Advertisement

ಕೋವಿಡ್ ರಾದ್ದಾಂತ : ಮೂರು ರಾಷ್ಟ್ರಗಳಲ್ಲಿ ತಗ್ಗಿದ ಸಾವಿನ ಸಂಖ್ಯೆ

09:16 PM Apr 14, 2020 | Hari Prasad |

ವಿಶ್ವಾದ್ಯಂತ ಕೋವಿಡ್ ಒಟ್ಟು 1.15 ಲಕ್ಷ ಮಂದಿಯನ್ನು ಬಲಿಪಡೆದುಕೊಂಡಿದೆ. 17 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಇಟಲಿ, ಸ್ಪೇನ್‌ ಮತ್ತು ಫ್ರಾನ್ಸ್‌ನಲ್ಲಿ ಸೋಮವಾರ ಸಾವಿನ ಸಂಖ್ಯೆ ಸ್ವಲ್ಪಮಟ್ಟಿಗೆ ತಗ್ಗಿದೆ. ಸ್ಪೇನ್‌ ನಲ್ಲಿ ಕಳೆದೊಂದು ವಾರಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿ ಸೋಮವಾರ ಸ್ವಲ್ಪಮಟ್ಟಿಗೆ ಇಳಿಕೆ ಕಂಡುಬಂದಿದೆ. ಒಂದೇ ದಿನ 517 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 17,500 ಆಗಿದೆ.

Advertisement

ಮೃತರ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಸ್ಪೇನ್‌ ಕೆಲ ನಿರ್ಬಂಧಗಳನ್ನು ಸಡಿಲಿಸಿದೆ. ಅದರಂತೆ, ನಿರ್ಮಾಣ ಕಾಮಗಾರಿ, ಉತ್ಪಾದನೆ ಮತ್ತಿತರ ಕೆಲ ಉದ್ದಿಮೆಗಳನ್ನು ಪುನಾರಂಭಗೊಳಿಸಲು ಒಪ್ಪಿಗೆ ಸೂಚಿಸಿದೆ. ಇನ್ನು ಫ್ರಾನ್ಸ್‌ನಲ್ಲಿ 315 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 14,393ಕ್ಕೆ ತಲುಪಿದೆ. ಅದೇ ರೀತಿ ಇಟಲಿಯಲ್ಲಿ 24 ಗಂಟೆಗಳಲ್ಲಿ 431 ಮಂದಿ ಅಸುನೀಗಿದ್ದಾರೆ. ಇದೇ ವೇಳೆ, ಇರಾನ್‌ ನಲ್ಲಿ ಸೋಮವಾರ 111 ಮಂದಿ ಅಸುನೀಗಿದ್ದು, ಮೃತರ ಸಂಖ್ಯೆ 4,585ಕ್ಕೇರಿಕೆಯಾಗಿದೆ.

ಒಂದು ಲಕ್ಷ ಮಂದಿಗೆ ಸೋಂಕು ; ಚೀನಾ, ಯು.ಕೆ.ಗಿಂತ ನ್ಯೂಯಾರ್ಕ್‌ನಲ್ಲೇ ಹೆಚ್ಚು
ಅಮೆರಿಕದ ಕೋವಿಡ್ ಕೇಂದ್ರ ಸ್ಥಾನ ಎಂದೇ ಪರಿಗಣಿಸಲ್ಪಟ್ಟಿರುವ ನ್ಯೂಯಾರ್ಕ್‌ ನಗರವು ಈಗ ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮತ್ತು ಯು.ಕೆ.ಯನ್ನೇ ಮೀರಿಸಿದೆ. ಸೋಮವಾರ ಒಂದೇ ದಿನ ನ್ಯೂಯಾರ್ಕ್‌ ನಲ್ಲಿ 5,695 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ.

ಇಲ್ಲಿ ಈವರೆಗೆ 6,898 ಮಂದಿ ಅಸುನೀಗಿದ್ದಾರೆ. ಚೀನಾದಲ್ಲಿನ ಒಟ್ಟು ಸೋಂಕಿತರು 83,135 ಆಗಿದ್ದರೆ, ಯುಕೆಯಲ್ಲಿ 88,621 ಮತ್ತು ಇರಾನ್‌ ನಲ್ಲಿ 71,686 ಆಗಿದ್ದಾರೆ. ಇಡೀ ಅಮೆರಿಕದಲ್ಲಿ ಒಟ್ಟು 5,66,654 ಮಂದಿಗೆ ಸೋಂಕು ದೃಢಪಟ್ಟಿದ್ದು, 22,877 ಸಾವಿರ ಮಂದಿ ಸಾವಿಗೀಡಾಗಿದ್ದಾರೆ.

3 ಭಾರತೀಯ-ಅಮೆರಿಕನ್ನರು ಚೇತರಿಕೆ: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಭಾರತೀಯ-ಅಮೆರಿಕನ್ನರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Advertisement

ಸದ್ಯಕ್ಕೆ ಎಲ್ಲಿದ್ದೀರೋ ಅಲ್ಲೇ ಇರಿ
ಕೋವಿಡ್ ಹಿನ್ನೆಲೆಯಲ್ಲಿ ಗಲ್ಫ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಂತೆ ಕೇಂದ್ರಕ್ಕೆ ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದೂಡಿದೆ. ಅಲ್ಲದೆ, “ಸದ್ಯಕ್ಕೆ ನೀವೇಲ್ಲಾ ಎಲ್ಲಿದ್ದೀರೋ, ಅಲ್ಲೇ ಇರಿ’ ಎಂದು ಸಲಹೆ ನೀಡಿದೆ.

ಲಂಕೆಯಲ್ಲಿ ಸಿಲುಕಿದ 80 ಮಂದಿ: ವಿವಿಧ ವ್ಯವಹಾರಗಳಿಗಾಗಿ ಶ್ರೀಲಂಕಾಕ್ಕೆ ತೆರಳಿದ 80 ಮಂದಿ ಭಾರತೀಯರು ಸ್ವದೇಶಕ್ಕೆ ಮರಳಲು ವಿಫ‌ಲರಾಗಿದ್ದಾರೆ. ಒಂದು ತಿಂಗಳಿಂದ ಅಲ್ಲೇ ಉಳಿದುಕೊಂಡಿರುವ ಕಾರಣ ಅವರ ಬಳಿಯಿದ್ದ ಹಣ ಕೂಡ ಖಾಲಿಯಾಗುತ್ತಿದೆ.

ದೇಶಗಳ ವಿರುದ್ಧ ಕ್ರಮ: ಕೋವಿಡ್ ಹಿನ್ನೆಲೆಯಲ್ಲಿ  ವಿದೇಶಿ ಪ್ರಜೆಗಳನ್ನು ವಾಪಸ್‌ ತವರಿಗೆ ಕರೆಸಿಕೊಳ್ಳದ ದೇಶಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next