ನ್ಯೂಯಾರ್ಕ್: ಮಾರಣಾಂತಿಕ ಸೋಂಕು ಕೋವಿಡ್-19 ಪ್ರಾರಂಭವಾದಗಿನಿಂದ ಜನರಲ್ಲಿನ ಆರೋಗ್ಯ ಕಾಳಜಿ ಜಾಗೃತವಾಗಿದೆ. ಅಲ್ಲದೇ ಕ್ಷಣ ಕ್ಷಣಕ್ಕೂ ಸಮಾಜವನ್ನು ಎಚ್ಚರಿಸಲು ಸೋಂಕಿನ ಕುರಿತಾದ ಮಾಹಿತಿಗಳು ಬಹಿರಂಗಗೊಳ್ಳುತ್ತಲೇ ಇವೆ. ಈಗ ಮತ್ತೂಂದು ಆತಂಕದ ವಿಷಯ ಬೆಳಕಿಗೆ ಬಂದಿದೆ. ಈ ಮಹಾಮಾರಿ ಕೇವಲ ಜ್ವರ, ಕೆಮ್ಮ ಹಾಗೂ ಉಸಿರಾಟದ ತೊಂದರೆ ಉಂಟು ಮಾಡುತ್ತದೆ ಎಂಬ ಭಾವನೆ ಎಲ್ಲೆಡೆ ಬಲಗೊಳ್ಳುತಿತ್ತು. ಜಗತ್ತಿನಾದ್ಯಂತ ಕೋವಿಡ್-19 ಲಕ್ಷಣಗಳು ಇವೇ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಅಮೆರಿಕ ವೈದ್ಯರು ಸೋಂಕು ನಾನಾ ಅಂಗಗಳನ್ನು ಬಾಧಿಸದೇ ಇರದು ಎಂದು ಹೇಳಿದ್ದಾರೆ. ಸೋಂಕಿತರಿಗೆ ಉಸಿರಾಟದ ತೊಂದರೆ ನೀಗಿಸಲು ವೆಂಟಿಲೇಟರ್ ಅಳವಡಿಸಿದಾಗಲೂ ಶ್ವಾಸಕೋಶ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ, ಶ್ವಾಸಕೋಶದಲ್ಲಿ ರಕ್ತ ಸರಾಗಿವಾಗಿ ಸಂಚರಿಸದಿರುವುದು ಪತ್ತೆಯಾಯಿತು. ಆಗ ವೈರಾಣುಗಳು ರಕ್ತವನ್ನು ದಪ್ಪವಾಗಿಸಿದ್ದರಿಂದ ಶ್ವಾಸಕೋಶದಲ್ಲಿ ಸರಾಗವಾಗಿ ರಕ್ತ ಸಂಚಾರವಾಗದೇ ಇರುವುದು ಗಮನಕ್ಕೆ ಬಂದಿತು ಎಂದಿದ್ದಾರೆ ವೈದ್ಯ ಸಮೂಹ.
ಕೋವಿಡ್- 19 ವೈರಾಣು ಮನುಷ್ಯರ ರಕ್ತವನ್ನು ದಪ್ಪವಾಗಿಸುವ ಜತೆಗೆ, ಮಿದುಳು, ಮೂತ್ರಪಿಂಡಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ರಕ್ತ ಹೆಪ್ಪುಗಟ್ಟಿ ದರೆ ಶ್ವಾಸಕೋಶದಲ್ಲಿ ಸರಾಗವಾದ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ನ್ಯೂಯಾರ್ಕ್‌ನ 31 ವರ್ಷದ ಯುವ ಸೋಂಕಿತನಲ್ಲೂ ಈ ಎಲ್ಲ ತೊಂದರೆಗಳು ಕಂಡು ಬಂದಿವೆ. ವೈದ್ಯರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಆ ಯುವಕ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಸೋಂಕಿಗೆ ತುತ್ತಾಗಿದ್ದ. ಆದರೆ ಆತನಿಗೆ ಡಯಾಲಿಸಿಸ್ ಚಿಕಿತ್ಸೆ ಮಾಡಿಸಿದಾಗ, ಕ್ಯಾಥೆಟರ್‌ನಲ್ಲಿ ಹೆಪ್ಪುಗಟ್ಟಿದ ರಕ್ತದ ಗಂಟುಗಳು ಕಾಣಿಸಿಕೊಂಡಿದ್ದವು ಎಂದು ವಿವರಿಸಿದ್ದಾರೆ. ಇಲ್ಲಿನ ಮತ್ತೂಬ್ಬ ಯುವಕ ಪಾರ್ಶ್ವವಾಯು ಪೀಡಿತನಾದ ಬಳಿಕವಷ್ಟೇ ಆತನಿಗೆ ಸೋಂಕು ತಗುಲಿದೆ ಎಂಬುದು ದೃಢಪಟ್ಟಿದೆ ಎಂಬ ಸಂಗತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಇದೀಗ ಸೋಂಕಿತರ ಚಿಕಿತ್ಸೆಯಲ್ಲಿ ರಕ್ತವನ್ನು ತೆಳುಗೊಳಿಸುವ ಮದ್ದನ್ನು ಕಡ್ಡಾಯಗೊಳಿಸಲಾಗಿದೆ. ಹಾಗೆಂದು ಹೆಚ್ಚಿನ ಪ್ರಮಾಣದಲ್ಲಿ ರಕ್ತವನ್ನು ತೆಳುಗೊಳಿಸುವ ಮದ್ದು ಕೊಟ್ಟರೆ, ಅದು ಮಿದುಳು ಮತ್ತು ಇತರೆ ಅಂಗಗಳಲ್ಲಿ ರಕ್ತಸೋರಿಕೆಗೆ ಕಾರಣವಾಗಿ ರೋಗಿಯ ಪ್ರಾಣಕ್ಕೇ ಕುತ್ತು ಉಂಟಾಗುವ ಅಪಾಯವೂ ಇದೆ ಎನ್ನಲಾಗಿದೆ. ಹಾಗಾಗಿ ಅದನ್ನು ನಿಯಂತ್ರಿತವಾಗಿ ಕೊಡಬೇಕಾಗುತ್ತದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ ಮೌಂಟ್ ಸಿನ್ಹಾಯಿ ಹಾಸ್ಪಿಟಲ್‌ನ ಡಾ| ಜೆ. ಮೊಕ್ಕೋ.
1. ಯಾವುದೇ ಕೋವಿಡ್ -19 ಸೋಂಕು ಕಳೆದ 6 ದಿನಗಳಲ್ಲಿ ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ ವಿಯೆಟ್ನಾಂ ಸಾಮಾಜಿಕ ಅಂತರ ಪಾಲಿಸುವ ನಿಯಮವನ್ನು ಹಿಂಪಡೆದಿದೆ.
2. 2020ರಲ್ಲಿ ಜಾಗತಿಕ ಒಟ್ಟು ದೇಶೀಯ ಉತ್ಪನ್ನವು ಶೇ. 3.9ರಷ್ಟು ಕುಸಿಯಲಿದೆ ಎಂದು ರೇಟಿಂಗ್ಸ್ ಸಂಸ್ಥೆ ಫಿಚ್ ಹೇಳಿದೆ. ಇದು ನಮ್ಮ ಎಪ್ರಿಲ್ ಆರಂಭದ ಜಿಇಒನಲ್ಲಿ ನಿರೀಕ್ಷಿಸಿದ ಕುಸಿತಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ.
3. ರಮ್ಜಾನ್ ತಿಂಗಳ ಪ್ರಯುಕ್ತ ಈಜಿಪ್ಟ್ ತನ್ನ ರಾತ್ರಿಯ ಅವಧಿಯ ಕರ್ಫ್ಯೂ ಅನ್ನು ಒಂದು ಗಂಟೆ ಕಡಿತಗೊಳಿಸಿದೆ. ರಾತ್ರಿ 8ರ ಬದಲು ರಾತ್ರಿ 9 ಗಂಟೆಗೆ ಕರ್ಫ್ಯೂ ಪ್ರಾರಂಭವಾಗಲಿದ್ದು, ಬೆಳಗ್ಗೆ 6ರ ವರೆಗೆ ಇರಲಿದೆ.