Advertisement

ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಕೋವಿಡ್ ಸೋಂಕಿತರಿಗೆ ಹಾಸ್ಟೆಲ್ ಚಿಕಿತ್ಸೆ!

07:48 AM May 28, 2020 | Hari Prasad |

ಬೆಂಗಳೂರು: ರಾಜ್ಯದ ಕೋವಿಡ್ ಸೋಂಕು ಚಿಕಿತ್ಸಾ ಕೇಂದ್ರಗಳಲ್ಲಿ ಶೇ.95 ರಷ್ಟು ಹಾಸಿಗೆಗಳು ಖಾಲಿ ಇದ್ದೂ, ಆರೋಗ್ಯ ಸಚಿವರ ಉಸ್ತುವಾರಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ 20 ಮಂದಿ ಕೋವಿಡ್ ಸೋಂಕಿತರು ತಾಲೂಕು ವ್ಯಾಪ್ತಿಯ ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿಯೇ 48 ಗಂಟೆಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ!

Advertisement

ರಾಜ್ಯ ಆರೋಗ್ಯ ಇಲಾಖೆ ಸೂಚನೆಯಂತೆ ಜಿಲ್ಲೆಯಲ್ಲಿ ಯಾರಿಗಾದರೂ ಸೋಂಕು ದೃಢಪಟ್ಟರೆ ಕೂಡಲೇ ಅವರನ್ನು ಜಿಲ್ಲಾ ನಿಗದಿತ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಬೇಕು. ಆದರೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ, ಸಮನ್ವಯತೆ ಕೊರತೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಮೇ.26 ರಂದು ಸೋಂಕು ದೃಢಪಟ್ಟ 20 ಮಂದಿಯನ್ನು ಜಿಲ್ಲಾ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸದೆ ಕ್ವಾರಂಟೈನ್ ಮಾಡಿದ್ದ ಚಳ್ಳಕೆರೆ ತಾಲೂಕು ಕೇಂದ್ರದಿಂದ ಎರಡು ಕಿ.ಮೀ ದೂರದ ಬಿಸಿಎಂ ಹಾಸ್ಟೆಲ್‍ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಹಾಸ್ಟೆಲ್ ಒಂದರಲ್ಲಿ ಚಿಕಿತ್ಸೆ ನೀಡುತ್ತಿರುವ ಮಾಹಿತಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಸ್ಥಳೀಯ ಜಿಲ್ಲಾಡಳಿತವೇ ಈ ಕುರಿತು ನಿರ್ಧಾರ ಕೈಗೊಂಡಿದೆ.

ಹಿನ್ನೆಲೆ: ತಮಿಳುನಾಡಿನಿಂದ ಉತ್ತರ ಪ್ರದೇಶಕ್ಕೆ ಟ್ರಕ್‍ನಲ್ಲಿ ತೆರಳುತ್ತಿದ್ದ 58 ವಲಸೆ ಕಾರ್ಮಿಕರನ್ನು ಮೇ.15ರಂದು ಚಿತ್ರದುರ್ಗದ ಚಳ್ಳಕೆರೆ ಬಳಿ ತಪಾಸಣೆ ನಡೆಸಿ ಶಂಕಿತರು ಎಂದು ಗುರುತಿಸಿ ಸ್ಥಳೀಯ ಬಿಸಿಎಂ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಗಂಟಲು ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು.

ಈ ಪೈಕಿ ಮೇ.23ರಂದು ಟ್ರಕ್‍ನ ಚಾಲಕನಿಗೆ ಸೋಂಕು ದೃಢಪಟ್ಟಿತ್ತು. ಮಂಗಳವಾರ (ಮೇ.26) ಮತ್ತೆ 20 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತ ಚಾಲಕನನ್ನು ಮಾತ್ರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಬಾಕಿ 20 ಮಂದಿಯನ್ನು ಸೋಂಕು ದೃಢಪಟ್ಟ ಬಳಿಕವೂ ಜಿಲ್ಲೆಯ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿಲ್ಲ.

ಶೇ.95 ರಷ್ಟು ಹಾಸಿಗೆ ಖಾಲಿ: ಸುರೇಶ್ ಕುಮಾರ್
ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆಂದು ಒಟ್ಟು 28,686 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈ ಪೈಕಿ ಸದ್ಯ ಶೇ.5 ರಷ್ಟು ಹಾಸಿಗೆಗಳಲ್ಲಿ 1,588 ಸಕ್ರಿಯ ಕೋವಿಡ್ ವೈರಸ್ ಸೊಂಕು ಪ್ರಕರಣಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ 95 ರಷ್ಟು ಹಾಸಿಗಳು ಖಾಲಿ ಇದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೂ ಹಾಸಿಗೆ ಕೊರತೆ ಉಂಟಾಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಆದರೂ, ಚಿತ್ರದುರ್ಗದಲ್ಲಿ ಸೋಂಕಿತರು ಬಿಸಿಎಂ ಹಾಸ್ಟೆಲ್‍ನಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

Advertisement

ನಿರ್ಲಕ್ಷ್ಯ ಮತ್ತು ವಿರೋಧ
ಸೋಂಕಿತರೆಲ್ಲಾ ಜಿಲ್ಲೆಗೆ ಸಂಬಂಧಿಸಿದವರಲ್ಲ ಮತ್ತು ಎಲ್ಲರೂ ಅನ್ಯರಾಜ್ಯಕ್ಕೆ ಸೇರಿದ್ದವರು ಎಂಬ ನಿರ್ಲಕ್ಷ್ಯ ಇಲ್ಲಿ ಎಂದು ಕಾಣುತ್ತಿದೆ. ಇನ್ನು ಸೋಂಕಿತರನ್ನು ಚಿತ್ರದುರ್ಗ ನಗರಕ್ಕೆ ಸ್ಥಳಾಂತರಿಸಲು ಸ್ಥಳೀಯ ವಿರೋಧವಿತ್ತು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಹೀಗಾಗಿಯೇ, ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ಹಾಸಿಗಳು ಇದ್ದರೂ ಹಾಸ್ಟೆಲ್‍ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ನಿರ್ವಹಣೆ ಕಷ್ಟ
ಸೋಂಕಿತರ ನಿರ್ವಹಣೆ ತಾಲೂಕು ಆಸ್ಪತ್ರೆಯ 9 ಶುಶ್ರೂಷಕಿಯರು ಹಾಗೂ 6 ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ. ವೈದ್ಯರೊಬ್ಬರು ಪಾಳಿಯಲ್ಲಿ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಹಾಸ್ಟೆಲ್‍ನಲ್ಲಿ ಯಾವುದೇ ವೆಂಟಿಲೇಟರ್ ವ್ಯವಸ್ಥೆ ಇಲ್ಲ. ಸೋಂಕಿತರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದರೆ ಜಿಲ್ಲಾ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಬೇಕಿದೆ. ಇನ್ನು ಸೋಂಕಿತರು ಯಾವುದೇ ಲಕ್ಷಣ ಇಲ್ಲದ ಹಿನ್ನೆಲೆ ಒಟ್ಟಾಗಿ ಸೇರುವುದು, ಹಾಸ್ಟೆಲ್‍ನಲ್ಲಿ ತುಂಬಾ ಓಡಾಟ ನಡೆಸುತ್ತಿದ್ದಾರೆ. ಇನ್ನು ಹಾಸ್ಟೆಲ್‍ನಲ್ಲಿ ಸೋಂಕಿತರ ಚಿಕಿತ್ಸೆಗೆ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗಿದೆ.

ಸೋಂಕು ಲಕ್ಷಣವಿಲ್ಲದವರು, ಅಗತ್ಯ ಚಿಕಿತ್ಸೆ ವ್ಯವಸ್ಥೆ
ಈ ಕುರಿತು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, `20 ಮಂದಿಯಲ್ಲಿ ಯಾರಿಗೂ ಸೋಂಕು ಲಕ್ಷಣಗಳಿಲ್ಲ. ಹೀಗಾಗಿ, ನಿಗದಿ ಆಸ್ಪತ್ರೆ ಹೊರತಾಗಿಯೂ ಚಿಕಿತ್ಸೆ ನೀಡಲಾಗುತ್ತಿದೆ. ಬಿಸಿಎಂ ಹಾಸ್ಟೆಲ್ ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಿದ್ದು, ಅಗತ್ಯ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಕರೆತಂದು ಅಗತ್ಯ ಖರ್ಚು ಹಾಗೂ ಸಿಬ್ಬಂದಿ ವ್ಯಯ ಮಾಡುವಂತಿಲ್ಲ’ ಎಂದಿದ್ದಾರೆ.

ಸಮನ್ವಯತೆ ಕೊರತೆ
ಸೋಂಕಿತರಿಗೆ ಹಾಸ್ಟೆಲ್‍ನಲ್ಲಿ ಚಿಕಿತ್ಸೆ ನೀಡುತ್ತಿರುವ ಕುರಿತು ರಾಜ್ಯ ಆರೋಗ್ಯ ಇಲಾಖೆಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಜತೆಗೆ ಮಂಗಳವಾರ ಆರೋಗ್ಯ ಇಲಾಖೆ ನೀಡಿದ್ದ ಕೋವಿಡ್ -19 ಬುಲಿಟಿನ್‍ನಲ್ಲಿ ಈ 20 ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಮೂದಿಸಲಾಗಿದೆ.

ಬುಧವಾರ ರಾತ್ರಿ ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿಗಳು ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿಕೆ ನೀಡಿದರೆ, ಜಿಲ್ಲಾಧಿಕಾರಿಗಳು, ಸದ್ಯ ಸೋಂಕಿತರಿರುವ ಹಾಸ್ಟೆಲ್‍ನ ಅನ್ನು ಕೊವೀಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದು, ಅಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ

– ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next