Advertisement

ಸೌತ್‌ ಬ್ರಾಂಕ್ಸ್‌ನಲ್ಲೀಗ ಪ್ರತಿದಿನವೂ ಸರದಿ ಸಾಲು

02:38 PM May 01, 2020 | sudhir |

ಮಣಿಪಾಲ: ಕೋವಿಡ್‌ 19ರಿಂದ ನಲುಗಿ ಹೋಗಿರುವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕದಲ್ಲಿ ಹೆಚ್ಚು ಸಾವುನೋವು ಸಂಭವಿಸಿದ ನಗರ ನ್ಯೂಯಾರ್ಕ್‌. ಇಲ್ಲಿನ ಸೌತ್‌ ಬ್ರಾಂಕ್ಸ್‌ನಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ಜನರು ಕಿ.ಮೀ. ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತಂತೆ ಕಂಡು ಬರುತ್ತಿದೆ. ಸೂರ್ಯ ಉದಯಿಸುವ ಮೊದಲೇ ಈ ಸಾಲುಗಳು ರೂಪುಗೊಂಡಿರುತ್ತವೆ. ಪ್ರತಿ ಸೇವೆಗೂ ತಾಸುಗಟ್ಟಲೆ ಕಾಯಬೇಕಿದೆ.

Advertisement

ಅಮೆರಿಕದಲ್ಲಿ ಈ ಸ್ಥಿತಿ ಬರುತ್ತದೆಂದು ಅವರ್ಯಾರೂ ಭಾವಿಸಿರಲಿಕ್ಕಿಲ್ಲ. ತಾವು ಮುಂದುವರಿದ ರಾಷ್ಟ್ರದ ಪ್ರಜೆಗಳು ಎಂಬ ಅಹಂ ಹಾಗೆ ಯೋಚಿಸುವುದನ್ನು ತಡೆದಿರಲೂ ಬಹುದು. ಈಗಿನ ವಾಸ್ತವ ಮತ್ತೆ ಆಲೋಚಿಸುವತ್ತ ಪ್ರೇರೇಪಿಸಿದೆ.

ಸೌತ್‌ ಬ್ರಾಂಕ್ಸ್‌ನ ಸ್ಟ್ರೀಟ್‌ ನಂಬರ್‌ 149ರಲ್ಲಿ 70ರ ಹರೆಯದ ಎಡ್ವರ್ಡ್‌ ಹಾಲ್ಸ್‌ ಎಂಬವರು ಅಗತ್ಯ ಕೆಲಸಕ್ಕಾಗಿ ಬಂದಿದ್ದರು. ಹಿಂದಿನ ದಿನ ಕಂಡಿದ್ದ ಸರತಿ ಸಾಲು ಅವರನ್ನು ಮುಂಜಾನೆಯೇ ಬಂದು ನಿಲ್ಲುವಂತೆ ಮಾಡಿತ್ತು. ಅವರು 7.30ಕ್ಕೆ ಬರಲು ಯೋಚಿಸಿದ್ದರು. ಆದರೆ ಸಹೋದರಿ 7 ಗಂಟೆಗೇ ಕಳುಹಿಸಿದ್ದರು. ಇದು ಅನಿವಾರ್ಯತೆಯನ್ನು ಹೇಳುತ್ತಿರುವಂಥ ಪ್ರಸಂಗ.
“ಸಾಲಲ್ಲೇ ಬನ್ನಿ, ಸರತಿ ಸಾಲನ್ನು ತಪ್ಪಿಸಬೇಡಿ, ಸಾವಧಾನ’ ಇಂಥ ಮಾತುಗಳು ಅಮೆರಿಕದಲ್ಲೂ ಕೇಳಿ ಬರುತ್ತಿದೆ. ಜನರು ನೀರನ್ನೂ ಕುಡಿಯಲು ಸಾಲಿನಿಂದ ಹೊರ ಹೋಗುತ್ತಿಲ್ಲ. ಈ ಪೈಕಿ 70, 80ರ ಹರೆಯದ ವೃದ್ಧರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿ ಮಾಡಿದೆ ದಿ ವಾಷಿಂಗ್ಟನ್‌ ಪೋಸ್ಟ್‌.

ಔಷಧ ಅಂಗಡಿ, ಎಟಿಎಂ, ಅಗತ್ಯ ವಸ್ತುಗಳ ಅಂಗಡಿ, ಬ್ಯಾಂಕ್‌, ಅಂಚೆ ಕಚೇರಿ, ವಿವಿಧ ಬಿಲ್‌ ಪಾವತಿ ಹೀಗೆ ಪ್ರತಿ ಸೇವೆಗೂ ತಾಸುಗಟ್ಟಲೆ ಕಾಯ ಬೇಕಾದುದು ಅನಿವಾರ್ಯತೆ.

ಇಬ್ರಾಹಿಂ ಸನೋಗಾ ಎಂಬ ಟ್ಯಾಕ್ಸಿ ಡ್ರೈವರ್‌ ನ ಮಾತು ಕೇಳಿ. ತಾನು ಒಂದು ಬಾಡಿಗೆಗಾಗಿ ವಿಮಾನ ನಿಲ್ದಾಣದ ಟ್ಯಾಕ್ಸಿ ಸಾಲಲ್ಲಿ ಸುಮಾರು 6 ತಾಸು ಕಾಯಬೇಕಾಗಿದೆ. ಇಂಥ ಅನುಭವ ಎಲ್ಲರಿಗೂ ಆಗಿದೆಯಂತೆ. ನಿರುದ್ಯೋಗ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದೂರವಾಣಿಯಲ್ಲಿ ಓರ್ವನಿಗೆ ಸುಮಾರು 4 ತಾಸು ಬೇಕಾಗುತ್ತಂತೆ.

Advertisement

ಪಟಾಪಟ್‌ ಬದುಕಿಗೆ ಒಗ್ಗಿಕೊಂಡಿದ್ದ ಜೀವಗಳು ಈಗ ನಿಧಾನಗತಿಗೆ ಹೊಂದಿಕೊಳ್ಳಬೇಕಿದೆ. ತಾಳ್ಮೆಯನ್ನೇ ಅಸ್ತ್ರವಾಗಿಟ್ಟುಕೊಳ್ಳಬೇಕಿದೆ. ಬದಲಾಗಿ ಆಕ್ರೋಶ ವ್ಯಕ್ತಪಡಿಸುವುದರಿಂದ ಲಾಭವಿಲ್ಲ ಎಂಬುದೂ ಅರ್ಥವಾಗುತ್ತಿದೆ. ಧ್ವನಿವರ್ಧಕದಲ್ಲಿ ಪ್ರಕಟನೆ ಕೇಳಿ ಬರುತ್ತಿದ್ದಂತೆ ಜನರೆಲ್ಲ ಸಮುಚ್ಚಯಗಳಿಂದ ಹೊರಗೆ ಬಂದು ಸಮುದಾಯದ ವತಿಯಿಂದ ನೀಡಲಾಗುವ ಊಟಕ್ಕೆ ಸಾಲು ನಿಲ್ಲುತ್ತಿದ್ದಾರೆ. ಜನರು ತಮ್ಮ ತಮ್ಮ ಅನುಭವ ವಿನಿಮಯಕ್ಕೆ ತೊಡಗಿದ್ದಾರೆ. ಒಬ್ಬೊಬ್ಬರದೂ ಒಂದೊಂದು ರೀತಿ. ಆದರೆ ಎಲ್ಲರದೂ ಕಷ್ಟದ ಸ್ಥಿತಿಯೇ.

Advertisement

Udayavani is now on Telegram. Click here to join our channel and stay updated with the latest news.

Next