ಬಂಟ್ವಾಳ: ರಾಜ್ಯದಲ್ಲಿ ಇಂದು ಕೇವಲ ಒಂದು ಕೋವಿಡ್-19 ಸೋಂಕು ಪ್ರಕರಣ ದೃಢವಾಗಿದ್ದು, ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಮಹಿಳೆಗೆ ಸೋಂಕು ದೃಢವಾಗಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ನಿವಾಸಿಯಾದ 47 ವರ್ಷದ ಮಹಿಳೆಗೆ ಸೋಂಕು ತಾಗಿರುವುದ ದೃಢವಾಗಿದೆ. ಸೋಂಕಿತ ಸಂಖ್ಯೆ 432ರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ.
ಆಸ್ಪತ್ರೆ ಸಿಬ್ಬಂದಿ
ಇಂದು ಸೋಂಕು ದೃಢವಾದ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ. ಬಂಟ್ವಾಳದ ವೃದ್ದೆಯೋರ್ವರು ಇದೇ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಪಾರ್ಶ್ವವಾಯುಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ಧರು. ಎರಡು ದಿನಗಳ ಹಿಂದೆ ಅವರು ಕೋವಿಡ್ 19 ಪಾಸಿಟಿವ್ ಎಂದು ದೃಢಪಟ್ಟಿದ್ದು, ನಂತರ ಆಕೆ ಸಾವನ್ನಪ್ಪಿದ್ದರು.
ವೃದ್ದೆಗೆ ಸೋಂಕು ಇರುವುದು ಖಚಿತವಾದ ಹಿನ್ನಲೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಇಂದು ದೃಢವಾದ ಮಹಿಳೆಯು ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದರು.
ಸದ್ಯ ಈಕೆಯ ನಿವಾಸವಾದ ನರಿಕೊಂಬು ಗ್ರಾಮದ ನಾಯಿಲ ಸೀಲ್ ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಭಾಗದ ಜನರು ಯಾರು ಕೂಡಾ ಜಿಲ್ಲಾಡಳಿತ ದ ಮುಂದಿನ ಅದೇಶದವರಗೆ ಹೊರಗೆ ಬರುವಂತಿಲ್ಲ. ಈ ಗ್ರಾಮದ ಜನರಿಗೆ ಬೇಕಾದ ದಿನಬಳಕೆಯ ವಸ್ತುಗಳನ್ನು ತಾಲೂಕು ಆಡಳಿತ ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ಪೂರೈಕೆ ಮಾಡಲಿದೆ.