ಹಾಸನ: ಹಾಸನದ ಹಿಮ್ಸ್ ಆಸ್ಪತೆಯ ಕೋವಿಡ್ 19 ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ಪುರುಷ ಶುಕ್ರವಾರ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದ ವ್ಯಕ್ತಿ ಮಧ್ಯಾಹ್ನದ ವೇಳೆಗೆ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೂಲತಃ ಹಳೆಬೀಡು ಭಾಗದವರಾಗಿದ್ದ ಮೃತ ವ್ಯಕ್ತಿ ಕಳೆದ 15 ವರ್ಷಗಳಿಂದ ಹಾಸನ ತಾಲೂಕಿನ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದರು. ಈ ಹಿಂದೆಯೇ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆ ವ್ಯಕ್ತಿ ಅನಿಯಂತ್ರಿತ ಮಧುಮೇಹದಿಂದಲೂ ಬಳಲುತ್ತಿದ್ದು, ಮನೆಯಲ್ಲಿಯೇ ಇದ್ದರು. ತೀವ್ರ ಆಯಾಸದಿಂದ ಜೂ.10ರಂದು ಹಾಸನ ತಾಲೂಕಿನ ಸಾಲಗಾಮೆಯ ಆಸ್ಪತ್ರೆಗೆ ಬಂದು ಗ್ಲೂಕೋಸ್ ಹಾಕಿಸಿಕೊಂಡು ವಾಪಸ್ ಮನೆಗೆ ಹೋಗಿದ್ದರು.
ಆ ವ್ಯಕ್ತಿಗೆ ಅದೇ ದಿನ ಸಂಜೆ ಉಸಿರಾಟದ ತೊಂದರೆ ಕಾಣಿಸಿ ಕೊಂಡಿದೆ. ತಕ್ಷಣ ಹಾಸನದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಅವರನ್ನು ಪರೀಕ್ಷೆಗೊಳಪಡಿಸಿದ ಖಾಸಗಿ ಆಸ್ಪತ್ರೆಯ ವೈದ್ಯರು ಹಾಸನದ ಕೋವಿಡ್ 19 ಆಸ್ಪತ್ರೆ ಯಾಗಿರುವ ಹಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು.
ಬುಧವಾರ ಸಂಜೆ 7.45ರ ವೇಳೆಗೆ ಕೋವಿಡ್ 19 ಆಸ್ಪತ್ರೆಗೆ ಬಂದ ವ್ಯಕ್ತಿಯನ್ನು ದಾಖಲು ಮಾಡಿಕೊಂಡಿದ್ದ ವೈದ್ಯ ಸಿಬ್ಬಂದಿ ಕೋವಿಡ್ 19 ಲಕ್ಷಣಗಳಿದ್ದಿದ್ದರಿಂದ ಚಿಕಿತ್ಸೆ ಆರಂಭಿಸಿದ್ದರು. ವ್ಯಕ್ತಿಯ ಗಂಟಲ ದ್ರವ ವನ್ನು ಗುರುವಾರ ತೆಗೆದು ಪರೀಕ್ಷೆಗೆ ಕಳುಹಿಸಿದ್ದರು. ಶುಕ್ರವಾರ ಬೆಳಿಗ್ಗೆ ಬಂದ ವರದಿಯಲ್ಲಿ ಕೋವಿಡ್ 19 ಸೋಂಕಿರುವುದು ದೃಢಪಟ್ಟಿತು. ಚಿಕಿತ್ಸೆ ಮುಂದುವರಿದಿದ್ದಾಗಲೇ ಮಧ್ಯಾಹ್ನ 1.15 ರ ವೇಳೆಗೆ ಆ ವ್ಯಕ್ತಿ ಮೃತಪಟ್ಟರು ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮೃತ ವೃದ್ಧನ ಮಗ ಆಗಾಗ ತಮಿಳು ನಾಡಿಗೆ ಹೋಗಿ ಬರುತ್ತಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾ ಜಿಸಲಾಗಿದೆ ಎಂದು ಹೇಳಿದರು. ವೃದ್ಧನ ಜೊತೆಗಿದ್ದ ನಾಲ್ವರಿಗೆ ಕ್ವಾರಂಟೈನ್ ಮಾಡಲಾಗಿದ್ದು, ವೃದ್ಧನ ಮನೆಯ ಬೀದಿಯನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ ಎಂದರು. ಮೃತ ವ್ಯಕ್ತಿಯ ಅಂತ್ಯಕ್ರಿಯೆಯ ಬಗ್ಗೆ ಕುಂಟುಂಬದವರೊಂದಿಗೆ ಚರ್ಚಿಸಿ ಕೋವಿಡ್ 19 ಪ್ರಕರದಲ್ಲಿ ಕೈಗೊಳ್ಳಬೇಕಾದ ಕ್ರಮಗಳಂತೆ ಅಂತ್ಯಕ್ರಿಯೆ ನಡೆಸಲಾಗು ವುದು ಎಂದು ಹೇಳಿದರು.
ತಿಂಗಳ ನಂತರ ಬಲಿ: ದೇಶದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ಆರಂಭವಾದ ನಂತರ ಜಿಲ್ಲೆಯಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದರಿಂದ 48 ದಿನಗಳ ಕಾಲ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳದೇ ಹಾಸನ ಜಿಲ್ಲೆ ಹಸಿರು ವಲಯದಲ್ಲಿತ್ತು.
ಆದರೆ ಲಾಕ್‌ಡೌನ್ 4.0 ಜಾರಿಯ ನಂತರ ಲಾಕ್‌ಡೌನ್ ಸಡಿಲಿಸಿ ಹೊರ ರಾಜ್ಯ, ಹೊರ ಜಿಲ್ಲೆಯವರ ಆಗ ಮನಕ್ಕೆ ಸರ್ಕಾರ ಅವಕಾಶ ನೀಡಿದ ಕೆಲ ದಿನಗಳ ನಂತರ ಅಂದರೆ ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಚನ್ನರಾಯ ಪಟ್ಟಣ ತಾಲೂಕು ಮೂಲದವರಲ್ಲಿ ಮೇ 12 ರಂದು ಮೊದಲ ಬಾರಿಗೆ ಹಾಸನ ಜಿಲ್ಲೆಯಲ್ಲಿ 5 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದಾಖಲಾದವು. ಕಾಕತಾಳೀಯ ಎಂಬಂತೆ ಸರಿಯಾಗಿ ಒಂದು ತಿಂಗಳಿಗೆ ಜೂ.12 ರಂದು ಒಬ್ಬರು ಕೊರೊ ನಾಗೆ ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯ ಜನರಲ್ಲಿ ಕೋವಿಡ್ 19 ಬಗ್ಗೆ ಆತಂಕ ಶುರುವಾಗಿದೆ.