ಗಂಗಾವತಿ: ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ಭೀತಿ ತಾಲೂಕಿನ ಆನೆಗೊಂದಿ ವಿರೂಪಾಪೂರಗಡ್ಡಿ ಕಿಷ್ಕಿಂದಾ ಪ್ರದೇಶದಲ್ಲೂ ತಡವಾಗಿ ಆವರಿಸಿದೆ.
ಗೋವಾ, ಗೋಕರ್ಣ, ಡಾರ್ಜಿಲಿಂಗ್, ಚೆನ್ನೈ, ಹೈದ್ರಾಬಾದ್, ಮುಂಬೈ ಹೀಗೆ ಅನೇಕ ಸ್ಥಳಗಳಿಂದ ವಿರೂಪಾಪೂರ ಗಡ್ಡಿಗೆ ಬರುವ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ ಜಿಲ್ಲಾಡಳಿತ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಂಡಿಲ್ಲ. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಿ ಬಿಡಲಾಗುತ್ತಿದೆ. ನಂತರ ಅವರಿಗೆ ಸೋಂಕು ತಗುಲುವ ಸಾಧ್ಯತೆ ಇದ್ದು, ಸ್ಥಳೀಯವಾಗಿ ಪುನಃ ತಪಾಸಣೆ ಅಥವಾ ಕೊರೊನಾ ಜ್ವರ ಕುರಿತು ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವೂ ನಡೆದಿಲ್ಲ.
ಪಕ್ಕದ ಬಳ್ಳಾರಿ, ಹಂಪಿ, ಹೊಸಪೇಟೆಯಲ್ಲಿ ಸಮರೋಪಾದಿಯಲ್ಲಿ ಕೊರೊನಾ ಜ್ವರದ ಜಾಗೃತಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಗೋವಾದಿಂದ ಹಂಪಿ ವೀಕ್ಷಣೆಗೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು ವೈದ್ಯಕೀಯ ತಪಾಸಣೆ ನಿರಾಕರಿಸಿದ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಂಪಿ ಸಮೀಪವೇ ವಿರೂಪಾಪೂರಗಡ್ಡಿ, ಸಾಣಾಪೂರ, ಹನುಮನಹಳ್ಳಿ, ಜಂಗ್ಲಿರಂಗಾಪೂರ, ಆನೆಗೊಂದಿ, ಕಿಷ್ಕಿಂದಾ ಅಂಜನಾದ್ರಿ ಬೆಟ್ಟವಿದ್ದು, ಹಂಪಿಗೆ ಆಗಮಿಸಿದ ಬಹುತೇಕ ಪ್ರವಾಸಿಗರು ಆನೆಗೊಂದಿ ಕಿಷ್ಕಿಂದಾಕ್ಕೆ ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೊರೊನಾ ಜ್ವರ ಕುರಿತು ಸ್ಥಳೀಯರಲ್ಲಿ ಕಳವಳ ಉಂಟಾಗಿದೆ.
ಆನೆಗೊಂದಿ, ಕಿಷ್ಕಿಂದಾ ಅಂಜನಾದ್ರಿ ಪ್ರದೇಶಕ್ಕೆ ಪ್ರತಿದಿನ ದೇಶ, ವಿದೇಶದ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ಜ್ವರದ ಸೋಂಕು ಇದ್ದರೆ ಸ್ಥಳೀಯರಿಗೆ ಪಸರಿಸುವ ಸಾಧ್ಯತೆ ಇರುತ್ತದೆ. ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂತಹ ಪ್ರಕರಣ ಬಂದಿಲ್ಲ. ಸರಕಾರ ಈ ಕೇಂದ್ರದಲ್ಲಿ ಮುಂಜಾಗ್ರತೆ ವಹಿಸಲು ಸೂಚನೆ ನೀಡಿದೆ. ಜಾಗೃತಿ ಮಾಡಿಸುವ ಕಾರ್ಯ ಕುರಿತು ಸೂಚನೆ ಕೊಟ್ಟಿಲ್ಲ. ಇಲ್ಲಿಯ ರೆಸಾರ್ಟ್, ಹೊಟೇಲ್‌ಗಳಲ್ಲಿ ತಂಗುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಮೇಲಾಧಿಕಾರಿಗಳಿಗೆ ಪತ್ರ ಬರೆದು ಕೋರಲಾಗುತ್ತದೆ.
-ಡಾ|ಶರಣಪ್ಪ ಚಿಕೋಟಿ, ತಾಲೂಕು ವೈದ್ಯಾಧಿಕಾರಿ.
ಅಕ್ಕಪಕ್ಕದ ಗ್ರಾಮಗಳಿಗೆ ವಿದೇಶಿಗರ ಲಗ್ಗೆ : ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿರೂಪಾಪೂರ ಗಡ್ಡಿಯಲ್ಲಿದ್ದ ರೆಸಾರ್ಟ್‌ಗಳನ್ನು ತೆರವುಗೊಳಿಸಿರುವುದರಿಂದ ದೇಶ-ವಿದೇಶದ ಪ್ರವಾಸಿಗರು ಹತ್ತಿರವಿರುವ ಆನೆಗೊಂದಿ, ಸಾಣಾಪೂರ, ಜಂಗ್ಲಿರಂಗಾಪೂರ, ಹನುಮನಹಳ್ಳಿ ಹಾಗೂ ಕಿಷ್ಕಿಂದಾ ರೆಸಾರ್ಟ್‌ಗಳಿಗೆ ಲಗ್ಗೆ ಇಟ್ಟಿದ್ದು, ಇಲ್ಲಿಯೂ ಕೊರೊನಾ ವೈರಸ್ ಕುರಿತು ಯಾವುದೇ ಸುರಕ್ಷರತಾ ಕ್ರಮ ಕೈಗೊಂಡಿಲ್ಲ. ಪ್ರವಾಸಿಗರು ಸ್ಥಳೀಯ ಹೊಟೇಲ್‌ಗಳಲ್ಲಿ ತಂಗುವುದರಿಂದ ಇಲ್ಲಿ ಕೆಲಸ ಮಾಡುವವರಿಗೆ ಸೋಂಕು ತಗುಲುವ ಕುರಿತು ಆರೋಗ್ಯ ಇಲಾಖೆ ಯಾವುದೇ ಜಾಗೃತಿ ಮೂಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಕೊರೊನಾ ಜ್ವರದ ಬಗ್ಗೆ ಸ್ಥಳೀಯರು ತೀವ್ರ ಆತಂಕಗೊಂಡಿದ್ದಾರೆ.
-ಕೆ. ನಿಂಗಜ್ಜ