Advertisement

ಹಾಟ್‌ಸ್ಪಾಟ್‌ಗಳಾಗಿವೆ ಸ್ವೀಡನ್‌ ವೃದ್ಧಾಶ್ರಮ

11:05 AM May 12, 2020 | sudhir |

ಸ್ಟಾಕ್‌ಹೋಮ್‌ : ಈ ಹಿಂದೆ ಲಂಡನ್‌ನ ವೃದ್ಧಾಶ್ರಾಮಗಳು ಕೋವಿಡ್‌-19 ಹಾಟ್‌ಸ್ಪಾಟ್‌ಗಳಾಗಿ ಗುರುತಿಸಿಕೊಂಡು ನಿತ್ಯ ಹತ್ತಾರು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ವರದಿಗಳು ಸರಣಿಯಾಗಿ ಪ್ರಕಟವಾಗಿದ್ದವು. ಅದನ್ನು ನೋಡಿಯೂ ಸ್ವೀಡನ್‌ ಎಚ್ಚೆತ್ತುಕೊಂಡಿಲ್ಲ.ದೇಶದ ವೃದ್ಧಾಶ್ರಮಗಳಲ್ಲಿರುವ ಅರ್ಧದಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ದಿ ಲೋಕಲ್‌ ಪತ್ರಿಕೆ ವರದಿ ಮಾಡಿದೆ.

Advertisement

ಸುರಕ್ಷತೆ ಮರೆತ ಸಿಬಂದಿಗಳು
ಸ್ಟಾಕ್‌ಹೋಮ್‌ ವೃದ್ಧಾಶ್ರಮದಲ್ಲಿ ಈಗಾಗಲೇ ಓರ್ವ ವೃದ್ಧೆ ನಿಧನರಾಗಿದ್ದು, ಆಕೆ ಇದ್ದ ವಿಭಾಗದಲ್ಲಿ ಎಂಟು ಜನರ ಪೈಕಿ ಐವರಲ್ಲಿ ಸೋಂಕು ಪತ್ತೆಯಾಗಿತ್ತು. ಆದರೂ ಆಕೆಯನ್ನು ಅವರ ಮಧ್ಯೆಯೇ ಶುಶ್ರೂಷೆ ಮಾಡಲಾಗಿತ್ತು. ಅಲ್ಲಿನ ಸಿಬಂದಿಗೆ ತಮ್ಮ ಆರೈಕೆ ಗೃಹದಲ್ಲಿರುವ ವೃದ್ಧರನ್ನು ನೋಡಿಕೊಳ್ಳಲು ಸಮಯವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ತನ್ನ ತಾಯಿಯನ್ನು ಕಳೆದುಕೊಂಡ ಪುತ್ರಿ ವೃದ್ಧಾಶ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆ ವೃದ್ಧೆ ಮೃತಪಟ್ಟ ನಂತರ ಆಕೆಯ ಸೋಂಕು ಪರೀಕ್ಷಾ ವರದಿ ನೆಗೆಟಿವ್‌ ಎಂದು ಬಂದಿದ್ದು, ಸುರಕ್ಷ ಕ್ರಮಗಳನ್ನು ಕಡೆಗಣಿಸಿದ ಸಿಬಂದಿಗಳ ಬೇಜವಾಬ್ದಾರಿ ಇಂತಹ ಘಟನೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಇಲ್ಲಿನ ವೃದ್ಧಾಶ್ರಮಗಳಲ್ಲಿರುವ ಮೂರನೇ ಒಂದು ಭಾಗದಷ್ಟು ವೃದ್ಧರು ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಹಿರಿಯರ ರ ಆರೋಗ್ಯ ಕಾಪಾಡುವಲ್ಲಿ ಸರಕಾರ ತೋರಿಸುತ್ತಿರುವ ನಿರ್ಲಕ್ಷ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವೃದ್ಧರನ್ನು ಸೋಂಕಿನ ಹಾವಳಿಯಿಂದ ಕಾಪಾಡಲು ಸಾಧ್ಯವಾಗಿಲ್ಲ ಎಂದು ಅಲ್ಲಿನ ಸರಕಾರ ಕೊನೆಗೂ ಒಪ್ಪಿಕೊಂಡಿದೆ.

ಯಾವುದೇ ರಕ್ಷಣಾ ಕ್ರಮಗಳನ್ನು ಪಾಲಿಸದೆ ವೃದ್ಧರ ಆರೈಕೆ ವೃದ್ಧಾಶ್ರಮಗಳ ಸಿಬಂದಿಗಳು ಕೆಲಸ ಮಾಡುತ್ತಿದ್ದಾರೆ. ಪರಿಣಾಮ ವೃದ್ಧಾಶ್ರಮಗಳ ಅರ್ಧದಷ್ಟು ಜನರು ಕೋವಿಡ್‌-19 ಸೋಂಕಿಗೆ ತುತ್ತಾಗಿದ್ದಾರೆ ಎಂದು ಸ್ವೀಡಿಷ್‌ ಮಾಧ್ಯಮಗಳು ವರದಿ ಮಾಡಿವೆ.

ಸೋಂಕಿನ ನಡುವೆ ಕೆಲಸಕ್ಕೆ ಹಾಜರು
ವೃದ್ಧಾಶ್ರಮಗಳ ಕೆಲಸಗಾರರು ರಜೆ ಪಡೆದು ಕ್ವಾರಂಟೈನ್‌ ಆಗಲು ನಿರಕಾರಿಸುತ್ತಿದ್ದಾರೆ. ಜತೆಗೆ ಕೆಲವು ಸಿಬಂದಿಗಳಲ್ಲಿ ಸೋಂಕಿನ ಲಕ್ಷಣಗಳಿದ್ದರೂ ಅವರನ್ನು ಕೆಲಸಕ್ಕೆ ಬರುವಂತೆ ಮನವೊಲಿಸಲಾಗುತ್ತಿದೆ. ಇದು ಸೋಂಕು ವೇಗವಾಗಿ ಪಸರಿಸಲು ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಎಪ್ರಿಲ್‌ 28 ವರೆಗೆ ದಾಖಲಾದ ಸಾವಿನ ಪ್ರಕರಣಗಳ ಪೈಕಿ ಶೇ.90ರಷ್ಟು ಮಂದಿ 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅರ್ಧದಷ್ಟು ಜನರು ವೃದ್ಧಾಶ್ರಮಗಳ ನಿವಾಸಿಗಳಾಗಿದ್ದರೆ ಮತ್ತು ಕಾಲಾಂಶದಷ್ಟು ಜನರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು ಎಂದು ಸ್ವೀಡಿಷ್‌ ಆರೋಗ್ಯ ಮತ್ತು ಕಲ್ಯಾಣ ಕೇಂದ್ರದ ಅಂಕಿ ಅಂಶಗಳು ದೃಢಪಡಿಸಿವೆ. ಇನ್ನು ಈ ಕುರಿತು ಆರೋಗ್ಯ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವ ಲೆನಾ ಹಾಲೆಂಗ್ರೆನ್‌ ಇತ್ತೀಚೆಗೆ ಸ್ವೀಡಿಷ್‌ ಟೆಲಿವಿಷನ್‌ ನಡೆಸಿದ ಸಂದರ್ಶನ ವೊಂದರಲ್ಲಿ ಬಹಿರಂಗ ವಾಗಿ ಈ ಬೆಳವ ಣಿಗೆಯ ಕುರಿತು ಹೇಳಿಕೆ ನೀಡಿದ್ದು, ದೇಶದಲ್ಲಿರುವ ವಯೋವೃದ್ಧರನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿರುವುದು ನಿಜಕ್ಕೂ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಒಟ್ಟಾರೆಯಾಗಿ ಇದು ಸಮಾಜದ ಹಿನ್ನಡೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next