ಕೋಲಾರ: ಜಿಲ್ಲೆಯಲ್ಲಿ ಮತ್ತೂಂದು ಕೋವಿಡ್ 19 ಸೋಂಕು ಪ್ರಕರಣ ವರದಿ ಯಾಗಿದೆ. ತುಮಕೂರಿನಿಂದ ಬಂಗಾರಪೇಟೆಗೆ ಬಂದಿದ್ದ 40 ವರ್ಷದ ಪಿ.4863 ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ಈತ ನಾಪತ್ತೆಯಾಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ತುಮಕೂರಿನಿಂದ ಬಂದಿದ್ದ ಈ ವ್ಯಕ್ತಿಯಲ್ಲಿ ಸೋಂಕು ಕಾಣುವ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 30 ಕ್ಕೇರಿದಂತಾಗಿದೆ. ಕಳೆದ ಜೂ.3 ರಂದು ಕೋಲಾರಕ್ಕೆ ಬಂದಿದ್ದ ಈ ವ್ಯಕ್ತಿ ಬಂಗಾರಪೇಟೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ನೀಡಿ ಹೋಗಿದ್ದ. ಪಾಸಿಟಿವ್ ಎಂದು ತಿಳಿದ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಈತನಿಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಈತ, ಪಾಸಿಟಿವ್ ಎಂದು ತಿಳಿದ ಕೂಡಲೇ ಝೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ.
ಇದೀಗ ಈ ವ್ಯಕ್ತಿಯ ಗಂಟಲುದ್ರವ ಮಾದರಿಯ ಫಲಿತಾಂಶ ಪಾಸಿಟಿವ್ ಆಗಿದ್ದು, ಈ ವ್ಯಕ್ತಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕುಂಬಾರಹಳ್ಳಿ ಸೀಲ್‌ಡೌನ್: ಜನರಿಗೆ ಕರಪತ್ರ ವಿತರಣೆ: ಶುಕ್ರವಾರ ಪತ್ತೆಯಾಗಿದ್ದ ಕೋವಿಡ್ 19 ಪಾಸಿಟಿವ್ ಪ್ರಕರಣದ ವ್ಯಕ್ತಿ ವಾಸವಾಗಿದ್ದ ಕುಂಬಾರಹಳ್ಳಿಯನ್ನು ಸೀಲ್ ಡೌನ್ ಮಾಡಲಾಗಿದ್ದು, ಪಿಎಸ್‌ಐ ಕಿರಣ್ ನೇತೃತ್ವದಲ್ಲಿ ಗ್ರಾಮದಲ್ಲಿ ಕರಪತ್ರ ವಿತರಿಸಿ ಅರಿವು ಮೂಡಿಸಲಾಯಿತು. ಗ್ರಾಮದ ಮುಖಂಡ ಮಲ್ಲೇಶ್ ನೇತೃತ್ವದಲ್ಲಿ ಸ್ವಯಂಸೇವಕರನ್ನು ನೇಮಿಸಿ ಅಗತ್ಯ ವಸ್ತುಗಳ ಸರಬರಾಜಿಗೆ ಅವಕಾಶ ಕಲ್ಪಿಸಿದ್ದು, ಜನತೆ ವಿನಾಕಾರಣ ಓಡಾಡದೇ ಸೋಂಕಿನಿಂದ ದೂರವಿರಿ ಎಂದು ಪಿಎಸ್‌ಐ ಕಿವಿಮಾತು ಹೇಳಿದರು.
ಗ್ರಾಮದಲ್ಲಿ ಈಗಾಗಲೇ ಔಷಧಿ ಸಿಂಪಡಿಸಿದ್ದು, ನೋಡಲ್ ಅಧಿಕಾರಿ ಶ್ರೀಧರ್, ಟಿಎಚ್‌ಒ ರಮ್ಯದೀಪಿಕಾ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಾದ ಸರಸ್ವತಿ, ಆಂಜಮ್ಮ ಮತ್ತಿತರರು ಗ್ರಾಮದಲ್ಲಿ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಿದರು.