ಬೆಂಗಳೂರು: ರಾಜ್ಯದಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೆ ತಲುಪಿದೆ.
ಸದ್ಯ ಸೋಂಕು ಪ್ರಕರಣಗಳು ಲಕ್ಷ ದಾಟಿರುವ ಮಹಾರಾಷ್ಟ್ರ ಮತ್ತು ತಮಿಳುನಾಡು ಹೊರತುಪಡಿಸಿದರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಸೋಂಕಿತರು ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
ಮಂಗಳವಾರ ರಾಜಧಾನಿಯ 56 ಕೋವಿಡ್ 19 ಸೋಂಕಿತರು ಸಹಿತ ರಾಜ್ಯಾದ್ಯಂತ ದಾಖಲೆಯ 87 ಸೋಂಕಿತರ ಸಾವು ವರದಿಯಾಗಿದೆ. ಹೊಸದಾಗಿ 2,496 ಮಂದಿಗೆ ಸೋಂಕು ತಗಲಿದ್ದರೆ, ಅತಿ ಹೆಚ್ಚು 1,142 ಸೋಂಕಿತರು ಬಿಡುಗಡೆಯಾಗಿದ್ದಾರೆ.
ಈ ಪೈಕಿ ಬೆಂಗಳೂರಿನಲ್ಲಿಯೇ 1,267 ಮಂದಿ ಸೋಂಕಿತರಾಗಿದ್ದಾರೆ. 664 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 44,077, ಸೋಂಕು ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದವರ ಸಂಖ್ಯೆ 842, ಗುಣಮುಖರಾದವರ ಸಂಖ್ಯೆ 17,390ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೋವಿಡ್ 19 ಟಾಪ್ 10 ರಾಜ್ಯಗಳ ಪೈಕಿ ಕರ್ನಾಟಕ ಸೋಂಕಿನ ತೀವ್ರತೆ ಅತಿ ಹೆಚ್ಚು ಶೇ. 9ರಷ್ಟು ಹೊಂದಿದೆ. ಜತೆಗೆ ಗುಣಮುಖ ಪ್ರಮಾಣದಲ್ಲಿ ಹಿಂದುಳಿದಿದ್ದು, ಶೇ. 39ರಷ್ಟಿದೆ.
ರಾಜ್ಯವಾರು ಸೋಂಕು ಪ್ರಕರಣಗಳ ಪೈಕಿ ಕರ್ನಾಟಕ ಐದನೇ ಸ್ಥಾನದಲ್ಲಿದ್ದರೂ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮಂಗಳವಾರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಒಟ್ಟು 25,836 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್ 19 ಕೇರ್ ಸೆಂಟರ್ ಹಾಗೂ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ.