Advertisement
ಸಮಾಧಾನದ ಸಂಗತಿಯೆಂದರೆ ಕರ್ನಾಟಕದ ಉಡುಪಿ, ಕೊಡಗು, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳೂ ಈ ಪಟ್ಟಿಯಲ್ಲಿ ಸೇರಿವೆ. ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯವೇ ಈ ಮಾಹಿತಿ ನೀಡಿದ್ದು, 14 ದಿನಗಳಲ್ಲಿ ಕೋವಿಡ್ 19 ಪತ್ತೆಯಾಗದ 25 ಜಿಲ್ಲೆಗಳು ಯಾವುವು ಎಂಬ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ಲಾಕ್‌ಡೌನ್ ಆರಂಭದ ದಿನಗಳಲ್ಲಿ ಕೇರಳದಲ್ಲಿ ದಿನೇ ದಿನೆ ಭಾರೀ ಮಟ್ಟದಲ್ಲಿ ಪ್ರಕರಣಗಳು ಕಂಡು ಬಂದಿದ್ದವು. ಆದರೆ ಜನರಲ್ಲಿ ಪ್ರಜ್ಞೆ ಮೂಡಿಸಿದ ಅನಂತರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಬಂದಿತು. ವಿಶೇಷ ಎಂದರೆ, ಒಂದು ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದ ಕೇರಳ ಈಗ 16ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಸದ್ಯ ಕೇರಳದಲ್ಲಿ 376 ಕೇಸುಗಳು ಕಂಡು ಬಂದಿದ್ದು, ಇದರಲ್ಲಿ 179 ಮಂದಿ ಚೇತರಿಸಿಕೊಂಡಿದ್ದಾರೆ.
Related Articles
ಕೇರಳವಷ್ಟೇ ಅಲ್ಲ, ಕರ್ನಾಟಕದಲ್ಲೂ ಲಾಕ್‌ಡೌನ್ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇಲ್ಲೂ ಕೂಡ ಲಾಕ್‌ಡೌನ್ ಆರಂಭದಲ್ಲಿ ಇಡೀ ದೇಶಕ್ಕೇ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ, ಈಗ 15ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದೂ ಕೂಡ ಜನರ ಪಾಲಿಗೆ ಸಮಾಧಾನಕರ ಸುದ್ದಿ. ಸದ್ಯ ರಾಜ್ಯದಲ್ಲಿ 247 ಕೇಸುಗಳು ದೃಢಪಟ್ಟಿದ್ದು, 59 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಅಷ್ಟೇ ಅಲ್ಲ, ಲಾಕ್‌ಡೌನ್ ಆರಂಭದಲ್ಲಿ ರಾಜ್ಯದಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ಡಬಲ್ ಆಗುತ್ತಿತ್ತು. ಆದರೆ ಈಗ 12 ದಿನಗಳಿಗೊಮ್ಮೆ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.
Advertisement
ದಿಲ್ಲಿ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಪ್ರಕರಣದೇಶಾದ್ಯಂತ ಲಾಕ್‌ಡೌನ್ ಪರಿಣಾಮಕಾರಿಯಾಗಿ ಕೆಲಸ ಮಾಡಿದರೂ ಮಹಾರಾಷ್ಟ್ರ, ದಿಲ್ಲಿ ಮತ್ತು ತಮಿಳುನಾಡಿನಲ್ಲಿ ಮಾತ್ರ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಇಲ್ಲಿ ದಿನದಿಂದ ದಿನಕ್ಕೆ ಕೇಸುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಈ ಮೂರು ರಾಜ್ಯಗಳೂ ಕೇಸಿನ ಲೆಕ್ಕಾಚಾರದಲ್ಲಿ 1000 ಮೀರಿವೆ. ಲಾಕ್‌ಡೌನ್ ಎರಡನೇ ಹಂತ:ಇಂದು ಮೋದಿ ನಿರ್ಧಾರ
ದೇಶಾದ್ಯಂತ ಘೋಷಣೆಯಾಗಿದ್ದ 21 ದಿನಗಳ ಲಾಕ್‌ಡೌನ್ ಮಂಗಳವಾರಕ್ಕೆ ಅಂತ್ಯವಾಗಲಿದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂಬಂಧ ಮೋದಿ ಅವರೇ ತಮ್ಮ ಟ್ವಿಟರ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ. ಈಗಾಗಲೇ ಸಿಕ್ಕಿರುವ ಸುಳಿವಿನಂತೆ ಮೋದಿ ಅವರು, ಎರಡನೇ ಹಂತದ ಲಾಕ್‌ಡೌನ್ ಘೋಷಿಸಲಿದ್ದಾರೆ. ಆದರೆ ಈ ಲಾಕ್‌ಡೌನ್‌ನಲ್ಲಿ ಕೆಲವೊಂದು ರಿಯಾಯಿತಿ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.ಕೃಷಿಕರು, ಕಾರ್ಮಿಕರು ಹಾಗೂ ದೇಶದ ಜನರನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ವಿಸ್ತರಿತ ಲಾಕ್‌ಡೌನ್ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾಷಣದಲ್ಲಿ ಏನಿರಬಹುದು?
1. ರಾಜ್ಯಗಳ ಬೇಡಿಕೆಯಂತೆ ಇನ್ನೆರಡು ವಾರ ಲಾಕ್‌ಡೌನ್ ವಿಸ್ತರಣೆ
2. ನಿಂತಿರುವ ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಹೊಸ ಮಾರ್ಗ
3. ಆರ್ಥಿಕ ಚಟುವಟಿಕೆಗಳಿಗಾಗಿ ಕೆಲವು ಕಡೆಗಳಲ್ಲಿ ಕೊಂಚ ಸಡಿಲ
4. ಸುರಕ್ಷತಾ ಮಾರ್ಗಗಳ ಜತೆಯಲ್ಲಿ ಕೆಲವು ಕೈಗಾರಿಕೆಗಳಿಗೆ ಅನುಮತಿ
5. ಸೋಂಕಿತರ ಆಧಾರದ ಮೇಲೆ ಕೆಂಪು, ನೇರಳೆ ಮತ್ತು ಹಸಿರು ವಲಯಗಳಾಗಿ ವಿಂಗಡಣೆ
6. ನೇರಳೆ ಮತ್ತು ಹಸಿರು ವಲಯಗಳಲ್ಲಿ ಕೊಂಚ ರಿಯಾಯಿತಿ ನೀಡುವ ಸಾಧ್ಯತೆ
7. ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ನೀಡುವ ಸಂಭವ
8. ಆರ್ಥಿಕ ಉತ್ತೇಜನಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ