ನವದೆಹಲಿ: ಕಳೆದ 24ಗಂಟೆಯಲ್ಲಿ 650ಕ್ಕೂ ಅಧಿಕ ಕೋವಿಡ್ 19 ವೈರಸ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಶುಕ್ರವಾರದ ಬೆಳಗ್ಗೆ ಹೊತ್ತಿಗೆ ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 6,400ಕ್ಕೆ ಏರಿದೆ. ಸಾವಿನ ಸಂಖ್ಯೆ 200ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ 6,412 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಈವರೆಗೆ 504 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ತಿಳಿಸಿದೆ.
ಇದು ಶುಕ್ರವಾರ ಬೆಳಗ್ಗಿನ 9ಗಂಟೆವರೆಗಿನ ಅಂಕಿಅಂಶವಾಗಿದೆ ಎಂದಿರುವ ಕೇಂದ್ರ ಸಚಿವಾಲಯ, ಕಳೆದ 24ಗಂಟೆಯಲ್ಲಿ 550 ಕೋವಿಡ್ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 30 ಸಾವು ಸಂಭವಿಸಿದೆ. ಗುರುವಾರ ಬೆಳಗ್ಗೆ ಕೋವಿಡ್ ಸೋಂಕಿತರ ಸಂಖ್ಯೆ 5,734ಕ್ಕೆ ತಲುಪಿತ್ತು ಎಂದು ವರದಿ ಹೇಳಿದೆ.
ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕಿತರಿದ್ದು, ಒಟ್ಟು 1,364 ಮಂದಿಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನಲ್ಲಿ 834 ಮಂದಿಗೆ, ದಿಲ್ಲಿಯಲ್ಲಿ 720 ಹಾಗೂ ತೆಲಂಗಾಣದಲ್ಲಿ 442 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ವರದಿ ವಿವರಿಸಿದೆ.
ಉತ್ತರಪ್ರದೇಶದಲ್ಲಿ ಕೋವಿಡ್ 19 ಹಾಟ್ ಸ್ಪಾಟ್ ಗಳನ್ನು ಸೀಲ್ಡ್ ಮಾಡಿದೆ. ಉತ್ತರಪ್ರದೇಶದಲ್ಲಿ ಈವರೆಗೆ 410 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 357 ಹಾಗೂ ಆಂಧ್ರಪ್ರದೇಶದಲ್ಲಿ 348 ಪ್ರಕರಣ ಪತ್ತೆಯಾಗಿದೆ.