Advertisement

ಕೋವಿಡ್‌-19 ನಿಲ್ಲುವ ಸೂಚನೆ ಸಿಗುತ್ತಲೇ ಇಲ್ಲ

01:58 AM Jul 02, 2020 | Hari Prasad |

ಜಾಗತಿಕವಾಗಿ ಕೋವಿಡ್ 19 ಸಾಂಕ್ರಾಮಿಕ ನಿಲ್ಲುವ ಲಕ್ಷಣ ಗೋಚರಿಸುತ್ತಲೇ ಇಲ್ಲ.

Advertisement

ಬುಧವಾರದ ವೇಳೆಗೆ ವಿಶ್ವಾದ್ಯಂತ ಒಟ್ಟು 42 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 5 ಲಕ್ಷಕ್ಕೂ ಅಧಿಕ ಜನ ಅಸುನೀಗಿದ್ದಾರೆ.

ಈಗಲೂ ಅಮೆರಿಕದಲ್ಲೇ ಈ ವೈರಸ್‌ನ ಆಘಾತ ಜೋರಾಗಿದ್ದು, 27 ಲಕ್ಷಕ್ಕೂ ಅಧಿಕ ಸೋಂಕಿತರಿದ್ದರೆ, 1 ಲಕ್ಷಕ್ಕೆ 30 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಹಾಟ್‌ಸ್ಪಾಟ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ ಚೇತರಿಸಿಕೊಂಡವರ ಸಂಖ್ಯೆ ಮೂರೂವರೆ ಲಕ್ಷದ ಸನಿಹವಿದೆಯಾದರೂ, ದೇಶಾದ್ಯಂತ ವೈರಸ್‌ ಹಬ್ಬುತ್ತಿರುವ ವೇಗವನ್ನು ನೋಡಿದರೆ ಆತಂಕ ಎದುರಾಗುತ್ತಿದೆ.

ಈಗ ಜನರ ಮೇಲೆ ಜವಾಬ್ದಾರಿ ಅಧಿಕವಾಗಿದ್ದು, ಸೂಕ್ತ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಹೋದರೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದೇ ಕಷ್ಟವಾಗಲಿದೆ.

Advertisement

ಏಷ್ಯಾದಲ್ಲಿ ಹೇಗಿದೆ ವೈರಸ್‌ ಆಘಾತ?


ಒಟ್ಟಾರೆ, ಪ್ರಕರಣಗಳ ಆಧಾರದಲ್ಲಿ ನೋಡಿದರೆ, ಏಷ್ಯಾದಲ್ಲಿ ಭಾರತದಲ್ಲೇ ಕೋವಿಡ್ 19 ಸೋಂಕು ಹೆಚ್ಚು ಹಾವಳಿ ಎಬ್ಬಿಸಿದೆ ಎಂದೆನಿಸುತ್ತದೆಯಾದರೂ, ಜನಸಂಖ್ಯೆಗೆ ಹೋಲಿಸಿದರೆ ಈಗಲೂ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯೇ ಇದೆ.

ಉದಾಹರಣೆಗೆ, ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಹೊಂದಿ­ರುವ ಸೌದಿ ಅರೇಬಿಯಾದಲ್ಲಿ ಈ­ವರೆಗೂ 1. 90  ಲಕ್ಷ  ಪ್ರಕರಣಗಳು ಪತ್ತೆಯಾಗಿವೆ. ಇನ್ನೊಂದೆಡೆ 22 ಕೋಟಿ ಜನಸಂಖ್ಯೆಯಿರುವ ಪಾಕಿಸ್ಥಾನದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ.

ಪಾಕಿಸ್ಥಾನಕ್ಕಿಂತಲೂ ಅಧಿಕ ಜನಸಂಖ್ಯೆ­ಯಿರುವ ಉತ್ತರ ಪ್ರದೇಶದಲ್ಲಿ­ (23.15 ಕೋಟಿ)  ಬುಧವಾರದ ವೇಳೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 23442. (ಬುಧವಾರದ ಬೆಳಗ್ಗಿನ ಅಂಕಿ ಅಂಶ)

ದಕ್ಷಿಣ ಅಮೆರಿಕ, ಏಷ್ಯಾದಲ್ಲಿ ಏರುತ್ತಿದೆ ಕೋವಿಡ್‌ ವೇಗ


ಏಷ್ಯಾದಲ್ಲಿ ಆರಂಭವಾದ ಕೋವಿಡ್‌-19 ಅನಂತರ ಹೆಚ್ಚು ಹಾನಿ ಮಾಡಿದ್ದು ಯುರೋಪ್‌ಗೆ. ಅನಂತರ ಅಲ್ಲಿಂದ ಉತ್ತರ ಅಮೆರಿಕದಲ್ಲಿ ಅದರ ಆರ್ಭಟ ಹೆಚ್ಚಾಯಿತು. ಈಗ ಈ ಸಾಂಕ್ರಾಮಿಕ ಏಷ್ಯಾ ಮತ್ತು ದಕ್ಷಿಣ ಅಮೆರಿಕನ್‌ ರಾಷ್ಟ್ರಗಳಿಗೆ ಹೆಚ್ಚು ತೊಂದರೆಯುಂಟು ಮಾಡಲಾರಂಭಿಸಿದೆ.

ಯುರೋಪ್‌ನಲ್ಲಿ ಅತಿಹೆಚ್ಚು ಪ್ರಕರಣಗಳು ರಷ್ಯಾದಲ್ಲಿ ದಾಖಲಾಗಿದ್ದರೆ, ಏಷ್ಯಾದಲ್ಲಿ ಭಾರತ ಮೊದಲ ಹಾಟ್‌ ಸ್ಪಾಟ್‌ ಆಗಿದೆ. ಇನ್ನು ಉತ್ತರ ಅಮೆರಿಕದಲ್ಲಿ ‘ಅಮೆರಿಕ’ ಮುಂದಿದ್ದರೆ, ದಕ್ಷಿಣ ಅಮೆರಿಕದಲ್ಲಿ ಬ್ರೆಜಿಲ್‌ ಅತಿಹೆಚ್ಚು ಪೀಡಿತ ರಾಷ್ಟ್ರವಾಗಿದೆ.

ಆಫ್ರಿಕನ್‌ ರಾಷ್ಟ್ರಗಳ ಸ್ಥಿತಿ ಉತ್ತಮವೇ?
ಮೇಲ್ನೋಟಕ್ಕೆ ಆಫ್ರಿಕನ್‌ ರಾಷ್ಟ್ರಗಳಲ್ಲಿ ಕೋವಿಡ್‌ ಸಾಂಕ್ರಾಮಿಕದ ತೊಂದರೆ ಅಷ್ಟಾಗಿ ಇಲ್ಲ ಎಂದೆನಿಸುತ್ತದೆ. ದ.ಆಫ್ರಿಕಾ, ಈಜಿಪ್ಟ್, ನೈಜೀರಿಯಾ, ಘಾನಾ, ಅಲ್ಜೀರಿಯಾ, ಮೊರಕ್ಕೋ, ಸುಡಾನ್‌, ಕೀನ್ಯಾ, ಇಥಿಯೋಪಿಯಾ ಸೇರಿದಂತೆ ಆಫ್ರಿಕಾದ 54 ರಾಷ್ಟ್ರಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿವೆಯಾದರೂ, ಈ ಎಲ್ಲಾ ರಾಷ್ಟ್ರಗಳ ಒಟ್ಟು ಪ್ರಕರಣಗಳ ಸಂಖ್ಯೆ ಕೇವಲ 4 ಲಕ್ಷದಷ್ಟಿದೆ.

ಇದರಲ್ಲೂ 1.50 ಲಕ್ಷ ಪ್ರಕರಣಗಳು ದ. ಆಫ್ರಿಕಾವೊಂದರಲ್ಲೇ ಪತ್ತೆಯಾಗಿವೆ. ಹಾಗಿದ್ದರೆ, ಆಫ್ರಿಕಾ ಗಂಡಾಂತರದಿಂದ ತಪ್ಪಿಸಿಕೊಂಡಿದೆಯೇ ಎನ್ನುವ ಪ್ರಶ್ನೆಗೆ ‘ಖಂಡಿತ ಇಲ್ಲ’ ಎನ್ನುತ್ತಾರೆ ತಜ್ಞರು. ಆಫ್ರಿಕಾದಲ್ಲಿ ಕಡಿಮೆ ಪ್ರಕರಣಗಳಿರುವುದಕ್ಕೆ, ಕಡಿಮೆ ಸಂಖ್ಯೆಯ ಟೆಸ್ಟ್‌ಗಳೇ ಮುಖ್ಯ ಕಾರಣ ಎನ್ನಲಾಗುತ್ತದೆ.

ಈಜಿಪ್ಟ್: 51 ಪ್ರತಿಶತ ಟಿಪಿಆರ್‌!: ಈಶಾನ್ಯ ಆಫ್ರಿಕಾವನ್ನು ಮಧ್ಯಪ್ರಾಚ್ಯದೊಂದಿಗೆ ಬೆಸೆಯುವ ಈಜಿಪ್ಟ್ನ ಉದಾಹರಣೆ ನೋಡುವುದಾದರೆ, ಈ ರಾಷ್ಟ್ರದಲ್ಲಿ ಇದುವರೆಗೂ ಕೇವಲ 68,311 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಅಲ್ಲಿ ನಡೆದಿರುವುದೇ ಕೇವಲ 1 ಲಕ್ಷ 25 ಸಾವಿರ ಪರೀಕ್ಷೆಗಳು! ಈ ಲೆಕ್ಕದಲ್ಲಿ ನೋಡಿದಾಗ ಈಜಿಪ್ಟ್ನ ಟೆಸ್ಟ್‌  ಪಾಸಿಟಿವಿಟಿ ದರ 50.60 ಆಗುತ್ತದೆ. ಅಂದರೆ ಪ್ರತಿ ನೂರು ಪರೀಕ್ಷೆಗಳಲ್ಲಿ 51 ಸೋಂಕಿತರು ಪತ್ತೆಯಾಗಿದ್ದಾರೆ ಎಂದರ್ಥ!

ಏಷ್ಯನ್‌ ಹಾಟ್‌ಸ್ಪಾಟ್‌ಗಳಲ್ಲಿ ಭಾರತದ ಟಿಪಿಆರ್‌


ಕೋವಿಡ್‌-19 ಪ್ರಸರಣ ಯಾವ ಹಂತದಲ್ಲಿದೆ ಎನ್ನುವುದನ್ನು ಪತ್ತೆಹಚ್ಚಲು ಟೆಸ್ಟ್‌ ಪಾಸಿಟಿವಿಟಿ ರೇಟ್‌ ಕೂಡ ಒಂದು ಉತ್ತಮ ಮಾನದಂಡವೆನ್ನುತ್ತಾರೆ ಪರಿಣತರು. ಹೆಚ್ಚು ಟೆಸ್ಟ್‌ ಪಾಸಿಟಿವಿಟಿ ದರ ಇದ್ದರೆ, ರೋಗ ಪ್ರಸರಣ ಅಧಿಕವಿದೆ ಎಂದರ್ಥ. ಉದಾಹರಣೆಗೆ,  ಭಾರತದಲ್ಲಿ ಇದುವರೆಗೂ 88 ಲಕ್ಷಕ್ಕೂ ಅಧಿಕ ಟೆಸ್ಟ್‌ಗಳು ನಡೆದಿದ್ದರೆ, ಅದರಲ್ಲಿ 5 ಲಕ್ಷ 86 ಸಾವಿರ ಪ್ರಕರಣ ಪತ್ತೆಯಾಗಿವೆ. ಈ ಲೆಕ್ಕದಲ್ಲಿ ಭಾರತದ ಟೆಸ್ಟ್‌ ಪಾಸಿಟಿವಿಟಿ ದರ 6.64 ಪ್ರತಿಶತ ಎಂದಾಯಿತು.

ಅಂದರೆ, ಪ್ರತಿ ನೂರು ಪರೀಕ್ಷೆಗಳಲ್ಲಿ 6.64 ಜನರಲ್ಲಿ (ಅಂದರೆ 7 ಜನರಲ್ಲಿ) ಸೋಂಕು ಪತ್ತೆಯಾಗುತ್ತಿದೆ ಎಂದರ್ಥ. ಇನ್ನೊಂದೆಡೆ ನೆರೆಯ ಬಾಂಗ್ಲಾದೇಶದಲ್ಲಿ ಟೆಸ್ಟ್‌ ಪಾಸಿಟಿವಿಟಿ ದರ 18.95 ಪ್ರತಿಶತ ತಲುಪಿದ್ದು, ಇದುವರೆಗೂ ಆ ರಾಷ್ಟ್ರ ಕೇವಲ 7.87 ಲಕ್ಷ ಜನರನ್ನು ಪರೀಕ್ಷಿಸಿದ್ದರೆ ಅದರಲ್ಲೇ 1 ಲಕ್ಷ 49 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ.

11 ದೇಶಗಳಲ್ಲೇ 4 ಲಕ್ಷಕ್ಕೂ ಅಧಿಕ ಸಾವು
ಇದುವರೆಗೂ ವಿಶ್ವಾದ್ಯಂತ 5 ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದರೆ, ಇದರಲ್ಲಿ 11 ಹಾಟ್‌ಸ್ಪಾಟ್‌ ರಾಷ್ಟ್ರಗಳಲ್ಲೇ ಮೃತಪಟ್ಟವರ ಸಂಖ್ಯೆ 4 ಲಕ್ಷಕ್ಕೂ ಅಧಿಕ ದಾಖಲಾಗಿದೆ. (ಬುಧವಾರ ಬೆಳಗ್ಗಿನ ಅಂಕಿ)

Advertisement

Udayavani is now on Telegram. Click here to join our channel and stay updated with the latest news.

Next