Advertisement

ಭಾರತದ ಆರ್ಥಿಕತೆ ಶೇ.5ಕ್ಕೆ ಕುಸಿತ: ವಿಶ್ವಬ್ಯಾಂಕ್‌

02:08 AM Apr 14, 2020 | Hari Prasad |

ವಾಷಿಂಗ್ಟನ್‌: ಭಾರತದ ಆರ್ಥಿಕತೆಯ ಮೇಲೆ ಕೋವಿಡ್ ವ್ಯತಿರಿಕ್ತ ಪರಿಣಾಮ ಬೀರಲಿದ್ದು, 2020ರಲ್ಲಿ ದೇಶೀಯ ಆರ್ಥಿಕತೆ ಶೇ.5ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ಎಚ್ಚರಿಸಿದೆ. ಅಲ್ಲದೆ, 2021ರಲ್ಲಿ ಭಾರತದ ಆರ್ಥಿಕತೆ ಬೇಸಿಸ್‌ ಪಾಯಿಂಟ್‌ ಆಧಾರದಲ್ಲಿ ಶೇ.2.8ಕ್ಕೆ ಕುಸಿಯಲಿದೆ. 2022ರಲ್ಲಿ ಚೇತರಿಕೆ ಕಂಡು ಬರಲಿದ್ದು, ಆರ್ಥಿಕತೆಯಲ್ಲಿ ಶೇ.5ಕ್ಕೆ ಏರಿಕೆ ಕಂಡುಬರಲಿದೆ ಎಂದು ಅಂದಾಜಿಸಿದೆ.

Advertisement

ಭಾನುವಾರ ಬಿಡುಗಡೆ ಮಾಡಲಾದ ; ಸೌತ್‌ ಏಷ್ಯಾ ಎಕನಾಮಿಕ್‌ ಅಪ್‌ಡೇಟ್‌- ಇಂಪ್ಯಾಕ್ಟ್ ಆಫ್ ಕೋವಿಡ್‌-19′ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಭಾರತ ಆರ್ಥಿಕ ಕುಸಿತ ಕಾಣುತ್ತಿದ್ದ ಅವಧಿಯಲ್ಲಿಯೇ ಕೋವಿಡ್ ಆವರಿಸಿದೆ. ಈ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಹೇರಲಾಗಿದ್ದು, ಆರ್ಥಿಕತೆ ಮತ್ತಷ್ಟು ಕುಸಿಯಲು ಕಾರಣವಾಗಲಿದೆ. ಅದರಲ್ಲೂ ವಿಶೇಷವಾಗಿ, ಸೇವಾ ವಲಯದ ಮೇಲೆ ಆರ್ಥಿಕ ಕುಸಿತದ ಪರಿಣಾಮ ಹೆಚ್ಚು ಎಂದು ವರದಿ ಹೇಳಿದೆ.

ಈ ಬಗ್ಗೆ ವಿಡಿಯೋ ಕಾಲ್‌ ಮೂಲಕ ಪ್ರತಿಕ್ರಿಯೆ ನೀಡಿರುವ ವಿಶ್ವಬ್ಯಾಂಕ್‌ನ ದಕ್ಷಿಣ ಏಷ್ಯಾದ ಮುಖ್ಯ ಹಣಕಾಸು ಅಧಿಕಾರಿ ಹ್ಯಾನ್ಸ್‌ ಟಿಮ್ಮರ್‌, ಭಾರತದ ಆರ್ಥಿಕತೆಯ ಬೆಳವಣಿಗೆ ಮೇಲ್ನೋಟಕ್ಕೆ ಅಷ್ಟೊಂದು ಉತ್ತಮವಾಗಿ ಇರುವಂತೆ ಕಂಡು ಬರುತ್ತಿಲ್ಲ. ಲಾಕ್‌ಡೌನ್‌ ದೀರ್ಘ‌ಕಾಲದವರೆಗೆ ಮುಂದುವರಿದರೆ ಆರ್ಥಿಕತೆಯಲ್ಲಿ ಮತ್ತಷ್ಟು ಕುಸಿತ ಕಂಡು ಬರಬಹುದು ಎಂದರು.

ಆರ್ಥಿಕ ಸವಾಲನ್ನು ಎದುರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಮೊದಲಿಗೆ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ, ಎಲ್ಲರಿಗೂ ಆಹಾರ ದೊರಕುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅನಂತರದ ದಿನಗಳಲ್ಲಿ, ಸ್ಥಳೀಯ ಮಟ್ಟದಲ್ಲಿ ಎಲ್ಲರಿಗೂ ತಾತ್ಕಾಲಿಕ ಉದ್ಯೋಗದ ಭರವಸೆ ದೊರಕುವಂತಾಗಬೇಕು.

ಅಲ್ಲದೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮದ ದಿವಾಳಿತನ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದರು. ಈ ನಡುವೆ, ಕೋವಿಡ್ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಭಾರತಕ್ಕೆ 1 ಬಿಲಿಯನ್‌ ಡಾಲರ್‌ (7,617.65 ಕೋಟಿ ರೂ.) ಹಣಕಾಸು ನೆರವನ್ನು ಒದಗಿಸಲು ವಿಶ್ವಬ್ಯಾಂಕ್‌ ಸಮ್ಮತಿಸಿದೆ.

Advertisement

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೂ ಬಾಧೆ
ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲಿನ ಆರ್ಥಿಕ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯಾನ್ಸ್‌ ಟಿಮ್ಮರ್‌, “ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯ ಮೇಲೂ ಕೋವಿಡ್ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಡತನ ನಿರ್ಮೂಲನೆ ವಿಷಯದಲ್ಲಿ ಈ ರಾಷ್ಟ್ರಗಳು ಕೈಗೊಂಡ ಕ್ರಮಗಳು ನಿಷ್ಪ್ರಯೋಜಕವಾಗುತ್ತಿವೆ’ ಎಂದು ವಿಷಾದಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಉದ್ಭವಿಸಿರುವ “ಆರೋಗ್ಯ ಸಂಕಷ್ಟ’ವನ್ನು ಸಮರ್ಥವಾಗಿ ಎದುರಿಸಲು ಈ ವಲಯದ ರಾಷ್ಟ್ರಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಬಡವರು, ನಿರ್ಗತಿಕರ ಹಿತ ಕಾಯಬೇಕು. ಅಲ್ಲದೆ, ಶೀಘ್ರಗತಿಯ ಆರ್ಥಿಕ ಚೇತರಿಕೆಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕೋವಿಡ್ ನಿಂದಾಗಿ 2020ರಲ್ಲಿ ದಕ್ಷಿಣ- ಏಷ್ಯಾ ರಾಷ್ಟ್ರಗಳ ಆರ್ಥಿಕತೆಯ ಬೆಳವಣಿಗೆ ಮೇಲೆ ಶೇ.1.8-2.8ರವರೆಗೆ ಕುಸಿತ ಕಾಣಲಿದೆ. ಇದು ಕಳೆದ 6 ತಿಂಗಳ ಹಿಂದೆ ಅಂದಾಜಿಸಲಾಗಿದ್ದ ದರಕ್ಕಿಂತ ಶೇ. 6.3ರಷ್ಟು ಕಡಿಮೆಯಾಗಿದ್ದು, ಕಳೆದ 40 ವರ್ಷಗಳ ಅವಧಿಯಲ್ಲಿಯೇ ಅತಿ ಕನಿಷ್ಠ ಸಾಧನೆಯಾಗಲಿದೆ. ಒಂದು ವೇಳೆ, ಲಾಕ್‌ಡೌನ್‌ ದೀರ್ಘ‌ಕಾಲದವರೆಗೆ ಮುಂದುವರಿದರೆ ಆರ್ಥಿಕತೆ ಋಣಾತ್ಮಕ ಬೆಳವಣಿಗೆ ದರ ಕಾಣುವ ಸಾಧ್ಯತೆಯೂ ಇದೆ. ಈ ಪೈಕಿ ಮಾಲ್ಡೀವ್ಸ್‌ ಅತಿ ಹೆಚ್ಚಿನ ಆರ್ಥಿಕ ಹಾನಿ ಅನುಭವಿಸಬಹುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next