Advertisement

ಬಡಾವಣೆ ಅಭಿವೃದ್ಧಿಗೆ ಕೋವಿಡ್‌ 19 ಅಡ್ಡಿ!

06:25 AM Jul 07, 2020 | Lakshmi GovindaRaj |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಭೂಸ್ವಾಧೀನ, ಹಣದ ಸಮಸ್ಯೆ ನಡುವೆ ಇದೀಗ ಕೋವಿಡ್‌ 19 ಹಾವಳಿ ಅಡ್ಡಿಯಾಗಿದ್ದು, ಫ‌ಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ನಿವೇಶನ ಹಂಚಿಕೆ  ಅನುಮಾನವಾಗಿದೆ. 2021ರ ಡಿಸೆಂಬರ್‌ ವೇಳೆಗೆ ಉದ್ದೇಶಿತ ಬಡಾವಣೆ ಅಭಿವೃದ್ಧಿಪಡಿಸಿ ಅರ್ಹ ಫ‌ಲಾನುಭವಿಗಳಿಗೆ ಹಂಚಿಕೆ ಮಾಡುವ ಗುರಿ ಬಿಡಿಎ ಮುಂದಿದೆ.

Advertisement

ಆದರೆ, ಲಾಕ್‌ ಡೌನ್‌, ಕಾರ್ಮಿಕರ ಕೊರತೆ, ಗುತ್ತಿಗೆದಾರರಿಗೆ ಬಾಕಿ ಹಣ  ಪಾವತಿ ಆಗದಿರುವುದರಿಂದ ವಿಳಂಬವಾಗುತ್ತಿದೆ. ಬಹುತೇಕರು ಬ್ಯಾಂಕುಗಳಲ್ಲಿ ಸಾಲ ಮಾಡಿ ನಿವೇಶನ ನೋಂದಣಿ ಮಾಡಿಕೊಂಡಿದ್ದು, ಮೂರು ವರ್ಷವಾದರೂ ಮನೆ ನಿರ್ಮಿಸಿಲ್ಲ. ಈ ಪೈಕಿ ಹಣ ನೀಡಿದ ಶೇ. 60ರಷ್ಟು  ನಿವೇಶನದಾರರಿಗೆ ಹಕ್ಕುಪತ್ರ ನೀಡಲಾಗಿದ್ದು, ಉಳಿದವರೆಲ್ಲಾ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಬಡಾವಣೆಯ ಕೆಲವು ಕಡೆ ಚರಂಡಿ, ರಸ್ತೆ, ಉದ್ಯಾನ, ಮೈದಾನ, ಮಳೆ ನೀರುಗಾಲುವೆ, ತ್ಯಾಜ್ಯನೀರು ಸಂಸ್ಕರಣಾ ಘಟಕ, ಕೆರೆಗಳ ಅಭಿವೃದ್ಧಿ, ಸಸಿ  ನೆಡುವುದು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಜಲ್ಲಿ, ಕಬ್ಬಿಣ ಸೇರಿ ಅಗತ್ಯ ವಸ್ತುಗಳ ಪೂರೈಕೆ ಇದೆ. ಆದರೆ, ಕಾರ್ಮಿಕರಿಲ್ಲದ್ದರಿಂದ ಸಮಸ್ಯೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಗ್ಗಂಟಾದ ಭೂಸ್ವಾಧೀನ ಪ್ರಕ್ರಿಯೆ: ಪ್ರಾಧಿಕಾರಕ್ಕೆ ಭೂಸ್ವಾಧೀನ ಪ್ರಕ್ರಿಯೆಯು ಕಗ್ಗಂಟಾಗಿದೆ. ಉದ್ದೇಶಿತ ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ಶೇ. 70ರಷ್ಟು ಭೂಮಿ ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಬಿಡಿಎ ವಿಳಂಬ  ಧೋರಣೆಯಿಂದ ಉಳಿದ ರೈತರು ಭೂಮಿ ನೀಡಲು ನಿರಾಕರಿಸುತ್ತಿ¨ªಾರೆ. ಕೆಲ ನಿವೇಶನಗಳಿಗೆ ಅಗತ್ಯ ಇರುವ ರಸ್ತೆಗಳಿಗೆ ಇನ್ನೂ ಭೂಸ್ವಾಧೀನ ಆಗಿಲ್ಲ.

ಕೆಲ ರೈತರು ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ರಸ್ತೆ ಅಭಿವೃದ್ಧಿ ನನೆಗುದಿಗೆ: ಈ  ಮಧ್ಯೆ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸೇರುವ ಆರು ಪಥದ ರಸ್ತೆಯು ನನೆಗುದಿಗೆ ಬಿದ್ದಿದೆ. ಸುಮಾರು 10 ಕಿ.ಮೀ. ಉದ್ದದ ಈ ರಸ್ತೆ ನಿರ್ಮಾಣವಾದರೆ, ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಆದರೆ, ಸದ್ಯಕ್ಕೆ ರಸ್ತೆ ಕಾಮಗಾರಿಗೆ  ಭೂಸ್ವಾಧೀನ ಕಗ್ಗಂಟಾಗಿದೆ.

Advertisement

ವೆಬ್‌ಸೈಟ್‌ನಲ್ಲಿ ಮ್ಯಾಪ್‌ ಹಾಕಿಲ್ಲ: ನಾಡಪ್ರಭು ಕೆಂಪೇಗೌಡ ಬಡಾವಣೆಯ ನಕ್ಷೆಯನ್ನು ಈವರೆಗೂ ಬಿಡಿಎ ವೆಬ್‌ಸೈಟ್‌ನಲ್ಲಿ ಹಾಕಿಲ್ಲ. ಮೈದಾನ, ಉದ್ಯಾನಗಳ ಜಾಗದಲ್ಲಿ ನಿವೇಶನ ನಿರ್ಮಿಸಲಾಗುತ್ತಿದ್ದು, ಇದರಿಂದಾಗಿ ನಕ್ಷೆಯನ್ನು  ಪರಿಷ್ಕರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಕ್ಕಾಗಿ ಹಣ ನೀಡಿ ವರ್ಷಗಳೇ ಕಳೆದಿವೆ. ಈವರೆಗೂ ನಿವೇಶನದ ನಕ್ಷೆ ನೀಡಿಲ್ಲ. ಮೂಲಸೌಕರ್ಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ನಿಗದಿಪಡಿಸಿದ ಅವಧಿಯೊಳಗೆ ನಿವೇಶನ  ದೊರೆಯುವುದು ಅನುಮಾನವಾಗಿದೆ. ನಿವೇಶನದಾರರ ಹಣದಲ್ಲೇ ಕಾಮಗಾರಿ ನಡೆಸಿದ್ದರೆ, ಈ ವೇಳಗೆ ಕೆಲಸ ಮುಗಿಯುತ್ತಿತ್ತು. 
-ಅಶೋಕ, ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದವರು.

ಬಿಡಿಎ ಗುತ್ತಿಗೆದಾರರಿಗೆ ಹಣ ಬಾಕಿ ಉಳಿಸಿಕೊಂಡಿದ್ದು, ಕಾಮಗಾರಿಗಳು ನಿರೀಕ್ಷಿಸಿದಂತೆ ನಡೆಯುತ್ತಿಲ್ಲ. ನಿವೇಶನಕ್ಕಾಗಿ ಹಲವರು ಹಣ ನೀಡಿದ್ದು, ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಆಗುತ್ತಿಲ್ಲ.
-ಎನ್‌. ಶ್ರೀಧರ್‌, ಕೆಂಪೇಗೌಡ ಬಡಾವಣೆಯ ಮುಕ್ತ ವೇದಿಕೆ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next