ವಾಷಿಂಗ್ಟನ್: ಇದು ಸಾವು ಮತ್ತು ಬದುಕಿನ ನಡುವಿನ ಪ್ರಶ್ನೆ…! ಕೋವಿಡ್ 19 ವೈರಸ್ ಸೋಂಕಿನ ಕುರಿತಂತೆ ಈಗ ಎಚ್ಚೆತ್ತುಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಜನರಿಗೆ ಈ ಮೇಲಿನ ಸಂದೇಶ ನೀಡಿದ್ದಾರೆ. ಈ ವೈರಸ್ ನಿಂದಾಗಿ ಅಮೆರಿಕದಲ್ಲಿಯೇ ಒಂದು ಲಕ್ಷದಿಂದ ಎರಡೂವರೆ ಲಕ್ಷ ಮಂದಿ ಸಾವನ್ನಪ್ಪುವ ಸಾಧ್ಯತೆ ಇದ್ದು ಮುಂದಿನ ಎರಡು ವಾರ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಿದ್ದಾರೆ. ಸಾವಿನ ಸಂಖ್ಯೆ ಬಗ್ಗೆ ಸ್ವತಃ ವೈಟ್ ಹೌಸ್ ನಿಂದಲೇ ಮಾಹಿತಿ ಹೊರಬಿದ್ದಿದ್ದು, ಜನ ಸಾಮಾಜಿಕ ಅಂತರ ಮತ್ತು ಮನೆಯಲ್ಲೇ ಉಳಿಯಬೇಕು ಎಂಬ ಎಚ್ಚರಿಕೆಯ ಸಂದೇಶ ನೀಡಲಾಗಿದೆ.
ಟ್ರಂಪ್ ಹೇಳಿದ್ದೇನು?: ನೀವು ಒಂದು ಲಕ್ಷ ಸಂಖ್ಯೆಯನ್ನು ನೋಡುತ್ತೀರಿ ಎನ್ನುವುದಾದರೆ, ಅದು ಅತ್ಯಂತ ಕಡಿಮೆ ಸಂಖ್ಯೆ. ಕೆಲವರು ಇಷ್ಟೆಲ್ಲಾ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಆದರೆ, ನಾವು ಯಾವುದೇ ಕ್ರಮ ತೆಗೆದುಕೊಳ್ಳದೇ ಸಂಖ್ಯೆ ಕಡಿಮೆಯಾಗುವುದಾದರೂ ಹೇಗೆ? ನಾನು ಇಲ್ಲಿ ಇರುವುದು ಕೆಟ್ಟ ಸುದ್ದಿ ನೀಡುವುದಕ್ಕಲ್ಲ, ಇಲ್ಲಿನ ಜನರಿಗೆ ಭರವಸೆ ನೀಡುವುದು ನನ್ನ ಕೆಲಸ. ಆದರೂ, ಜನರ ಏನೂ ಮಾಡದೇ ಹೋಗಿದ್ದರೆ, 22 ಲಕ್ಷ ಮಂದಿ ಸಾಯುತ್ತಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಸುಳ್ಳೇ ಸುಳ್ಳು: ಆರಂಭದಿಂದಲೂ ಕೋವಿಡ್ 19 ವೈರಸ್ ಬಗ್ಗೆ ನಿರ್ಲಕ್ಷ್ಯ ತಾಳಿಕೊಂಡೇ ಬಂದಿದ್ದ ಟ್ರಂಪ್, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. “ಈ ವೈರಸ್ ಚೀನದಿಂದ ಬರುತ್ತಿದ್ದು, ನಾವು ಯಶಸ್ವಿಯಾಗಿ ಹೊಡೆದೋಡಿಸಬಹುದು’, “ನಾವು ಇದನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿದ್ದೇವೆ, ಇದು ಮುಂದೆ ಹರಡಲ್ಲ’, “ಒಂದು ದಿನ ಮ್ಯಾಜಿಕ್ ಸಂಭವಿಸುತ್ತದೆ, ಈ ವೈರಸ್ ಕಾಣೆಯಾಗುತ್ತದೆ’, ‘ಮತ್ತು ಇದು ಅವರ(ಚೀನ) ಹೊಸ ಸುಳ್ಳು’, “ನನಗೆ ಅನ್ನಿಸಿದ ಹಾಗೆ ನಾವು ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ, ಅದನ್ನು ನಿಯಂತ್ರಿಸಿದ ದೇಶ ಇದು’, “ಒಂದು ಶಿಪ್‌ನಿಂದಾಗಿ ನಮ್ಮ ಸಂಖ್ಯೆಯನ್ನು ದ್ವಿಗುಣ ಮಾಡಲು ಸಾಧ್ಯವಿಲ್ಲ. ಇದು ನಮ್ಮ ತಪ್ಪೂ ಅಲ್ಲ’, “ಇದು ಹೋಗುತ್ತೆ, ನೀವು ಶಾಂತವಾಗಿರಿ, ಇದು ಹೋಗೇ ಹೋಗುತ್ತೆ’, “ರಾಷ್ಟ್ರೀಯ ತುರ್ತು ಪರಿಸ್ಥಿತಿ’, “ನನಗೆ ಯಾವಾಗಲೂ ಗೊತ್ತು, ಇದು ಸತ್ಯವಾದದ್ದು, ಇಂದು ಪೆಂಡಮಿಕ್…’ ಹೀಗೆ ಆರಂಭದಿಂದಲೂ ವೈರಸ್ ಬಗ್ಗೆ ಈ ರೀತಿ ಹೇಳಿಕೊಂಡೇ ಬಂದಿದ್ದಾರೆ.
9/11ಗಿಂತ ಹೆಚ್ಚು ಸಾವು
ಸದ್ಯ ಅಮೆರಿಕದಲ್ಲಿ 4000ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದು, ಇದು ಅಲ್ಲಿನ ಬಹುದೊಡ್ಡ ದುರಂತ ವರ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ ವೇಳೆಯ ಸಾವಿನ ಸಂಖ್ಯೆಯನ್ನೂ ಮೀರಿಸಿದೆ. ಅಲ್ಲದೆ, ನ್ಯೂಯಾರ್ಕ್ ನಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗಳ ಕಾರಿಡಾರ್ ಗಳಲ್ಲೂ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
– ಒಂದರಿಂದ ಎರಡೂವರಗೆ ಲಕ್ಷ ಜನ ಸಾವನ್ನಪ್ಪುವ ಸಾಧ್ಯತೆ
– ನೋವು ಎದುರಿಸಲು ಸಿದ್ಧರಾಗುವಂತೆ ಕರೆ ನೀಡಿದ ಟ್ರಂಪ್
– ಇದು ಸಾವು ಮತ್ತು ಬದುಕಿನ ಪ್ರಶ್ನೆ, ನಿಯಮ ಪಾಲಿಸಿ.
– ಅಮೆರಿಕದಲ್ಲಿ 1.90 ಲಕ್ಷ ಸೋಂಕಿತರು, 4000 ಸಾವು
ಅಮೆರಿಕ ಅಂಕಿ ಅಂಶ
ಒಟ್ಟಾರೆ ಸೋಂಕಿತರ ಸಂಖ್ಯೆ : 1,89,633
ಸಾವನ್ನಪ್ಪಿದವರ ಸಂಖ್ಯೆ : 4000