Advertisement

ನಿಜಾಮುದ್ದೀನ್‌ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಲಿ

01:12 PM Apr 06, 2020 | Sriram |

ಉಡುಪಿ: ದಿಲ್ಲಿ ನಿಜಾಮುದ್ದೀನ್‌ ಸಮಾವೇಶದಲ್ಲಿ ಪಾಲ್ಗೊಂಡ ಹಲವರು ಸೋಂಕು ತಗಲಿಸಿಕೊಂಡು ಕೋವಿಡ್ 19 ಜೆಹಾದ್‌ ಗಿಳಿದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ, ವೈದ್ಯರಿಗೆ ಸೋಂಕು ತಗಲಿಸಲು ಯತ್ನಿಸುವವರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸಿ ಜೀವಾ ವಧಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

Advertisement

ರವಿವಾರ ಡಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಸಮಾವೇಶದಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಕಳುಹಿಸಬೇಕು. ಅನಂತರ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಸಮಾವೇಶದಲ್ಲಿ ಪಾಲ್ಗೊಂಡು ನಾಪತ್ತೆಯಾದವರು ಸ್ವಯಂಪ್ರೇರಿತರಾಗಿ ಕ್ವಾರಂಟೈನ್‌ಗೆ ಒಳಪಡುವಂತೆ ಸರಕಾರ ಮನವಿ ಮಾಡಿದೆ. ಇನ್ನೂ ಹೆಸರು ನೋಂದಣಿ ಮಾಡದವರು ಇದ್ದಾರೆ. ಬೆಂಗಳೂರಿನಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಮಾವೇಶಕ್ಕೆ ಹೋದವರು ಇಲ್ಲ. ಆದರೆ ದಿಲ್ಲಿಗೆ ಹೋಗಿ ಸಮಾವೇಶದ ಸುತ್ತಮುತ್ತ ಓಡಾಡಿ ಬಂದವರಿದ್ದಾರೆ. ಅವರನ್ನು ಪತ್ತೆ ಮಾಡಿ ಕ್ವಾರಂಟೈನ್‌ನಲ್ಲಿರಿಸಿ ನಿಗಾ ಇಡಲಾಗುತ್ತಿದೆ ಎಂದರು.

ಯು.ಟಿ. ಖಾದರ್‌ ಅವರ ಟೀಕೆ ಕುರಿತು ಗಮನ ಸೆಳೆದಾಗ, ರಾಜಕೀಯ ಮಾಡುತ್ತಿರುವುದು ನಾವಲ್ಲ; ನಿಜಾಮುದ್ದೀನ್‌ ಸಮಾವೇಶದಲ್ಲಿ ಪಾಲ್ಗೊಂಡು ದುಷ್ಕೃತ್ಯ ನಡೆಸಿದವರಿಗೆ ಹೇಳಲಿ ಎಂದರು.

ಬಿಜೆಪಿ ಸ್ಥಾಪನಾ ದಿನದ ಮುನ್ನಾದಿನ ದೀಪ ಬೆಳಗಿಸಲು ಕರೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು, ಕಾಕತಾಳೀಯವಾಗಿ ಬಂದಿರಬಹುದು. ಇದಕ್ಕೂ ದೀಪ ಬೆಳಗಿಸಲು ಕರೆ ನೀಡಿರುವುದಕ್ಕೂ ಸಂಬಂಧವಿಲ್ಲ ಎಂದರು. ಇದು ನಮ್ಮ ಶಕ್ತಿಯ ಉದ್ದೀಪನಕ್ಕೆ ಸ್ಫೂರ್ತಿ ಅಷ್ಟೆ. ಜಾತಿ, ಧರ್ಮ ಮೀರಿ ಎಲ್ಲರೂ ಅವರವರು ನಂಬುವ ದೇವರಿಗೆ ನಮಿಸಬೇಕು ಎಂದರು.

Advertisement

ಕಾಸರಗೋಡಿಗೆ ತರಕಾರಿ
ಕಾಸರಗೋಡು ಗಡಿಯನ್ನು ಬಂದ್‌ ಮಾಡಿರುವುದನ್ನು ಸಮರ್ಥಿಸಿದ ಶೋಭಾ ಅವರು, ಕಾಸರಗೋಡು ಕೋವಿಡ್ 19 ಆಪತ್ತಿನಲ್ಲಿ ಕೆಂಪು ವಲಯ(ರೆಡ್‌ ಝೋನ್‌) ದಲ್ಲಿದೆ. ಅದ್ದರಿಂದ ಗಡಿಯನ್ನು ಬಂದ್‌ ಮಾಡದೆ ಬೇರೆ ದಾರಿ ಇಲ್ಲ. ಚಿಕ್ಕಮಗಳೂರಿ ನಿಂದ ಕಾಸರಗೋಡಿಗೆ ತರಕಾರಿ ವಾಹನಗಳನ್ನು ಕಳುಹಿಸಲಾಗಿದೆ. ಆದರೆ ವಾಪಸು ಬರುವಾಗ ವಾಹನ ಮತ್ತು ಚಾಲಕರಿಗೆ ಸ್ಯಾನಿಟೈಸ್‌ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಸಭೆಯಲ್ಲಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಎಸ್‌ಪಿ ವಿಷ್ಣುವರ್ಧನ್‌, ಕೊರೊನಾ ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್‌ ಪಾಲ್ಗೊಂಡಿದ್ದರು.

ಉಡುಪಿ ಜಿಲ್ಲೆಗೆ 95 ಕ್ವಿಂಟಾಲ್‌ ಧಾನ್ಯ ಕಿಟ್‌
ಬೆಂಗಳೂರಿನಲ್ಲಿ ಬಿಹಾರ, ಝಾರ್ಖಂಡ್‌, ಉತ್ತರ ಪ್ರದೇಶ, ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಿಗೆ ಬೇಕಾದ ಆಹಾರ ಕಿಟ್‌ಗಳನ್ನು ಒದಗಿಸಿದ್ದೇನೆ. ಉಡುಪಿ ಜಿಲ್ಲೆಗೆ 95 ಕ್ವಿಂಟಾಲ್‌ ದವಸಧಾನ್ಯಗಳ ಕಿಟ್‌ ತರಿಸಲಾಗಿದೆ. ಬೈಂದೂರು ನಮ್ಮ ವಿಧಾನಸಭಾ ಕ್ಷೇತ್ರವಲ್ಲದಿದ್ದರೂ ಅಲ್ಲಿಗೂ 15 ಕ್ವಿಂ. ಧಾನ್ಯಗಳ ಕಿಟ್‌ ಕೊಡಲಾಗುತ್ತದೆ. ಪ್ರತಿ ವಿಧಾನಸಭಾ ಸದಸ್ಯರಿಗೂ ಕೊಡಲಾಗುತ್ತಿದೆ. ಇದನ್ನು ಜಿಲ್ಲಾಡಳಿತ, ಸಂಘ-ಸಂಸ್ಥೆಗಳ ಮೂಲಕ ವಿತರಿಸುತ್ತೇವೆ ಎಂದು ಶೋಭಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next