ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚುತ್ತಿದ್ದು, ಪಂಜಾಬ್ ನ ಅಮೃತಸರದಲ್ಲಿ ಎರಡು ಹೊಸ ಪ್ರಕರಣಗಳು ವರದಿಯಾಗಿದೆ.
ಇದರೊಂದಿಗೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ 33ಕ್ಕೇರಿದೆ. ಇದರಲ್ಲಿ 16 ಮಂದಿ ಇಟಲಿ ಮೂಲದ ಪ್ರವಾಸಿಗರೂ ಸೇರಿದ್ದಾರೆ.
ಇಟಲಿಗೆ ಹೋಗಿ ಬಂದಿದ್ದ ಇಬ್ಬರಿಗೆ ಸೋಂಕು ತಗುಲಿದೆ ಎಂದು ಅಮೃತಸರದ ವೈದ್ಯಕೀಯ ಕಾಲೇಜು ಖಚಿತಪಡಿಸಿದೆ. ಹೊಸಹರಿಪುರ ಮೂಲದವರಾಗಿರುವ ಇವರು ಇಟಲಿಯಿಂದ ನೇರವಾಗಿ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಜಮ್ಮುವಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಇಬ್ಬರು ವ್ಯಕ್ತಿಗಳ ಪರೀಕ್ಷಾ ವರದಿ ಸರಕಾರದ ಕೈಸೇರಿದ್ದು, ಪಾಸಿಟಿವ್ ಆಗಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಜಮ್ಮು ಮತ್ತು ಸಾಂಬಾದ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 31ರವರೆಗೆ ರಜೆ ಘೋಷಿಸಲಾಗಿದೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಒಟ್ಟು 15 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಓರ್ವ ಭಾರತೀಯನಿದ್ದಾನೆ ಎನ್ನಲಾಗಿದೆ.