Advertisement

ಯೂರೋಪ್‌ –ಇಂಡಿಯಾ ಹೋಲಿಕೆ ಸುತ್ತ…

01:31 AM Jun 09, 2020 | Hari Prasad |

ಲಾಕ್‌ಡೌನ್‌ ಫೇಲ್‌ ಅಂದ ರಾಹುಲ್‌
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಇತ್ತೀಚೆಗೆ ತಮ್ಮ ಟ್ವೀಟೊಂದರಲ್ಲಿ ಭಾರತದ ಲಾಕ್‌ಡೌನ್‌ ಫೇಲ್‌ ಆಗಿದೆ ಎಂದಿದ್ದಾರೆ.

Advertisement

ದೇಶದಲ್ಲಿ ತರಲಾದ ಲಾಕ್‌ಡೌನ್‌ ವಿಫ‌ಲವಾಗಿದೆ ಎನ್ನುವುದನ್ನು ತೋರಿಸಲು ಅವರು ದೇಶದ ಲಾಕ್‌ಡೌನ್‌ ಅನ್ನು ಯುಕೆ, ಇಟಲಿ, ಸ್ಪೇನ್‌, ಜರ್ಮನಿಯೊಂದಿಗೆ ಹೋಲಿಸಿದ್ದಾರೆ.

ಆದಾಗ್ಯೂ, ಲಾಕ್‌ಡೌನ್‌ ನಂತರದ ದಿನಗಳಲ್ಲಿ ಈ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎನ್ನುವುದು ನಿಜ.

ಆದರೆ, ಈ ವಿಚಾರದಲ್ಲೀಗ ಚರ್ಚೆಗಳು ಆರಂಭವಾಗಿದ್ದು, ನಿಜಕ್ಕೂ ಭಾರತದಂಥ ಬೃಹತ್‌ ಜನಸಂಖ್ಯೆಯುಳ್ಳ ರಾಷ್ಟ್ರವನ್ನು ಇತರೆ ದೇಶಗಳಿಗೆ ಹೋಲಿಸುವುದು ತರವೇ? ಅಲ್ಲದೇ, ಲಾಕ್‌ಡೌನ್‌ ತರುವಲ್ಲಿ ತೀರಾ ವಿಳಂಬ ತೋರಿದ್ದರೆ ಪರಿಸ್ಥಿತಿ ಇನ್ನೆಷ್ಟು ವಿಷಮಿಸಿರುತ್ತಿತ್ತು ಎನ್ನುವ ಪ್ರಶ್ನೆಯನ್ನೂ ಹಲವರು ಎದುರಿಡುತ್ತಿದ್ದಾರೆ.

ಈ ನಡುವೆಯೇ ಇಂದು ದೇಶದ 33 ಪ್ರತಿಶತಕ್ಕೂ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರವೊಂದರಲ್ಲೇ ದಾಖಲಾಗಿದ್ದರೆ, ಕೇವಲ ಏಳು ರಾಜ್ಯಗಳಲ್ಲಿ ಪತ್ತೆಯಾಗಿರುವ ಸೋಂಕಿತರ ಪ್ರಮಾಣವೇ 70 ಪ್ರತಿಶತಕ್ಕೂ ಅಧಿಕವಿದೆ.


ಜರ್ಮನಿ ಪಾಸ್‌, ಇಟಲಿ- ಬ್ರಿಟನ್‌-ಸ್ಪೇನ್‌ ಫೇಲ್‌!
ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌, ಕಾಂಟ್ಯಾಕ್ಟ್ ಟ್ರೇಸಿಂಗ್‌ ವಿಚಾರದಲ್ಲಿ ಜರ್ಮನಿ ಹೊರತುಪಡಿಸಿದರೆ, ಉಳಿದ ರಾಷ್ಟ್ರಗಳು (ಬ್ರಿಟನ್‌, ಸ್ಪೇನ್‌, ಇಟಲಿ) ಆರಂಭದಿಂದಲೂ ತಪ್ಪು ಹೆಜ್ಜೆಯಿಟ್ಟವು ಎನ್ನುವುದು ವಿದಿತ.

Advertisement

ಅದರಲ್ಲೂ ಇಟಲಿಯು ಆರಂಭದ ದಿನಗಳಲ್ಲಿ ಮಾಡಿದ ಅಸಡ್ಡೆಯಿಂದಾಗಿ ತೀವ್ರವಾಗಿ ತತ್ತರಿಸಿತು. ಅಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಯಾವ ಪ್ರಮಾಣದ ಒತ್ತಡ ಸೃಷ್ಟಿಯಾಯಿತೆಂದರೆ, 55 ವರ್ಷಕ್ಕೂ ಮೇಲ್ಪಟ್ಟವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳುತ್ತಿಲ್ಲ ಎನ್ನುವ ಬಗ್ಗೆ ವರದಿಯಾಯಿತು.

ಇನ್ನು ಲಾಕ್‌ಡೌನ್‌ ಜಾರಿಯಾದ ನಂತರದಿಂದ ಆ ದೇಶದಲ್ಲಿ ಸೋಂಕಿತರ ಪ್ರಮಾಣ ತಗ್ಗಿದೆ ಎನ್ನಲಾಗುತ್ತಿದೆಯಾದರೂ, ಇಟಲಿಯ ಮಾಧ್ಯಮಗಳು ಹಾಗೂ ಪ್ರತಿಪಕ್ಷಗಳು ಇದನ್ನು ಪ್ರಶ್ನಿಸುತ್ತಿವೆ.

ಏಕೆಂದರೆ, ಅನೇಕರು ಆಸ್ಪತ್ರೆಗಳಲ್ಲಿ ಜಾಗ ಸಿಗದೇ ಮನೆಗಳಲ್ಲಿಯೇ ಮೃತಪಟ್ಟ ಬಗ್ಗೆ ವರದಿಯಾಗಿದೆ, ಅಲ್ಲದೇ ಸರ್ಕಾರವು ತನ್ನ ಇಮೇಜ್‌ ಉಳಿಸಿಕೊಳ್ಳಲು, ಜನಾಕ್ರೋಶವನ್ನು ಶಮನಗೊಳಿಸಲು ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ ಎಂದು ಅಲ್ಲಿನ ಪ್ರತಿಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ.

ಅತ್ತ ಸ್ಪೇನ್‌ ಹಾಗೂ ಬ್ರಿಟನ್‌ ಕೂಡ ರೋಗದ ಗಂಭೀರತೆಯನ್ನು ಆರಂಭಿಕ ದಿನಗಳಲ್ಲಿ ಕಡೆಗಣಿಸಿಬಿಟ್ಟವು, ಲಾಕ್‌ಡೌನ್‌ ನಿಯಮ ಜಾರಿ ಮಾಡಿದರೂ ಅದು ಸಡಿಲವಾಗಿಯೇ ಇತ್ತು. ಬ್ರಿಟನ್‌ನಲ್ಲಿ ಇತ್ತೀಚಿನವರೆಗೂ ಪಬ್‌, ಬೀಚ್‌ಗಳು ತೆರೆದೇ ಇದ್ದವು.


ಜನಸಂಖ್ಯೆ, ಸಾಂದ್ರತೆಯೂ ಪರಿಗಣಿತವಾಗಬೇಕೇ…?
ಕೋವಿಡ್ ತೀವ್ರತೆಯ ಬಗ್ಗೆ ಮಾತನಾಡುವಾಗ, ಒಂದು ದೇಶದ ಜನಸಂಖ್ಯೆ, ಸಾಂದ್ರತೆಯನ್ನೂ ಪರಿಗಣಿಸಬೇಕು ಎಂಬ ಚರ್ಚೆಗಳು ಆರಂಭವಾಗಿವೆ. ಈ ದೃಷ್ಟಿಯಿಂದ ನೋಡುವುದಾದರೆ ಇಟಲಿಯ ಜನಸಂಖ್ಯೆ ಕರ್ನಾಟಕಕ್ಕಿಂತಲೂ ಕಡಿಮೆಯಿದೆ. 6 ಕೋಟಿ ಜನರಿರುವ ಇಟಲಿಯಲ್ಲಿ ಇಲ್ಲಿಯವರೆಗೂ ಎರಡು ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದರೆ, 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, ಕೇವಲ 4.75 ಕೋಟಿ ಜನಸಂಖ್ಯೆಯಿರುವ ಸ್ಪೇನ್‌ನಲ್ಲಿ 2 ಲಕ್ಷ 88 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದರೆ, ಮೃತಪಟ್ಟವರ ಸಂಖ್ಯೆ 27 ಸಾವಿರಕ್ಕೂ ಅಧಿಕವಿದೆ (ನಮ್ಮ ಒಡಿಶಾ ರಾಜ್ಯದ ಜನಸಂಖ್ಯೆ 4.71 ಕೋಟಿ).


ಭಾರತದಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಳಿಕ ಏರಿಕೆ
ಭಾರತದಲ್ಲಿ ಲಾಕ್‌ಡೌನ್‌ ನಾಲ್ಕನೇ ಚರಣದ ಆರಂಭದಿಂದ, ಅಂದರೆ ಮೇ 18ರಿಂದ ಗಮನಾರ್ಹವಾಗಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿರುವುದು ಹಾಗೂ ಮುಖ್ಯವಾಗಿ ಟೆಸ್ಟಿಂಗ್‌ ಪ್ರಮಾಣವನ್ನು ಹೆಚ್ಚಿಸಿರುವುದರಿಂದ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ ಎನ್ನಲಾಗುತ್ತದೆ.

ಆದರೆ, ಲಾಕ್‌ಡೌನ್‌ ಜಾರಿಯಾಗದೇ ಹೋಗಿದ್ದರೆ ಪರಿಸ್ಥಿತಿ ವಿಷಮಿಸುತ್ತಿತ್ತು ಎಂದು ಏಮ್ಸ್‌, ಐಸಿಎಂಆರ್‌ ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳು, ಪರಿಣತರು ಹೇಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ಲಾಕ್‌ಡೌನ್‌ ತ್ವರಿತವಾಗಿ ಜಾರಿಯಾಗದೇ ಹೋಗಿದ್ದರೆ, ಏಪ್ರಿಲ್‌ 24ರ ವೇಳೆಗೇ ದೇಶದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ಇರುತ್ತಿತ್ತು ಎನ್ನಲಾಗುತ್ತದೆ.

ಆದರೂ ಕೆಲ ದಿನಗಳಿಂದ ದೇಶದಲ್ಲಿ ನಿತ್ಯ ಸೋಂಕು ಪ್ರಕರಣಗಳು ಊಹೆಗೂ ಮೀರಿ ಏರಿಕೆಯಾಗುತ್ತಿದ್ದು, ರೋಗ ಉತ್ತುಂಗಕ್ಕೇರಿದೆಯೇ ಅಥವಾ ಅದಕ್ಕೆ ಇನ್ನೂ ಸಮಯವಿದೆಯೇ ಎಂಬ ಆತಂಕ ಎದುರಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿತರು ಮಹಾರಾಷ್ಟ್ರದಿಂದ ಹಿಂದಿರುಗಿದವರೇ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next