ಮುಂಬಯಿ: ಆರ್ಥಿಕ ಹಿಂಜರಿತ, ಬೇಡಿಕೆ ಕುಸಿತ ಹಾಗೂ ಕೋವಿಡ್ ವೈರಸ್ ಸೋಂಕಿನಿಂದ ಕಂಗೆಟ್ಟಿರುವ ಆಟೋಮೋಬೈಲ್ ವಲಯದ ಕಂಪೆನಿಗಳು ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಸಂಸ್ಥೆಯ ನೌಕರರಿಗೆ ವೇತನ ಕಡಿತ ಮಾಡಲು ಮುಂದಾಗಿವೆ. ಆ ಮೂಲಕ ನೌಕರರನ್ನು ಕೆಲಸದಿಂದ ವಜಾಗೊಳಿಸುವುದನ್ನು ತಪ್ಪಿಸಲು ಯತ್ನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಗಳಾದ ಬಜಾಜ್ ಆಟೋ ಹಾಗೂ ಟಿವಿಎಸ್ ಮೋಟಾರ್ಸ್‌ಗಳು ಈಗಾಗಲೇ ನೌಕರರ ವೇತನ ಕಡಿತಕ್ಕೆ ನಿರ್ಧರಿಸಿವೆ. ಇದು ತಾತ್ಕಾಲಿಕವಾಗಿ ಜಾರಿಗೆ ಬರಲಿದೆ.
ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಗಳಾದ ಅಶೋಕ್ ಲೈಲ್ಯಾಂಡ್, ಟಾಟಾ ಮೋಟಾರ್ಸ್ ಗಳು ಶೀಘ್ರ ವೇತನ ಕಡಿತ ಜಾರಿಗೆ ತರಲಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇವೆರಡೂ ಸಂಸ್ಥೆಗಳು ಭಾರೀ ನಷ್ಟ ಅನುಭವಿಸಿವೆ.
ಲಾಕ್ ಡೌನ್ ಅವಧಿಯಲ್ಲಿ ತಮಗೆ ವೇತನ ಸಿಗುವುದಿಲ್ಲ ಎಂದು ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್ ತಿಳಿಸಿದ್ದಾರೆ. 2021ರ ಆರ್ಥಿಕ ವರ್ಷದಲ್ಲಿ ಅಪೋಲೋ ಟೈಯರ್ ಸಿಎಂಡಿ ಓಂಕಾರ್ ಕನ್ವಾರ್ ಮತ್ತು ಉಪಾಧ್ಯಕ್ಷ ನೀರಜ್ ಕನ್ವಾರ್ ಅವರ ವೇತನ ಶೆ.25ರಷ್ಟು ಕಡಿತವಾಗಲಿದೆ. ಟಿವಿಎಸ್ ಮೋಟಾರ್ ಕಂಪೆನಿಯ ಆಡಳಿತ ಮಂಡಳಿಯ ಉನ್ನತಾಧಿಕಾರಿಗಳ ವೇತನ ಕೂಡ ಕಡಿತವಾಗಲಿದೆ. ಇತರ ನೌಕರರಿಗೆ ವಾರ್ಷಿಕ ಭಡ್ತಿ, ವೇತನ ಏರಿಕೆ ಇರುವುದಿಲ್ಲ.
ಟಿವಿಎಸ್ ಮೋಟಾರ್ ಪ್ರತಿವರ್ಷ ಎ.1ಕ್ಕೆ ವಾರ್ಷಿಕ ಭಡ್ತಿ/ವೇತನ ಏರಿಕೆಯ ಪತ್ರವನ್ನು ನೌಕರರಿಗೆ ಕಳುಹಿಸುತ್ತಿತ್ತು. ಆದರೆ ಈ ಬಾರಿ ಅದನ್ನು ಕಳಿಸಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಜಾಜ್ ಆಟೋ, ಎ.15-ಮೇ 3ರ ವರೆಗಿನ ಅವಧಿಯ ವೇತನದಲ್ಲಿ ಎಲ್ಲಾ ಹಂತದ ನೌಕರರಿಗೆ ವೇತನ ಕಡಿತ ಮಾಡುತ್ತಿದೆ. ಈಚರ್ ಮೋಟಾರ್ಸ್, ಮಾರಾಟಗಾರ ಏಜೆನ್ಸಿಗಳಿಗೆ ಪಾವತಿಯನ್ನು ಮುಂದೂಡಿದೆ.
ಮಹಿಂದ್ರಾ ಮತ್ತು ಮಹಿಂದ್ರಾ ಕಂಪೆನಿ ವೇತನ ಕಡಿತವನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಂಡಿದೆ. ಅಪೋಲೋ ಟೈಯರ್ಸ್, ಎಕ್ಸೈಡ್ ಇಂಡಸ್ಟ್ರೀಸ್‌ಗಳು ಈಗಾಗಲೇ ವೇತನ ಕಡಿತ ಘೋಷಿಸಿವೆ.