Advertisement

ದ.ಕ. ಜಿಲ್ಲೆಯಾದ್ಯಂತ ಮಾ. 31ರ ವರೆಗೆ ನಿಷೇಧಾಜ್ಞೆ ಜಾರಿ

10:01 AM Mar 28, 2020 | Sriram |

ಮಂಗಳೂರು: ಕೋವಿಡ್‌- 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ. 22ರ ರಾತ್ರಿ 9 ಗಂಟೆಯಿಂದ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ನಿಷೇಧಾಜ್ಞೆ ವಿಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ.

Advertisement

ನಿಷೇಧಾಜ್ಞೆ ವೇಳೆ ಸಾರ್ವಜನಿಕರು ತುರ್ತು ಮತ್ತು ಆವಶ್ಯಕ ಕಾರ್ಯಗಳನ್ನು ಹೊರತುಪಡಿಸಿ ಇನ್ನಾವುದೇ ಕಾರಣಗಳಿಗೆ ಮನೆಗಳಿಂದ ಹೊರಬರುವುದನ್ನು ಕಡ್ಡಾಯ ವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿಯೂ ಜನ ಸೇರುವಂತಹ ಯಾವುದೇ ಕಾರ್ಯಕ್ರಮಗಳನ್ನು ಮಾಡುವುದು ನಿರ್ಬಂಧಿಸಲಾಗಿದೆ.

ಸಾಮಾಜಿಕ ಅಂತರವನ್ನು ಪಾಲಿಸುವ ದೃಷ್ಟಿಯಲ್ಲಿ ಜನಜಂಗುಳಿ ಸೇರದಂತೆ ಎಲ್ಲ ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಉತ್ಸವ/ಜಾತ್ರೆಗಳನ್ನು ನಿಷೇಧಿಸಲಾಗಿದೆ. ಕಾರ್ಮಿಕರ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು ಶೇ. 50ರಷ್ಟು ಬಲದಲ್ಲಿ ರೊಟೇಶನ್‌ ಆಧಾರದಲ್ಲಿ ಕೆಲಸ ನಿರ್ವಹಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಎಲ್ಲ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ದೇವಸ್ಥಾನ, ಮಸೀದಿ, ಚರ್ಚ್‌ ಒಳಗೊಂಡಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಪ್ರವೇಶಿಸಬಾರದೆಂದು ಸೂಚಿಸಲಾಗಿದೆ. ಬೇಸಗೆ, ಶಿಬಿರ, ವಿಚಾರ ಸಂಕಿರಣಗಳು, ವಸ್ತು ಪ್ರದರ್ಶನಗಳು, ಸಂಗೀತ ಹಬ್ಬಗಳು,ಕ್ರೀಡಾ ಚಟುವಟಿಕೆ, ಪಂದ್ಯಾಟ ಮತ್ತಿತರ ಯಾವುದೇ ಕಾರ್ಯ ಕ್ರಮಗಳನ್ನು ಆಯೋಜಿಸ ದಂತೆ ಆದೇಶಿಸಲಾಗಿದೆ. ವೈಯಕ್ತಿಕ ಕಾರಣ ಗಳಿಗಾಗಿ ಅನುಮತಿ ಕೋರಿ ಮನವಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಜನ ಸಹಕರಿಸಬೇಕು
ಜನರು ರವಿವಾರದಂತೆಯೇ ಮುಂದಿನ ಒಂದು ವಾರ ಕಾಲ ಮನೆಯಲ್ಲೇ ಇದ್ದು ಸಹಕರಿಸಬೇಕು. ಸ್ವಯಂ ಪ್ರೇರಿತರಾಗಿ ಇದನ್ನು ಮಾಡಿದ್ದಲ್ಲಿ ಕೊರೊನಾ ವೈರಸ್‌ ಹರಡುವುದನ್ನು ತಡೆಯಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ವಿಶೇಷ ಬಲಿಪೂಜೆ
ಬಿಷಪ್‌ ರೈ| ರೈ| ಡಾ| ಪೀಟರ್‌ ಪೌಲ್‌ ಸಲ್ಡಾನ ಅವರು ರವಿವಾರ ಕೊರೊನಾ ರೋಗಿಗಳು ಬೇಗ ಗುಣಮುಖರಾಗುವಂತೆ ಹಾಗೂ ಕೋವಿಡ್‌- 19 ರೋಗಿಗಳಿಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬಂದಿಗೆ ಗೌರವ ಸಲ್ಲಿಸಿ ಕೊಡಿಯಾಲ್‌ಬೈಲ್‌ನ ಚಾಪೆಲ್‌ನಲ್ಲಿ ವಿಶೇಷ ಬಲಿಪೂಜೆ ಅರ್ಪಿಸಿದರು.

Advertisement

ಮಾ. 31ರವರೆಗೆ ಅಲಭ್ಯವಾಗುವ ಸೇವೆಗಳು
– ಅಂಗಡಿ, ವಾಣಿಜ್ಯ ಸಂಕೀರ್ಣಗಳು, ವರ್ಕ್‌ಶಾಪ್‌ಗ್ಳು, ಅವಶ್ಯವಲ್ಲದ ಸೇವೆಗಳು
-ಸಾರಿಗೆ ನಿಗಮ ಮತ್ತು ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತ
– ಅಂತಾರಾಜ್ಯ ಮತ್ತು ಅಂತರ್‌ ಜಿಲ್ಲೆ ಸಾರಿಗೆ ಸಂಚಾರ ಸೇವೆಗಳು ಕಾರ್ಯಾಚರಣೆ ಇಲ್ಲ
-ಬೀಚ್‌, ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧ

ಲಭ್ಯವಿರುವ ಆವಶ್ಯಕ ಸೇವೆಗಳು
-ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣಿನ ಮಾರುಕಟ್ಟೆ, ಅಂಗಡಿಗಳು, ಪತ್ರಿಕೆ, ಎಲ್ಲ ಸರಕು ಸಾಗಾಣಿಕೆ
-ಪೊಲೀಸ್‌, ಅಗ್ನಿಶಾಮಕ ಸೇವೆಗಳು,ವಿದ್ಯುತ್ಛಕ್ತಿ, ನೀರು, ಪೌರಸೇವೆಗಳು
-ಎಲ್ಲ ಸರಕಾರಿ ಕಚೇರಿಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಕಚೇರಿಗಳು, ಅಂಚೆ, ಬ್ಯಾಂಕ್‌, ಎಟಿಎಂ, ದೂರವಾಣಿ, ಇಂಟರ್ನೆಟ್‌
-ಆಹಾರ ಪದಾರ್ಥ ಹೋಂ ಡೆಲಿವರಿ, ಔಷಧ, ವೈದ್ಯಕೀಯ ಸಲಕರಣೆಗಳು
– ರೆಸ್ಟೋರೆಂಟ್‌ಗಳಿಂದ ಆಹಾರ ಕೊಂಡೊಯ್ಯುವುದು
-ಕೃಷಿ, ರೇಷ್ಮೆ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆಗೆ ಸಂಬಂಧಿಸಿ ಅಂಗಡಿ-ಮಾರುಕಟ್ಟೆ, ಸರಕಾರ, ಸ್ಥಳೀಯ ಸಂಸ್ಥೆಗಳಿಂದ ಒದಗುವ ಕ್ಯಾಂಟಿನ್‌ ಸೇವೆಗಳು

ಇಂದೂ ಸರಕಾರಿ ಬಸ್‌ ಇಲ್ಲ, ಖಾಸಗಿ ಬಸ್‌ ಆಂಶಿಕ
ಉಡುಪಿ/ಮಂಗಳೂರು: ರವಿವಾರ ಜನತಾ ಕರ್ಫ್ಯೂ ಕರೆಯ ಕಾರಣ ಸಂಪೂರ್ಣ ಬಂದ್‌ ಆಚರಿಸಿದ ಬಸ್‌ ಸೇವೆಗಳು ಸೋಮವಾರವೂ ವ್ಯತ್ಯಯವಾಗಲಿವೆ.

ಸಾಮಾನ್ಯ ಬಂದ್‌ ಕರೆಗಳ ಸಮಯ ಸಂಜೆ ಹೊತ್ತು ಆರಂಭ ವಾಗುತ್ತಿದ್ದ ಖಾಸಗಿ ಬಸ್‌ಗಳು ರವಿವಾರ ಸಂಜೆ ಆರಂಭವಾಗಲಿಲ್ಲ. ಬಂದ್‌ ವೇಳೆ ರಾತ್ರಿ ದೂರಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ಗಳು ಆರಂಭವಾಗುತ್ತಿದ್ದವು. ರವಿವಾರ ರಾತ್ರಿ ಬೆಂಗಳೂರಿಗೆ ಹೋಗುವ ಬೆಂಗಳೂರು ಡಿಪೋದ ಮೂರು ವೋಲ್ವೋ ಬಸ್‌ಗಳು ಮಾತ್ರ ಸಂಚರಿಸಿವೆ. ಕುಂದಾಪುರ ಮತ್ತು ಉಡುಪಿ ಡಿಪೋಗೆ ಸೇರಿದ ಐದು ಬಸ್‌ಗಳನ್ನು ರದ್ದುಗೊಳಿಸಲಾಗಿದೆ.

ಕೆಲವು ಖಾಸಗಿ ಸಿಟಿ ಬಸ್‌, ಕೆಲವು ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಸೋಮವಾರ ಬೆಳಗ್ಗೆ ಓಡಿಸುತ್ತೇವೆ. ಕೆಲವರು ಪ್ರಯಾಣಿಕರ ಕೊರತೆಯಿಂದ ಓಡಿಸುವುದಿಲ್ಲ ಎಂದು ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಮತ್ತು ಕೆನರಾ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್‌ ತಿಳಿಸಿದ್ದಾರೆ. ಸೋಮವಾರದಿಂದ ಮಂಗಳೂರಿಗೆ ಹೋಗುವ ಟ್ರಿಪ್‌ಗ್ಳು ರದ್ದಾಗಿದ್ದು, ಹೆಜಮಾಡಿ ವರೆಗೆ ಮಾತ್ರ ಹೋಗುತ್ತವೆ ಎಂದು ತಿಳಿದುಬಂದಿದೆ.

ಮಂಗಳೂರಿನಿಂದ ಹೊರಡುವ ಮತ್ತು ಮಂಗಳೂರಿಗೆ ಆಗಮಿಸುವ ಸಿಟಿ ಮತ್ತು ಖಾಸಗಿ ಬಸ್‌ ಸಂಚಾರವನ್ನು ಮಾ. 31ರ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ತಿಳಿಸಿದ್ದಾರೆ.

ಇಂದು ಬಸ್‌ ಸಂಚಾರ ಬಂದ್‌
ಕೋವಿಡ್‌- 19 ಆತಂಕ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ಬಸ್‌ ಸಂಚಾರವನ್ನು ಸೋಮವಾರ ರದ್ದುಗೊಳಿಸಲಾಗಿದೆ. ಅದೇ ರೀತಿ ವಿವಿಧ ರಾಜ್ಯಗಳಿಗೆ ತೆರಳುವ ಬಸ್‌ಸಂಚಾರ ಮತ್ತು ಎಲ್ಲ ರೀತಿಯ ಹವಾನಿಯಂತ್ರಿತ ಬಸ್‌ ಕಾರ್ಯಾಚರಣೆಯನ್ನು ಮಾ. 31ರವರೆಗೆ ರದ್ದುಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next