 2435343 ; ಉಡುಪಿ: 0820 2574851

Advertisement

– ಸಂತೋಷ್‌ ಬೊಳ್ಳೆಟ್ಟು

ಕೇಂದ್ರ ಮತ್ತು ರಾಜ್ಯ ಸರಕಾರವು ಕೋವಿಡ್ 19 ಸಂದರ್ಭ ಕೆಲಸ ಇಲ್ಲದೆ ಅತಂತ್ರರಾದ ವಿವಿಧ ವರ್ಗಗಳಿಗೆ ನೆರವಾಗಲೆಂದು ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಈ ಪ್ಯಾಕೇಜ್‌ ಅರ್ಹ ವ್ಯಕ್ತಿಗಳಿಗೆ ಸಿಕ್ಕಿದೆಯೇ, ವಿವಿಧ ಮನವಿ, ಆಗ್ರಹಗಳ ಬಳಿಕ ನಿಯಮಗಳು ಬದಲಾದರೂ, ದಾಖಲೆಯ ಮೇಲೆ ದಾಖಲೆಗಳನ್ನು ನೀಡಿದರೂ ಕೆಲವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬ ದೂರೂ ಕೇಳಿ ಬರುತ್ತಿದೆ.

ಮಂಗಳೂರು: ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾದಾಗ ಸಂಕಷ್ಟಕ್ಕೀಡಾದವರಲ್ಲಿ ಕಟ್ಟಡ ಕಾರ್ಮಿಕ ವರ್ಗವೂ ಒಂದು. ಏಕಾಏಕಿ ಕೆಲಸ ಸ್ಥಗಿತಗೊಂಡಾಗ ಸಾವಿರಾರು ಕಾರ್ಮಿಕರು ಅತಂತ್ರರಾದರು. ಇವರದ್ದು ದುಡಿದರೆ ‘ಅಕ್ಕಿ’ ಎನ್ನುವ ಸ್ಥಿತಿಯಾದ್ದುದರಿಂದ ಉಣ್ಣುವ ‘ಕಾಸಿ’ಗೂ ಪರದಾಡುವಂತಾಯಿತು.

ಸಮಸ್ಯೆಯ ಗಂಭೀರತೆ ಅರಿತು ಸರಕಾರ ಪ್ಯಾಕೇಜ್‌ ಘೋಷಿಸಿದರೂ ದಾಖಲೆಗಳ ಕೊರತೆ ಹೆಸರಿನಲ್ಲಿ ಕಾರ್ಮಿಕರಿಗೆ ಹಣ ಸಿಗುವುದು ವಿಳಂಬವಾಗುತ್ತಿದೆ. ವರ್ಷವಿಡೀ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಿಸುಮಾರು ಒಂದು ಲಕ್ಷ ಮಂದಿ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಇನ್ನು ನೋಂದಣಿ ಮಾಡಿಸದ ಕಾರ್ಮಿಕರು ಇದರ ಹಲವು ಪಟ್ಟು ಇದ್ದಾರೆ.

Advertisement

ನೋಂದಾಯಿತ ಕಾರ್ಮಿಕರಿಗೆ ಸರಕಾರ ತಲಾ 5,000 ನೆರವಿನ ಪ್ಯಾಕೇಜ್‌ ಘೋಷಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 76,328 ಮಂದಿ ಕಟ್ಟಡ ಕಾರ್ಮಿಕರಿಗೆ ಪರಿಹಾರಧನ ಮಂಜೂರಾಗಿದೆ. ಆದರೆ ಇನ್ನೂ 21,785 ಮಂದಿ ಕಾರ್ಮಿಕರಿಗೆ ಪರಿಹಾರ ಧನ ದೊರೆತಿಲ್ಲ. ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಕೆಲವರ ಖಾತೆಗೆ ಇನ್ನಷ್ಟೇ ಜಮೆಯಾಗಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೆ, ಕೇಳಿರುವ ಎಲ್ಲ ದಾಖಲೆಗಳನ್ನು ಒದಗಿಸಿದ್ದೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

ದಾಖಲೆ ಸರಿಪಡಿಸಿಕೊಳ್ಳಲು ಅವಕಾಶ
ದ.ಕ. ಜಿಲ್ಲೆಯಲ್ಲಿ ಈವರೆಗೆ 63,736 ಕಾರ್ಮಿಕರು ನೋಂದಾಯಿಸಿಕೊಂಡಿದ್ದು 53,725 ಮಂದಿಗೆ ಪರಿಹಾರ ಧನ ಮಂಜೂರಾಗಿದೆ. ಉಡುಪಿ ಜಿಲ್ಲೆಯಲ್ಲಿ 34,377 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, 22,603 ಮಂದಿಗೆ ಪರಿಹಾರಧನ ಮಂಜೂರಾಗಿದೆ. 60 ವರ್ಷ ಮೇಲ್ಪಟ್ಟವರು, ಅಗತ್ಯ ದಾಖಲೆಗಳಿಲ್ಲದ ಮತ್ತು ಸಂಪರ್ಕಕ್ಕೆ ಸಿಗದ ಹೊರ ರಾಜ್ಯಗಳ ಕಾರ್ಮಿಕರು, ಮೃತಪಟ್ಟವರನ್ನು ಹೊರತುಪಡಿಸಿದರೆ ಉಳಿದ ನೋಂದಾಯಿತ ಕಾರ್ಮಿಕರಿಗೆ ಪರಿಹಾರಧನ ಲಭಿಸಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ನೋಂದಣಿಗೆ ಪರಿಹಾರಧನವಿಲ್ಲ
ಕಟ್ಟಡ ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್‌ ಮೇ 6ಕ್ಕೆ ಘೋಷಣೆಯಾಗಿತ್ತು. ಲಾಕ್‌ಡೌನ್‌ ಘೋಷಣೆಯಾಗುವ ಮೊದಲು (ಮಾ. 23) ಯಾರು ನೋಂದಣಿ ಮಾಡಿಸಿಕೊಂಡಿದ್ದಾರೋ ಅವರಿಗೆ ಮಾತ್ರ ಪರಿಹಾರ ಧನ ಲಭಿಸಿದೆ. ಅನಂತರ ನೋಂದಣಿಯಾದವರಿಗೆ ಇಲ್ಲ.

4 ತಿಂಗಳಲ್ಲಿ 13,939 ಮಂದಿ ನೋಂದಣಿ
2007ರಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು. ದ.ಕ. ಜಿಲ್ಲೆಯಲ್ಲಿ ನೋಂದಾಯಿತ 63,736 ಕಾರ್ಮಿಕರಲ್ಲಿ 4,135 ಮಂದಿ ಮಹಿಳೆಯರು. ಪ್ಯಾಕೇಜ್‌ ಘೋಷಣೆಯಾದ ಅನಂತರ ಇದುವರೆಗೆ 5,000 ಮಂದಿ ನೋಂದಾಯಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ಯಾಕೇಜ್‌ ಘೋಷಣೆಯಾಗುವವರೆಗೆ 34,377 ಮಂದಿ ನೋಂದಾಯಿಸಿಕೊಂಡಿದ್ದರು. ಅನಂತರ 8,939 ಮಂದಿ ನೋಂದಣಿ ಮಾಡಿಸಿದ್ದು ಒಟ್ಟು ನೋಂದಾಯಿತರ ಸಂಖ್ಯೆ 43,316ಕ್ಕೇರಿದೆ.

ಹೊರ ಜಿಲ್ಲೆ, ರಾಜ್ಯದವರಿಗೂ ಅವಕಾಶ
ಯಾವುದೇ ಜಿಲ್ಲೆಯವರು ಯಾವುದೇ ಜಿಲ್ಲೆಯಲ್ಲಿ ನೋಂದಣಿಗೆ ಅವಕಾಶವಿದೆ. ಆದರೆ ಕಾರ್ಮಿಕರು ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿರುವ ಬಗ್ಗೆ ಮಾಲಕರು, ಗುತ್ತಿಗೆದಾರರಿಂದ ಪ್ರಮಾಣ ಪತ್ರ ಪಡೆದು ಆಧಾರ್‌, ಪಡಿತರ ಚೀಟಿ ಮೊದಲಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಪ್ರತೀ ವರ್ಷ ನವೀಕರಣ ಮಾಡಿಸಿಕೊಳ್ಳಬೇಕು. 18ರಿಂದ 60 ವರ್ಷದವರಿಗೆ ನೋಂದಣಿಗೆ ಅವಕಾಶವಿದೆ.

ಸೌಲಭ್ಯಕ್ಕೆ ನೋಂದಣಿ ಕಡ್ಡಾಯ
ಜೂ. 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿತ್ತು. ಅರ್ಜಿ ಸಲ್ಲಿಸಿದ ಬಹುತೇಕ ಮಂದಿಗೆ ಪರಿಹಾರ ಧನ ಮಂಜೂರಾಗಿದೆ. ಬ್ಯಾಂಕ್‌ ದಾಖಲೆಗಳು ಸೇರಿದಂತೆ ಕೆಲವೊಂದು ದಾಖಲೆಗೆಳ ಸಮಸ್ಯೆಯಿಂದ ಹಣ ಖಾತೆಗೆ ಜಮೆಯಾಗದಿದ್ದರೆ ಅಂಥವರು ಕಾರ್ಮಿಕ ಇಲಾಖೆಯ ಕಚೇರಿಗೆ ಬಂದರೆ ಸಾಧ್ಯವಿರುವ ದಾಖಲೆಗಳನ್ನು ಸರಿಪಡಿಸಿಕೊಡಲಾಗುತ್ತಿದೆ. ಸರಕಾರದ ಸೌಲಭ್ಯ ಪಡೆಯಲು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
– ವಿಲ್ಮಾ ತಾವ್ರೊ, ಕಾರ್ಮಿಕ ಅಧಿಕಾರಿ, ದ.ಕ. ಜಿಲ್ಲೆ
– ಕುಮಾರ್‌, ಕಾರ್ಮಿಕ ಅಧಿಕಾರಿ, ಉಡುಪಿ ಜಿಲ್ಲೆ

ಇಲಾಖೆಯವರು ಕೇಳಿದ ದಾಖಲೆಗಳನ್ನೆಲ್ಲ ಕೊಟ್ಟಿದ್ದೇವೆ. ಆದರೂ ಹಣ ಇನ್ನೂ ಬಂದಿಲ್ಲ. 2 ದಿನಗಳಿಗೊಮ್ಮೆ ಹೋಗಿ ಬ್ಯಾಂಕ್‌ನಲ್ಲಿ ವಿಚಾರಿಸುತ್ತಿದ್ದೇವೆ.

– ರಮೇಶ್‌ ಕೆ., ಕೊಳವೂರು, ಕುಪ್ಪೆಪದವು
– ಶೇಖರ, ಕೊಳವೂರು
– ಸುರೇಶ್‌ ಆಚಾರ್ಯ, ಪಾವೂರು (ಕಟ್ಟಡ ಕಾರ್ಮಿಕರು)

Advertisement

Udayavani is now on Telegram. Click here to join our channel and stay updated with the latest news.

Next