Advertisement
ಕೋವಿಡ್-19 ಬೆಂಗಳೂರಿನಲ್ಲಿ ಸೆಂಚುರಿ ಬಾರಿಸುತ್ತಿದ್ದರೆ, ನಾನು ಅದೇ ಬೆಂಗಳೂರಿನಿಂದ ನನ್ನೂರಿಗೆ ಬಂದಿಳಿದಿದ್ದೆ. ಬಸ್ ಇಳಿದು ಮನೆ ಸೇರುವವರೆಗೂ, ಮೊದಲೆಲ್ಲಾ ಸಿಗುತ್ತಿದ್ದ ಆತ್ಮೀಯತೆ, ಅಂದು ಗೈರು ಹಾಜರಾಗಿತ್ತು. ಕೆಟ್ಟು ಪಟ್ಟಣ ಸೇರು ಅಂತಾರೆ. ಜಾಗತೀಕರಣದ ಬಳುವಳಿಯಿಂದ, ಕೆಡದೆಯೂ ಪಟ್ಟಣ ಸೇರುವ ಅನಿವಾರ್ಯತೆ ಇದೆ. ವ್ಯಕ್ತಿ, ಹುಟ್ಟಿದ ಊರಲ್ಲೇ ಬೇರು ಬಿಟ್ಟುಕೊಂಡು ಬದುಕಲು ಸಾಧ್ಯವಿಲ್ಲ. ಆತ ಅಲ್ಲಿಂದ ಎದ್ದು, ಕವಲು ದಾರಿಗಳನ್ನು ದಾಟಿ, ಬದುಕು ರೂಪಿಸಿಕೊಳ್ಳಬೇಕಾಗುತ್ತದೆ. ಹಾಗೆ ರೂಪಿಸಿಕೊಂಡೇ ಊರಿನ ಒಂದು ತಂತುವನ್ನು ತನ್ನೊಂದಿಗೆ ಸುತ್ತಿಕೊಂಡಿರುತ್ತಾನೆ.
ಅನುಭೂತಿಯ ನಡುವೆ ಮೊನ್ನೆ ಊರಲ್ಲಿ ಬಸ್ ಇಳಿದಾಗ, ಅಲ್ಲಿನ ಜನ ನೋಡಿದ್ದು ಮಾತ್ರ ತೀರಾ ವಿಚಿತ್ರವಾಗಿ. “ಯಾಕೆ ಬಂದ್ನಪ್ಪ, ಅಲ್ಲಿಯೇ ಇರೋದಲ್ವ?’ ಅನ್ನುವ ಮಾತುಗಳು ಊರಿನ ಜನರ ಮಧ್ಯೆಯಿಂದ ಕೇಳಿ ಬಂದವು. ಬಿಡಿ, ಇದರಲ್ಲಿ ಊರಿನ ತಪ್ಪಿಲ್ಲ. ಇಡೀ ಜಗತ್ತೇ ಕೋವಿಡ್-19 ದಿಂದ ಲ್ಲಣಿಸುತ್ತಿರುವಾಗ, ಕೇವಲ ನೂರುಗಟ್ಟಲೆ ಜನರಿರುವ ನನ್ನ ಹಳ್ಳಿಯೂ ಅದಕ್ಕೆ ಹೊರತಾಗಿಲ್ಲ. ಕೋವಿಡ್-19 ಸೊಂಕಿತರ ಲೆಕ್ಕಾಚಾರದಲ್ಲಿ ಬೆಂಗಳೂರೇ ಮುಂದಿರುವಾಗ, ಅಲ್ಲಿಂದಲೇ ಬಂದ ನನ್ನನ್ನು ಒಂದೇ ಏಟಿಗೆ ಅಪ್ಪಿಕೊಳ್ಳುವುದಾದರೂ ಹೇಗೆ?. ಜೀವ- ಜೀವನ ಅಂತ ಬಂದಾಗ, ಯಾರೇ ಆದರೂ ತಮ್ಮ ತಮ್ಮ ಸುರಕ್ಷತೆಗೆ ಆದ್ಯತೆ ಕೊಡುತ್ತಾರೆ. ಅದರಲ್ಲೂ, ಸಾವನ್ನು ಅಂಗೈಯಲ್ಲಿಟ್ಟು ಬಂದಿರುವ ಕೋವಿಡ್-19 ದ ವಿಷಯದಲ್ಲಿ, ಎಂಥವನಿಗೂ ಗಡಗಡ. ಊರಲ್ಲಿ ಎಲ್ಲರೂ ಒಂದು ಅಂತರ ಇಟ್ಟುಕೊಂಡೇ ಮಾತಿಗಿಳಿದರು. ಮನೆಯವರಿಗೆಂತೂ ಕಳವಳ.
Related Articles
ಮನೆ ಸೇರಿದ ಸ್ವಲ್ಪ ಹೊತ್ತಲ್ಲೇ, ಆರೋಗ್ಯ ಕಾರ್ಯಕರ್ತರು ಬಂದರು. ತಮಗೆ ಬೇಕಾದ ಮಾಹಿತಿ ಪಡೆದುಕೊಂಡು ಹೋದರು. ಊರಿನ ಜನ, ಮನೆಯವರ ಕಳವಳ, ಆರೋಗ್ಯ ಕಾರ್ಯಕರ್ತರ ವಿಚಾರಣೆ ಇವೆಲ್ಲವೂ, ನಾನೊಬ್ಬ ತಪ್ಪಿತಸ್ಥ ಎಂಬ ಭಾವನೆ ಬರುವಂತೆ ಮಾಡಿದವು. ಆರೋಗ್ಯದ ವಿಷಯ ಬಂದಾಗ, ಜನ ಹೇಗೆಲ್ಲ ನಡೆದುಕೊಳ್ಳುತ್ತಾರೆ ಅನ್ನುವುದು ಈಗ ನನ್ನ ಗಮನಕ್ಕೆ ಬಂದಿತು. ಮೂರ್ನಾಲ್ಕು ದಿನ ಕಳೆದರೂ, ಊರು ಅನುಮಾನದಿಂದಲೇ ನೋಡುತ್ತಿತ್ತು. ವಾರ ಕಳೆದರೂ ನನಗೆ ಏನೂ ಆಗಲಿಲ್ಲ ಎಂದು ಖಚಿತವಾದ ನಂತರ ಎಲ್ಲವೂ
ಮೊದಲಿನಂತೆಯೇ ಶುರುವಾದವು. ಜೀವ ಮುಖ್ಯ ಅಂತ ಬಂದಾಗ ಕಟ್ಟ ಕಡೆಗೆ ಮನುಷ್ಯ ಸ್ವಾರ್ಥಕ್ಕಿಳಿಯುತ್ತಾನೆ. ಅದು ಸಹಜ ಕೂಡ. ನಾನು ಕೂಡ ಅಂಥದ್ದೇ ಜಾಗದಲ್ಲಿದಿದ್ದರೆ ಹೀಗೆಯೇ ವರ್ತಿಸುತ್ತಿದ್ದೆ ಅನ್ನುವುದು ಸುಳ್ಳಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಒಂದು ಪುಟ್ಟ ಕಥೆ ನೆನಪಾಗುತ್ತದೆ. ಒಮ್ಮೆ ತಜ್ಞರು ಒಂದು ಪ್ರಯೋಗಕ್ಕೆ ಮುಂದಾದರು.
Advertisement
ಒಂದು ಕೋತಿ ಮತ್ತು ಕೋತಿ ಮರಿಯನ್ನು ಆಳದ ಡಬ್ಬದಲ್ಲಿ ಹಾಕಿದರು. ಮತ್ತು ಅದಕ್ಕೆ ನೀರು ಸುರಿಯುತ್ತಾ ಹೋದರು. ಕೋತಿ, ತನ್ನ ಮರಿಯನ್ನು ನೀರಿನಿಂದ ಪಾರುಮಾಡಲುಹೆಗಲಮೇಲೆ ಕೂರಿಸಿಕೊಂಡಿತು. ಮತ್ತಷ್ಟು ನೀರು ಹಾಕಲಾಯಿತು ಈಗ ಕೋತಿ, ಮರಿಯನ್ನು ತಲೆಯ ಮೇಲೆ ಕೂರಿಸಿಕೊಂಡಿತು. ಇನ್ನಷ್ಟು ನೀರು ಹಾಕಲಾಯಿತು ಈ ಬಾರಿ ಕೋತಿಯು, ತಾನು ಬದುಕಲು ನಿರ್ಧರಿಸಿ, ಮರಿಯನ್ನು ಕೆಳಗೆ ಹಾಕಿ, ಅದರ ಮೇಲೆ ನಿಂತುಕೊಂಡಿತು. ನೋಡಿ, ಜೀವ ಅಂತ ಬಂದಾಗ ಎಲ್ಲರೂ ಹೇಗೆ ಸ್ವಾರ್ಥಿಗಳಾಗುತ್ತಾರೆ ಅನ್ನುವುದನ್ನು ಇದಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವಿಲ್ಲ. ಊರಿನ ಜನ ಹಾಗೆ ನಡೆಸಿಕೊಂಡಿದ್ದಕ್ಕೆ ನಾನು ಖುಷಿಪಟ್ಟೆ. ಒಬ್ಬರಿಂದ ಒಬ್ಬರಿಗೆ ಹರಡುವ ಈ ಕಾಯಿಲೆ ವಿಚಾರದಲ್ಲಿ, ಅವರ ಜಾಗೃತಿ ಕಂಡು ಬೆರಗಾದೆ. ಕಾಯಿಲೆಯ ಬಗೆಗೆ ಇದ್ದ ಭಯವೇ ನನ್ನನ್ನು ಪ್ರತ್ಯೇಕವಾಗಿ ನೋಡಲು ಕಾರಣ ಎಂದು ಅರ್ಥವಾಯಿತು. ಈಗ, ನಿಶ್ಚಲ ರಸ್ತೆಗಳ ಸದ್ದಿಗೆ ನಾನೂ, ನನ್ನ ಅರೆಬೆಂದ ಬೆಂಗಳೂರು ತನಕ್ಕೆ ಅವೂ ಒಗ್ಗಿಹೋಗಿದ್ದೇವೆ. ಊರ ಮನದ ಮೂಲೆಯಲ್ಲಿ ಸಣ್ಣ ಅನುಮಾನದ ಹೊಗೆ ಆಡುತ್ತಲೇ ಇದೆ; ಇವನಿಗೇನಾದರೂ ಕೋವಿಡ್-19 ಹೊಕ್ಕಿದೆಯಾ ಅಂತ… ಸದಾಶಿವ್ ಸೊರಟೂರು