ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,795 ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ 201 ದಿನಗಳ ಕನಿಷ್ಠ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ(ಸೆಪ್ಟೆಂಬರ್ 28) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ನನ್ನ ನಾಯಕತ್ವ ಅಲ್ಲ, ಪಕ್ಷದ ನಾಯಕತ್ವದಲ್ಲೇ ಚುನಾವಣೆ: ಸಿಎಂ ಬೊಮ್ಮಾಯಿ
ಕಳೆದ 24ಗಂಟೆಗಳಲ್ಲಿ 20,000ಕ್ಕಿಂತ ಕಡಿಮೆ ಪ್ರಮಾಣದ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,92,206ಕ್ಕೆ ಇಳಿಕೆಯಾಗಿದೆ. ಇದು ಕಳೆದ 192 ದಿನಗಳ ಕನಿಷ್ಠ ಸಂಖ್ಯೆಯಾಗಿದೆ.
24ಗಂಟೆಗಳಲ್ಲಿ 26,030 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. 179 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3.29 ಕೋಟಿಗೆ ತಲುಪಿದೆ. ಈವರೆಗೆ ದೇಶಾದ್ಯಂತ ಕೋವಿಡ್ ನಿಂದ 4,47,373 ಮಂದಿ ಸಾವನ್ನಪ್ಪಿದ್ದಾರೆ.
2020ರ ಆಗಸ್ಟ್ 7ರಂದು ಕೋವಿಡ್ ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟಿತ್ತು. ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ, ಸೆಪ್ಟೆಂಬರ್ 16ರಂದು 50 ಲಕ್ಷ ನಂತರ ಡಿಸೆಂಬರ್ 19ರಂದು ಒಂದು ಕೋಟಿಗೆ ತಲುಪಿತ್ತು ಎಂದು ಅಂಕಿಅಂಶದಲ್ಲಿ ತಿಳಿಸಿದೆ.