ಶಿವಮೊಗ್ಗ: ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಕಾಡುತ್ತಿರುವ ಮಂಗನ ಕಾಯಿಲೆಯ ಸಮರ್ಪಕ ನಿಯಂತ್ರಣಕ್ಕಾಗಿ ವಿಶೇಷ ಸಭೆಯನ್ನು ಕರೆದು ಕ್ರಮ ಕೈಗೊಳ್ಳ ಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಮತ್ತು ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕೆಎಫ್‌ಡಿ ಬಗ್ಗೆ ಜಿಲ್ಲೆಯ ಶಾಸಕರು ವಿಧಾನಸಭೆಯಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ.
ಕೆಎಫ್‌ಡಿಗೆ ಸೂಕ್ತ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ನಡೆಸಬೇಕಾದ ಸಂಶೋಧನೆಗಳ ಕುರಿತು ಸಮಾಲೋಚನೆ ನಡೆಸಲು ಉನ್ನತ ಮಟ್ಟದ ಸಭೆ ಕರೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 168 ಕೆಎಫ್‌ಡಿ ಪ್ರಕರಣಗಳು ವರದಿಯಾಗಿದ್ದು, ತೀರ್ಥಹಳ್ಳಿಯಲ್ಲಿ 132 ಮತ್ತು ಸಾಗರದಲ್ಲಿ 36 ಪ್ರಕರಣಗಳು ವರದಿಯಾಗಿವೆ. 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಸಿಬಂದಿ ಸಹಿತ ಸಿಬಂದಿ ವೇತನ ಪಾವತಿಗೆ 80 ಕೋ. ರೂ. ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಸಿಬಂದಿ ವೇತನ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.